Saturday 13 January 2018

ಗಮಕ ಶಾರದೆಯ ಉಪಾಸಕ
ರಾಜಾರಾಮಮೂರ್ತಿ


ನಾಡಿನ ಸಂಸ್ಕೃತಿಯ ಪ್ರತೀಕವೇ ಕಲೆ ಎಂಬ ಮಾತಿದೆ. ಜೊತೆಗೆ, ಕಲೆಯು ಜೀವನ ದರ್ಶನ ಹಾಗೂ ಆತ್ಮದರ್ಶನ ಮಾಡಿಸುವುದು ಎಂದು ಕಲಾಭಿಜ್ಞರು ಹೇಳುತ್ತಾರೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಪರಿಶ್ರಮ ತೋರುತ್ತಿರುವವರು ಸಾಕಷ್ಟು ಜನರಿದ್ದಾರೆ. ಇವರಿಗೆ ಕಲೋಪಾಸನೆಯೇ ಜೀವನ. ಇಂತಹ ಅನನ್ಯ ಕಲಾಸೇವಕ ಸರಳ, ಸಜ್ಜನ ರಾಜಾರಾಮ ಮೂರ್ತಿ ಹೊಸಹಳ್ಳಿಯ.
ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗಮಕ ಗ್ರಾಮೆಂಬ ಹೆಸರಿಗೆ ಪಾತ್ರವಾಗಿದೆ. ಈ ಗ್ರಾಮದಲ್ಲಿ ಗಮಕವನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯುವತ್ತ ಅಪಾರ ಶ್ರಮ ವಹಿಸುತ್ತಿರುವ ಮೂರ್ತಿಯವರು, ಗಮಕವನ್ನು ತಪಸ್ಸಿನೋಪಾದಿಯಲ್ಲಿ ಗಳಿಸಿಕೊಂಡಿದ್ದಾರೆ. 65ರ ಹರಯದಲ್ಲೂ ಅವರ ಕರ್ತವ್ಯಪರತೆ, ಕಲೆ ಬೆಳೆಸುವ ಮತ್ತು ಉಳಿಸುವ ಕಳಕಳಿ ಎಂತಹವರನ್ನೂ ಸೆಳೆಯುತ್ತದೆ. ಇವರ ಈ ಅನುಪಮ ಕಲಾಸೇವೆ ಗಮನಿಸಿ  ಚಂದನವಾಹಿನಿ 2016ನೆಯ ಸಾಲಿನ ಚಂದನ ಪ್ರಶಸ್ತಿ ನೀಡಿ ಗೌರವಿಸಿದೆ.
  ಹಿರಿಯ ವ್ಯಾಖ್ಯಾನಕಾರರೂ ಸಂಕೇತಿ ಸಂಗಮ, ಗಮಕಸಂಪದ ಪತ್ರಿಕೆಗಳ ಸಂಪಾದಕರೂ ಆದ ರಾಜಾರಾಮಮೂರ್ತಿ, ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದ ಸಮರ್ಥ ಗಮಕ ವ್ಯಾಖ್ಯಾನಕಾರರಾಗಿ ನಾಡಿನೆಲ್ಲೆಡೆ ಸಾವಿರಾರು ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯರಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತ ಕಾವ್ಯಗಳನ್ನು ನಿರರ್ಗಳವಾಗಿ ವ್ಯಾಖ್ಯಾನಿಸಬಲ್ಲರು. ಗಮಕ ಕಲೆಯ ವಿಷಯದಲ್ಲಿ ಇದಮಿತ್ಥಂ ಎಂದು ಹೇಳಬಲ್ಲ ಕೆಲವೇ ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ. ಅವರೊಬ್ಬ ನುರಿತ ವ್ಯಾಖ್ಯಾನಕಾರರಾಗಿರುವಂತೆಯೇ ಒಬ್ಬ ಸಮರ್ಥ ಸಂಘಟಕರೂ ಆಗಿದ್ದಾರೆ.
 ಹೊಸಹಳ್ಳಿಯ ಗಮಕಕಲಾ ಪರಿಷತ್ತಿನ ಸ್ಥಾಪಕ ಕಾರ್ಯದರ್ಶಿಯಾಗಿ, ಸಂಚಾಲಕರಾಗಿ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ಪ್ರತಿವರ್ಷ ಗಮಕ ಸಪ್ತಾಹದ ಆಯೋಜನೆ, ಹಿರಿಯ ಗಮಕಿಗಳೊಬ್ಬರ ಸನ್ಮಾನ, ಅಹೋರಾತ್ರಿ ಗಮಕ ಕಾರ್ಯಕ್ರಮಗಳ ಆಯೋಜನೆ,  ಹಿರಿಯ ಕಲಾವಿದರ ವಾಚನ-ವ್ಯಾಖ್ಯಾನ ಧ್ವನಿಮುದ್ರಿತ ಸಿ.ಡಿ.ಗಳ ಬಿಡುಗಡೆ ಇಂತಹ ವಿಶಿಷ್ಟ ಕಾರ್ಯಕ್ರಮಗಳನ್ನು 38 ವರ್ಷಗಳಿಂದ ಮಾಡಿಕೊಂಡು ಪರಿಷತ್ ಬಂದಿದೆ.  ಈ ಹೆಮ್ಮೆಯ ಕಾರ್ಯಕ್ರಮಗಳ ಪ್ರಮುಖ ರೂವಾರಿಗಳಲ್ಲಿ ರಾಜಾರಾಮಮೂರ್ತಿ ಅವರೂ ಒಬ್ಬರು.
