Monday 8 January 2018


ಕರಾಟೆ ಕಂಪು ಬೀರುತ್ತಿರುವ
ಎಸ್.ಎಲ್. ವಿನೋದ್

 
ಕರಾಟೆಯನ್ನು ಕ್ರೀಡೆ ಎಂದು ಪರಿಗಣಿಸಲಾಗಿದೆ. ಆದರೆ ಇದರಂತಹ ಕಠಿಣ ಕ್ರೀಡೆ ಇನ್ನೊಂದಿಲ್ಲ. ಉಳಿದ ಕ್ರೀಡೆಗಳಿಗೆ  ದೈಹಿಕ ಸಾಮರ್ಥ್ಯ ಮತ್ತು ಚತುರತೆ ಇದ್ದರೆ ಸಾಕು. ಕರಾಟೆಗೆ ಮಾತ್ರ ಭಾರಿ ಧೈರ್ಯ ಬೇಕು. ಏಕೆಂದರೆ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಅಪಾಯ ಕಟ್ಟಿಟ್ಟದ್ದು. ಇಂತಹ ಆತ್ಮರಕ್ಷಣೆ ಮತ್ತು ಆತ್ಮಸ್ಥೈರ್ಯ ಹೆಚ್ಚಿಸುವ ಕರಾಟೆಯನ್ನು ಕಲಿತು ನಗರದಲ್ಲಿ ಕರಾಟೆ ಮಾಸ್ಟರ್ ಆಗಿರುವ ಎಸ್. ಎಲ್. ವಿನೋದ್ ಇತ್ತೀಚೆಗಷ್ಟೇ ಕಠ್ಮಂಡುವಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ  ದ್ವಿತೀಯ ಪ್ರಶಸ್ತಿ ಗೆದ್ದಿದ್ದಾರೆ. ಈಗ ನಗರಕ್ಕೆ ವಿಶ್ವ ಕರಾಟೆ ಚಾಂಪಿಯನ್ ಇರಾನ್‌ನ ಮೆಹ್ರಾನ್ ಅಬ್ದುಲ್ ಎನ್ನುವವರನ್ನು ಕರೆಯಿಸಿ ಜೂನ್  25 ಮತ್ತು 26ರಂದು ಸ್ವಯಂ ರಕ್ಷಣೆಯ ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ವಿದೇಶಿ  ಕರಾಟೆಪಟುವೊಬ್ಬರು ನಗರಕ್ಕಾಗಮಿಸುತ್ತಿರುವುದು ಶಿವಮೊಗ್ಗದ ಇತಿಹಾಸದಲ್ಲಿ ಇದೇ ಮೊದಲು. 
ವಿನೋದ್ ಸಾಧನೆ ಅಷ್ಟಿಷ್ಟಲ್ಲ. ಕರಾಟೆ ಅಸೋಸಿಯೇಶನ್ ಆಫ್ ಇಂಡಿಯಾದಿಂದ ಕರಾಟೆ ತೀರ್ಪುಗಾರರಾಗಿ ಈ ವರ್ಷದ ಆರಂಭದಲ್ಲಿ ಅರ್ಹತೆ ಗಳಿಸಿದ್ದಾರೆ. ವಿಶ್ವ ಕರಾಟೆ ಒಕ್ಕೂಟದಿಂದ ನಡೆಸಲ್ಪಡುವ ಡಾನ್ ಬ್ಲ್ಯಾಕ್ ಬೆಲ್ಟ್ ಆಗಿರುವ ನಗರದ ಏಕೈಕ ವ್ಯಕ್ತಿಯಾಗಿದ್ದಾರೆ. ಗಾಜನೂರಿನ ಮತ್ತು ಚನ್ನಗಿರಿಯ ನವೋದಯ ಶಾಲೆಗೆ ಕರಾಟೆ ಹೇಳಿಕೊಡಲು ನಿಯೋಜಿತರಾಗಿದ್ದಾರೆ. ಜೊತೆಗೆ 12 ಖಾಸಗಿ ಶಾಲೆಗಳಲ್ಲೂ ಕರಾಟೆ ಕಲಿಸುತ್ತಿದ್ದಾರೆ.  ಜಿಲ್ಲಾ ಕರಾಟೆ ಸಂಘವನ್ನು ಸ್ಥಾಪಿಸಿದ ಕೀರ್ತಿ ಸಹ ಇವರದ್ದು. 5 ವರ್ಷದ ಹಿಂದೆ ಸುಮಾರು 15 ಕರಾಟೆಪಟುಗಳನ್ನು ಮತ್ತು ಆಸಕ್ತರನ್ನು ಸೇರಿಸಿ ಸಂಘ ಸ್ಥಾಪಿಸಿ, ಅದರಡಿಯಲ್ಲಿ 2 ಬಾರಿ ರಾಜ್ಯ ಚಾಂಪಿಯನ್ ಶಿಪ್ ಮತ್ತು ಒಮ್ಮೆ ದಕ್ಷಿಣ ಭಾರತ ಚಾಂಪಿಯನ್‌ಶಿಪ್ ನಡೆಸಿದ್ದಾರೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನ್ನೂ ಯಶಸ್ವಿಯಾಗಿ ಮುಗಿಸಿದ್ದಾರೆ. ನವೆಂಬರ್‌ನಲ್ಲಿ ಇಂಡೋ- ಶ್ರೀಲಂಕಾ ಕರಾಟೆ ಚಾಂಪಿಯನ್‌ಶಿಪ್ ನಡೆಸಲು ಸಿದ್ಧತೆ ನಡೆಸಿದ್ದಾರೆ.
