Monday 8 January 2018

ಪ್ರಾಮಾಣಿಕ ಸೇವೆಯ ಕರ್ಮಯೋಗಿ
ಪತಂಜಲಿ ನಾಗರಾಜ


ಸಮಾಜಸೇವೆ,  ಯೋಗ, ಪ್ರವಾಸಿ ಮಾರ್ಗದರ್ಶನ, ಸ್ವಯಂ ಉದ್ಯೋಗದ ಮಾಹಿತಿ, ಪರಿಸರ, ರಂಗಭೂಮಿ, ನೈತಿಕ ಶಿಕ್ಷಣ, ಹೀಗೆ ಹತ್ತು ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು, ಅದರಲ್ಲಿ ಸಾಧನೆ ಮಾಡಿ ತೀರುವ ಛಲ ಮತ್ತು ಹಠವನ್ನು ಇಟ್ಟುಕೊಂಡು ಯಶಸ್ವಿಯಾಗುವುದು ಸುಲಭದ ಕೆಲಸವಲ್ಲ. ಆದರೂ, ಎಲ್ಲದರಲ್ಲೂ ತನ್ನನ್ನು ಸಕ್ರಿಯವಾಗಿ ಸಾದ್ಯಂತವಾಗಿ ತೊಡಗಿಸಿಕೊಂಡು ಹಗಲಿರುಳೆನ್ನದೆ ದುಡಿಯುತ್ತಿರುವವರು ಪತಂಜಲಿ ನಾಗರಾಜ.
ಶಿವಮೊಗ್ಗದಲ್ಲಿ ಪತಂಜಲಿ ನಾಗರಾಜ ಹೆಸರನ್ನು ಕೇಳದವರಿಲ್ಲ. ಹೊಸಮನೆ ಬಡಾವಣೆಯಲ್ಲಿರುವ ತಮ್ಮ ಸ್ವಂತ ಮನೆಯ ಕಟ್ಟಡದಲ್ಲಿಯೇ ಯಂದೆ ಜವರಯ್ಯ ಗೌಡರ ಸ್ಮರಣಾರ್ಥವಾಗಿ ಪತಂಜಲಿ ಯೋಗ, ಪ್ರಕೃತಿ ಕೇಂದ್ರವನ್ನು ಸುಮಾರು 15 ವರ್ಷಗಳ ಹಿಂದೆ ಸ್ಥಾಪಿಸಿ, ಸಾರ್ವಜನಿಕರಿಗೆ ಯೋಗ, ನೈತಿಕ ಶಿಕ್ಷಣ, ಪ್ರಕೃತಿ ಚಿಕಿತ್ಸೆ  ಬಗ್ಗೆ ಅರಿವನ್ನುಂಟು  ಮಾಡುವ ಪಣ ತೊಟ್ಟು ಅದರಲ್ಲಿ ಸಾಫಲ್ಯತೆಯನ್ನು ಕಂಡವರು ನಾಗರಾಜ. 45ರ ಹರಯದ ಇವರು, ರಾಜ್ಯ ಪ್ರವಾಸಿ ಮಾರ್ಗದರ್ಶಿಯಾಗಿ ಮಾಡಿರುವ ಅನುಪಮ ಸೇವೆ ಮನ್ನಿಸಿ ಕಳೆದ ವಾರ ಪ್ರವಾಸಿ ಮಾರ್ಗದರ್ಶಿ ಪ್ರಶಸ್ತಿಯನ್ನು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪ್ರದಾನ ಮಾಡಿದೆ.
ಓದಿದ್ದು ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ, ಜೀವನೋಪಾಯಕ್ಕೆ ಬೀದಿಬದಿಯಲ್ಲಿ ಎಳನೀರು ಮಾರಾಟ, ಪತ್ರಿಕೆ ಹಂಚುವುದು, ಈ ಮಧ್ಯೆ  ಮಹಿಳಾ ಜಾಗೃತಿಗೆ ಸ್ವಸಹಾಯ ಸಂಘ ಸ್ಥಾಪನೆ, ಗ್ರಾಮ ಅರಣ್ಯ ಸಮಿತಿ ಸ್ಥಾಪಿಸಿ ಜನರಲ್ಲಿ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಇವರ ಇತರ ಹವ್ಯಾಸ.  ಇಂತಹ ಕರ್ಮಯೋಗಿ, ಹಠಯೋಗಿಗೆ ಒಲಿದಿದೆ ರಾಜ್ಯಮಟ್ಟದ ಪ್ರವಾಸಿ ಮಾರ್ಗದರ್ಶಿ ಪ್ರಶಸ್ತಿ.
45ರ ಹರಯದ ನಾಗರಾಜ, ಪ್ರವಾಸೋದ್ಯಮ ಇಲಾಖೆಯವರು ಟೂರಿಸ್ಟ್ ಗೈಡ್ ಹುದ್ದೆಗೆ ಅರ್ಜಿ ಕರೆದಾಗ ಅದರಲ್ಲಿ ಆಯ್ಕೆಯಾಗಿದ್ದರು. ದೇಶ-ವಿದೇಶದಿಂದ ಬರುವ ಪ್ರವಾಸಿಗರನ್ನು ಪ್ರವಾಸಿ ಕ್ಷೇತ್ರಗಳಿಗೆ ಕರೆದೊಯ್ಯುವುದು, ಅಲ್ಲಿನ ಸ್ಥಳ ಪರಿಚಯ, ಇತಿಹಾಸ ಮತ್ತು ಮಹತ್ವವನ್ನು ವಿವರಿಸುವುದು ಅವರ ಕೆಲಸ. ಇದಕ್ಕೆ ಸರ್ಕಾರದಿಂದ ಯಾವುದೇ ಸಂಭಾವನೆ ಇಲ್ಲ. ಪ್ರವಾಸಿಗರು ಕೊಟ್ಟಷ್ಟೇ ಹಣವನ್ನು ಪಡೆಯಬೇಕು. ಬಿಡುವಿದ್ದಾಗ ತಮ್ಮ ಇತರೇ ಕೆಲಸಗಳನ್ನು ಅವರು ಮಾಡಿಕೊಳ್ಳುತ್ತಾರೆ.