ಕಲೆ ನಿಂತ ನೀರಾಗಬಾರದು. ಅದು ಆತ್ಮದರ್ಶನ ಮಾಡಿಸಬೇಕು. ಹೆಚ್ಚು ಸಂಶೋಧನೆಗೆ ಒಳಪಡಬೇಕು. ಆಗ ಮಾತ್ರ ಅದರ ವ್ಯಾಪ್ತಿ ಹೆಚ್ಚುತ್ತದೆ. ಹೆಚ್ಚು  ಪ್ರಸಿದ್ಧಿ ಪಡೆಯುತ್ತದೆ  ಎನ್ನುವ ಅವರು,  ಕರ್ನಾಟಕ ಗಮಕಕಲಾ ಪರಿಷತ್‌ನೊಂದಿಗೂ  ಬಹು ಸಕ್ರಿಯ ಒಡನಾಟ ಇಟ್ಟುಕೊಂಡಿದ್ದಾರೆ. ಹಲವು ವರ್ಷಗಳ ಕಾಲ ಈ ಕೇಂದ್ರ ಪರಿಷತ್ತಿನ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ. ಆ ಸಮಯಗಳಲ್ಲಿ ಪರಿಷತ್ತಿನ ಸದಸ್ಯತ್ವವನ್ನು ವರ್ಧಿಸಿದುದು, ಅನೇಕ ದತ್ತಿನಿಧಿಗಳನ್ನು ಸಂಗ್ರಹಿಸಿರುವುದು ಗಮಕದ ಬಗ್ಗೆ ಇವರಿಗಿರುವ ಶ್ರದ್ಧೆ ಹಾಗೂ ಅಭಿಮಾನಗಳ ಸಂಕೇತವಾಗಿದೆ.
 1997ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ 4ನೆಯ ಗಮಕ ಸಮ್ಮೇಳನದ ಸ್ವಾಗತಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಿದ ಕೀರ್ತಿ ಇವರದ್ದು. 12 ವರ್ಷಗಳಿಂದ ಸಂಪಾದಕರಾಗಿ ಗಮಕಸಂಪದ ಮಾಸಪತ್ರಿಕೆಯನ್ನು ಹೊರತರುತ್ತಿರುವುದು ಒಂದು ಸಾಹಸವೇ ಸರಿ. ಗಮಕಕಲೆಗೆ ಮೀಸಲಾದಂತಹ ಇಂತಹ ಮತ್ತೊಂದು ಪತ್ರಿಕೆ ಇಲ್ಲ ಎಂಬುದು ಇದರ ಹಿರಿಮೆ-ಗರಿಮೆಗಳನ್ನು ತೋರಿಸುತ್ತದೆ. 
ಕಲೋಪಾಸಕರಾದ ಇವರು, ನಾಡಿನಲ್ಲೆಡೆ ಇರುವ ಗಮಕ ಕಲಾವಿದರನ್ನು, ಕಲಾಪೋಷಕರನ್ನು, ಕಲಾಪ್ರತಿಭೆಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಕರ್ನಾಟಕಕ್ಕೆ ವಿಶಿಷ್ಟವಾದ ಈ ಕಲೆಯ ಕೈಂಕರ್ಯವನ್ನು ಎಡೆಬಿಡದೆ ನಡೆಸಿಕೊಂಡು ಬರುತ್ತಿದ್ದಾರೆ.
  ಹೀಗೆ ಬಹುಕೈಗಳಿಂದ ಗಮಕ ಶಾರದೆಯ ಪೂಜೆಯನ್ನು ಮಾಡುತ್ತಿರುವ ಇವರಿಗೆ ಹಲವಾರು ಪ್ರಶಸ್ತಿ, ಗೌರವಗಳು ಸಂದಿವೆ. ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ಕುಮಾರವ್ಯಾಸ ಪ್ರಶಸ್ತಿ ಸಮಿತಿಯ ಅಧ್ಯಕ್ಷರಾಗಿ 2009ರಲ್ಲಿ ಕಾರ್ಯನಿರ್ವಹಿಸಿದ್ದಾರೆ. ಎಂ.ಎ. ಕನ್ನಡ ಓದಿರುವ ಇವರು ‘ವೈಖರೀ’  ಎಂಬ ಹೆಸರಿನಲ್ಲಿ ಹೊಸಹಳ್ಳಿಯಲ್ಲಿ  ಮುದ್ರಕರಾಗಿ, ಪ್ರಕಾಶಕರಾಗಿ ಕೆಲಸ ನಿರ್ವಹಿಸುತ್ತ, ನಾಡಿನಾದ್ಯಂತ ಸಂಚರಿಸಿ ಗಮಕಕಲೆಯನ್ನು ಪೋಷಿಸುವ ವ್ರತ ಕೈಗೊಂಡಿದ್ದಾರೆ.   
17.12.16
......................................

No comments:

Post a Comment