Monday 8 January 2018

ಜಿಲ್ಲೆಯ ಮೊದಲ ಕರಾಟೆ ಡಾನ್
ಅನೂಪ್ ರಾಜಶೇಖರ್


ಪ್ರತಿಭೆಗಳ ಬೀಡಾದ ಶಿವಮೊಗ್ಗದಲ್ಲಿ ಹೊಸ ಸಾಧನೆ ಮಾಡುತ್ತಿರುವವರು ಹೆಚ್ಚುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಹೊಸ ಹೆಜ್ಜೆ ಇಡುತ್ತ ಜಿಲ್ಲೆಯ ಹೆಸರನ್ನು ಉನ್ನತಕ್ಕೇರಿಸುತ್ತಿದ್ದಾರೆ.  ಕರಾಟೆಯಲ್ಲಿ ಜಿಲ್ಲೆಯ ಪ್ರತಿಭೆಗಳು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈಗ ಕರಾಟೆಯಲ್ಲಿ ನಗರದ ವಿದ್ಯಾರ್ಥಿಯೊಬ್ಬ ಡಾನ್ ಆಗಿ ಹೊರಹೊಮ್ಮಿದ್ದಾನೆ. ಜಿಲ್ಲೆಯ ಮಟ್ಟಿಗೆ ಈ ಪದವಿ ಪಡೆದ ಮೊದಲಿಗನಾಗಿದ್ದಾನೆ.
ಅನೂಪ್ ರಾಜಶೇಖರ್ ಈ ಸಾಧನೆ ಮಾಡಿದ ವಿದ್ಯಾರ್ಥಿ. ನಗರದ ಹರಿಗೆ ಬಡಾವಣೆ ವಾಸಿಯಾದ ಈತ,  ಡಿವಿಎಸ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯು (ವಿಜ್ಞಾನ) ಓದುತ್ತಿದ್ದಾನೆ.  ಐದು ವರ್ಷಗಳಿಂದ ಸತತ ಕರಾಟೆ ಕಲಿಯುವ ಮೂಲಕ ರಾಷ್ಟ್ರೀಯ, ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಚಿನ್ನ ಮತ್ತು ಬೆಳ್ಳಿ ಪದಕವನ್ನು ಗೆದ್ದು ತಂದಿದ್ದಾನೆ. ಈತನ ಮನೆಯಲ್ಲಿ ಪದಕಗಳ ಸಾಲೇ ಇದೆ.
ಅನೂಪ್ ನಗರದ ಕರಾಟೆ ಗುರು ಎಸ್.ಎಲ್ ವಿನೋದ್ ಅವರ ಶಿಷ್ಯ. ನೆಹರೂ ಕ್ರೀಡಾಂಗಣದಲ್ಲಿ ಪ್ರತಿದಿನ ಬೆಳಿಗ್ಗೆ 6:30ರಿಂದ 8ರವರೆಗೆ ಸತತ ಅಭ್ಯಾಸ ನಡೆಸುತ್ತಿದ್ದಾನೆ. ಸುಮಾರು ಐದಾರು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಬಂದ ಕರಪತ್ರವನ್ನು ಗಮನಿಸಿ ಬೇಸಿಗೆ ಶಿಬಿರದ  ಕರಾಟೆ ತರಗತಿಗೆ  ಈತನ ತಂದೆ ಸೇರಿಸಿದ್ದರು. ಅದೇ ಈತನ ಕಲಿಕೆಗೆ ಮೂಲವಾಯಿತು. ಅಲ್ಲಿಂದ ಹಿಂದಿರುಗಿ ನೋಡದ ಅನೂಪ್ ಯಶಸ್ಸಿನ ಮೆಟ್ಟಿಲನ್ನೇರುತ್ತಾ ಸಾಗುತ್ತಿದ್ದಾನೆ. ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಕರಾಟೆ ಡಾನ್ ಪರಿಕ್ಷೆಯಲ್ಲಿ ಪಾಲ್ಗೊಂಡು ಡಾನ್ ಪದವಿಯನ್ನು ತನ್ನದಾಗಿಸಿಕೊಂಡಿದ್ದಾನೆ. ಜಿಲ್ಲೆಯಲ್ಲಿ ಕರಾಟೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರಿದ್ದಾರೆ. ಅವರ‌್ಯಾರೂ ಡಾನ್ ಪರೀಕ್ಷೆಯನ್ನು ತೆಗೆದುಕೊಂಡಿಲ್ಲ. ಆದರೆ ಅನೂಪ್ ಮೊದಲ ಯತ್ನದಲ್ಲೇ ಉನ್ನತ ಶ್ರೇಣಿಯೊಂದಿಗೆ ಪಾಸಾಗಿ ಜಿಲ್ಲೆಗೆ ಹೆಸರು ತಂದಿದ್ದಾನೆ. ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್  ಡಾನ್ ಪದವಿ ಪ್ರಮಾಣಪತ್ರವನ್ನು ಇತ್ತೀಚೆಗೆ ಈತನಿಗೆ ಪ್ರದಾನ ಮಾಡಿದ್ದಾರೆ.