 26ರ ಹರಯದ ವಿನೋದ್, ನಗರದ ಜೈಲಿನಲ್ಲಿ ಪೊಲೀಸ್ ಆಗಿರುವ ಎನ್. ಲಕ್ಷ್ಮಣ್ ಅವರ ಪುತ್ರ. ಐದನೆಯ ಕ್ಲಾಸಿನಲ್ಲಿ ಓದುವಾಗಲೇ ಎ. ಝಡ್ ಮುಹೀಬ್ ಶಿಕ್ಷಕರ ಬಳಿ ಕರಾಟೆ ಕಲಿಯಲು ಆರಂಭಿಸಿದರು. 10ನೆಯ ತರಗತಿಯಲ್ಲಿರುವಾಗಲೇ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ. ನಂತರ ಬೆಂಗಳೂರಿಗೆ ಪ್ರತಿ ಶನಿವಾರ ಮತ್ತು ಭಾನುವಾರ ತೆರಳಿ ರಾಜೇಂದ್ರನ್ ಅವರಲ್ಲಿ ಇನ್ನಷ್ಟು ಹೆಚ್ಚಿನ ಅಭ್ಯಾಸ ಮಾಡಿದ್ದಾರೆ. ಸಹ್ಯಾದ್ರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪದವಿ ಪಡೆದು ಕುವೆಂಪು ವಿವಿಯಲ್ಲಿ ಇಂಗ್ಲೀಷ್ ಎಂಎ ಮತ್ತು ಬಿಇಡಿ ಮುಗಿಸಿದ್ದಾರೆ.  
ಅನೇಕ ರಾಷ್ಟ್ರೀಯ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಂಡು ಪದಕ ಗಳಿಸಿರುವ ಇವರು, 12 ವರ್ಷಗಳಿಂದ  ಕರಾಟೆ ಶಾಲೆಯನ್ನು ಆರಂಭಿಸಿ, ಈಗ ಬೆಳಿಗ್ಗೆ ನೆಹರೂ ಕ್ರೀಡಾಂಗಣದಲ್ಲಿ ಗಂಡುಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ. ಇದರೊಟ್ಟಿಗೆ ಗೋಪಾಳ, ವಿನೋಬನಗರ ಮತ್ತು ವಿದ್ಯಾನಗರದಲ್ಲಿ ಶಾಖೆ ತೆರೆದು ಸಂಜೆ ಕಲಿಸುತ್ತಿದ್ದಾರೆ. ನಿರ್ಭಯಾ ಉಚಿತ ಕರಾಟೆ ಕೇಂದ್ರ ತೆರೆದು ಬಾಲಕಿಯರು, ಮಹಿಳೆಯರಿಗೆ ಪ್ರತ್ಯೇಕವಾಗಿ 2 ವರ್ಷದಿಂದ ತರಗತಿ ನಡೆಸುತ್ತಿದ್ದಾರೆ. ಇದರಲ್ಲಿ 30 ಜನ  ದಿನನಿತ್ಯ ಕಲಿಯುತ್ತಿದ್ದಾರೆ.  ಇವರಲ್ಲಿ ಕಲಿತ ಅನೇಕರು ಈಗ ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೇಸಿಗೆ ಶಿಬಿರ ನಡೆಸುವ ಮೂಲಕ ನೂರಾರು ಮಕ್ಕಳಿಗೆ ಕರಾಟೆಯ ಕಿಚ್ಚು ಹೊತ್ತಿಸುತ್ತಿದ್ದಾರೆ. 
ತಾನು ಮಕ್ಕಳಿಗೆ ಕಲಿಸಿ ಅವರಿಂದ ಪಡೆದ ಶುಲ್ಕದಲ್ಲೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಿಗೆ ತೆರಳುತ್ತಿದ್ದಾರೆ. ಕಾಲೇಜು ದಿನಗಳಲ್ಲಿ ತನ್ನ ಮಿತ್ರರು ನೆರವು ನೀಡಿದ್ದರಿಂದ ತಾನು ಇಷ್ಟೊಂದು ಬೆಳೆಯಲು ಸಾಧ್ಯವಾಗಿದೆ. ಈಗಲೂ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಕೆಲವು ಮುಖಂಡರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಆದರೆ ಸರಕಾರಿ ವಲಯದಲ್ಲಿ ಕ್ರೀಡೆಗೆ ಬೆಲೆ ಕೊಡುತ್ತಿಲ್ಲ ಎಂದು ವಿಷಾದಿಸುವ ವಿನೋದ್, 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅದಕ್ಕೂ ಮುನ್ನ ಆಸಟ್ರೆಿಯಾದಲ್ಲಿ ನಡೆಯುವ ಅರ್ಹತಾ ಪಂದ್ಯದಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದಾರೆ.  

published on 25.6.16
.............................

No comments:

Post a Comment