  ಪ್ರವಾಸೋದ್ಯಮ ಇಲಾಖೆ ಮತ್ತು ಅದರಡಿಯಲ್ಲಿ ನಡೆಯುವ ಎಲ್ಲ ಟ್ರಾವೆಲ್ಸ್ ಕೇಂದ್ರಗಳಲ್ಲಿ ಇವರ ದೂರವಾಣಿ ಮತ್ತು ಮಾಹಿತಿ ಲಭ್ಯವಿರುತ್ತದೆ. ಅದನ್ನು ಪಡೆದು  ನಾಗರಾಜ ಅವರ ಮಾರ್ಗದರ್ಶನದಲ್ಲಿ  ಪ್ರವಾಸ ಮಾಡುತ್ತಾರೆ. 2001ರಿಂದ ಈ ಕೆಲಸವನ್ನು ಅವರು ಪ್ರ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಅವರ ಕರ್ತವ್ಯ ನಿಷ್ಠೆಗೆ ಈ ಪ್ರಶಸ್ತಿ ಸಂದಿದೆ.
ಯೋಗದಲ್ಲೂ ನಿಷ್ಣಾತರಾದ ಇವರು, ತಮ್ಮ 8ನೆಯ ವಯಸ್ಸಿನಿಂದ ಅಭ್ಯಾಸ ಮಾಡಿ ಅದನ್ನು ಕರಗತ ಮಾಡಿಕೊಂಡಿದ್ದಾರೆ. ಗ್ರಾಮಾಂತರ ಶಾಲಾ-ಕಾಲೇಜುಗಳಲ್ಲಿ, ಸೆರೆಮನೆಯಲ್ಲಿ ಯೋಗ ಕಲಿಸುತ್ತಿದ್ದಾರೆ. ಪತಂಜಲಿ ಸಂಸ್ಥೆಯ ಹೆಸರಲ್ಲಿ ಸಾಂಸ್ಕೃತಿಕ ತಂಡ ಕಟ್ಟಿ ಸುಮಾರು 500ಕ್ಕೂ ಹೆಚ್ಚು ಕಲಾವಿದರನ್ನು ಗುರುತಿಸಿದ್ದಾರೆ. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಇದು ಕೆಲಸ ಮಾಡುತ್ತಿದೆ. ಇದರಿಂದಲೇ ಮಹಿಳಾ ಸ್ವಸಹಾಯ ಸಂಘ ಸ್ಥಾಪಿಸಿ ಸುಮಾರು 5 ಕೋಟಿ ರೂ. ಸಾಲ ಕೊಡಿಸಿದ್ದಾರೆ. ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮೀಜಿಯವರ ಸ್ಫೂರ್ತಿಯಿಂದ ಸಮಾಜ ಸೇವೆ ಕೈಗೆತ್ತಿಕೊಂಡಿರುವುದಾಗಿ ಹೇಳುವ ಇವರ ಸೇವೆಯನ್ನು ಗಮನಿಸಿ ಹಲವು ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ಜ್ಯೂನಿಯರ್ ಫೆಲೋಶಿಪ್ ಅವಾರ್ಡನ್ನು  ನೀಡಿದೆ. ಕೇಂದ್ರ ಸರ್ಕಾರದ ಯುವಜನ ಸೇವಾ ಮತ್ತು ಸಂಸ್ಕೃತಿ ಇಲಾಖೆಯ 4 ವೈಯಕ್ತಿಕ ಪ್ರಶಸ್ತಿ, ರಾಜ್ಯ ಯುವಜನ ಸೇವಾ ಇಲಾಖೆಯ ಒಂದು ಪ್ರಶಸ್ತಿ , ಜಿಲ್ಲಾ ಮಟ್ಟದ 8 ಪ್ರಶಸ್ತಿ ಇವರ ಮುಡಿಗೇರಿದೆ. ಇಷ್ಟಾದರೂ ಯಾವ ಹಮ್ಮು-ಬಿಮ್ಮು ಇಲ್ಲದೆ ಸಾಮಾನ್ಯನಂತೆ ಎಲ್ಲರೊಡನೆ ಬೆರೆಯುವ ನಾಗರಾಜ, ಪತಂಜಲಿ ಎಂಬ ಮಾಸಿಕ ಪತ್ರಿಕೆಯ ಸಂಪಾದಕರಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ.     
..................................

No comments:

Post a Comment