ಕುಮಿಟೆ ಮತ್ತು ಫೈಟ್‌ನಲ್ಲಿ ಈತ ಪಳಗಿದವನು. 16 ವರ್ಷದೊಳಗಿನವರಿಗೆ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಮೊಟ್ಟಮೊದಲ ಬಾರಿಗೆ ಭಾಗವಹಿಸುವ ಮೂಲಕ ಚಿನ್ನದ ಪದಕ ತಂದ ಅನೂಪ್ ನಂತರ ಗುಜರಾತ್, ಹೈದರಾಬಾದ್. ಮೈಸೂರು, ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಪಂದ್ಯಾವಳಿಯಲ್ಲೂ ಚಿನ್ನದ ಸಾಧನೆ ಮಾಡಿದ್ದಾನೆ. ನಾಲ್ಕು ತಿಂಗಳ ಹಿಂದೆ ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಸಾಧನೆ ಮಾಡಿದ್ದಾನೆ. 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಕರಾಟೆಯೂ ಸೇರ್ಪಡೆಯಾಗಿರುವುದರಿಂದ ಅದರಲ್ಲಿ ಪಾಲ್ಗೊಳ್ಳುವ ಸಂಬಂಧ ಈಗ ತರಬೇತಿ ಪಡೆಯುತ್ತಿದ್ದಾನೆ.
ಅನೂಪ್  ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಾಧನೆ ಮಾಡಿರುವುದರಿಂದ ಪಿಯುಗೆ ಕ್ರೀಡಾ ಖೋಟಾದಿಂದ ಉಚಿತ ಪ್ರವೇಶ ಲಭಿಸಿದೆ. ಡಿವಿಎಸ್‌ನಲ್ಲೇ ಹೈಸ್ಕೂಲನ್ನೂ ಓದಿರುವ ಈತ, ಎಸ್ಸೆಸೆಲ್ಸಿಯಲ್ಲಿ ಶೆ 86ರಷ್ಟು ಸಾಧನೆ ಮಾಡಿದ್ದಾನೆ. ಹರಿಗೆ ವಾರ್ಡಿನ ನಗರಪಾಲಿಕೆ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಎಸ್. ರಾಜಶೇಖರ್- ನಗರಸಭೆ ಮಾಜಿ ಸದಸ್ಯೆ ಮಹಾದೇವಿ  ಅವರ ಪುತ್ರ. ಮಗನ ಸಾಧನೆಗೆ ತಂದೆ -ತಾಯಿ ಸದಾ ಪ್ರೋತ್ಸಾಹ ನೀಡಿ ನೀರೆರೆಯುತ್ತಿದ್ದಾರೆ, ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿದ ಬಗ್ಗೆ ಅಷ್ಟೇ ಸಂತಸವನ್ನೂ ಹೊಂದಿದ್ದಾರೆ.   
ಕರಾಟೆ ಕಲಿಯಲಾರಂಭಿಸಿದಂದಿನಿಂದ ಮಾನಸಿಕವಾಗಿ, ದೈಹಿಕವಾಗಿ ಸಮರ್ಥನಾಗಿದ್ದೇನೆ. ಉತ್ತಮ ಆರೋಗ್ಯವನ್ನು ಪಡೆದಿದ್ದೇನೆ. ಆತ್ಮವಿಶ್ವಾಸ ಮತ್ತು ಮನೋಸೈರ್ಯ ಹೆಚ್ಚಿದೆ. ಯಾವುದೇ ಸವಾಲನ್ನು ಎದುರಿಸುವ ಧೈರ್ಯ ಮೂಡಿದೆ ಎನ್ನುತ್ತಾನೆ ಅನೂಪ್. ಈತನ ಗುರು ವಿನೋದ್ ಸಹ, ಅನೂಪ್ ತುಂಬಾ ಸರಳ ಸ್ವಭಾವದ, ಅಷ್ಟೇ ಚುರುಕುಮತಿಯ ಹುಡುಗ. ಹೇಳಿಕೊಟ್ಟಿದ್ದನ್ನು ಸುಲಭದಲ್ಲಿ ಗ್ರಹಿಸಿ, ಕಲಿಯುವ ಶಕ್ತಿ ಆತನಲ್ಲಿದೆ. ವಿವಿಧ ಶಾಲಾ- ಕಾಲೇಜಿಗೆ ತೆರಳಿ ಪ್ರಾತ್ಯಕ್ಷಿಕೆ ನೀಡುತ್ತಿದ್ದಾನೆ. ಕರಾಟೆ ಬ್ಲ್ಯಾಕ್ ಬೆಲ್ಟ್ ಆಗಿ ಜಿಲ್ಲೆಗೆ ಮೊದಲ ಡಾನ್ ಆಗಿರುವುದು ತುಂಬಾ ಸಂತಸ ತಂದಿದೆ ಎನ್ನುತ್ತಾರೆ.
published on 11.6.16
.............................



No comments:

Post a Comment