Saturday 6 January 2018

ಚಿತ್ರಕಲೆ, ರಂಗಕಲೆಯ ಸಾಧಕ
ಸತೀಶ್‌ಕುಮಾರ್


ಕಲೆಯ ಮೂಲಕ ಬದುಕು ಕಟ್ಟಿಕೊಳ್ಳುವವರು, ಕಟ್ಟಿಕೊಡುವವರು  ಅಪರೂಪ. ತಮ್ಮಲ್ಲಿರುವ ಕಲೆಯನ್ನು ತಪಸ್ಸಿನ ಮೂಲಕ ಸಿದ್ಧಿಸಿಕೊಂಡರೂ ಅದರಲ್ಲೇ ಸಾಧನೆ ಮಾಡುವುದು ಕಷ್ಟದ ಕೆಲಸ. ಆದರೆ ಇಂದಿನ ದಿನಗಳಲ್ಲಿ ಎಲ್ಲಾ ರೀತಿಯ ಕಲೆಗೆ ಸಾಕಷ್ಟು ಪ್ರಾಮುಖ್ಯತೆ ಇರುವುದರಿಂದ ಕಲಾಕಾರರು ಹೆಚ್ಚಿನ ಯಶಸ್ಸು, ಹೆಸರು ಗಳಿಸುತ್ತಿದ್ದಾರೆ. ಕಲೆ ಒಲಿದರೆ ಮನುಷ್ಯನನ್ನು ಬದಲಿಸುತ್ತದೆ. ಮನುಷ್ಯ ಆ ಕಲೆಯನ್ನು ಒಲಿಸಿಕೊಳ್ಳುವ ಶಕ್ತಿಯನ್ನು ಅಂತರ್ಗತ ಮಾಡಿಕೊಳ್ಳಬೇಕು.
ಕೆ. ಸತೀಶ್‌ಕುಮಾರ್ ಒಬ್ಬ ಚಿತ್ರಕಲಾ ಶಿಕ್ಷಕ. ಈ ಕಲೆಯ ಮೂಲಕ ಬೇರೆ ಬೇರೆ  ಕಲೆಗಳಲ್ಲಿ ಪರಿಪೂರ್ಣತೆ ಸಾಧಿಸಿದವರು. ರಂಗಕರ್ಮಿಯಾಗಿ, ರಂಗಸಜ್ಜಿಕೆಯಲ್ಲಿ ನಿಷ್ಣಾತರಾಗಿ, ಕೌಶಲ್ಯದ ಕಲೆಯಲ್ಲಿ ಜಿಲ್ಲೆಯಲ್ಲೇ ಹೆಸರು ಗಳಿಸಿದವರು. ಪೇಪರ್ ಕ್ರಾಫ್ಟ್, ಪಫೆಟ್ ಮೇಕಿಂಗ್, ಮಾಸ್ಕ್ ಮೇಕಿಂಗ್, ಓರಿಗಾಮಿ, ಪಲ್ಪ್ ಆರ್ಟ್‌ನಂತಹ ಏಕಾಗ್ರತೆ ಹೆಚ್ಚಿಸುವ ಮತ್ತು ಮಕ್ಕಳಲ್ಲಿ ಅಸಕ್ತಿ ಬೆಳೆಸುವ ಸುಲಭದ ಕಲೆ ಕಲಿಸುವುದರಲ್ಲಿ ನಿಷ್ಣಾತರು. ಜಿಲ್ಲೆಯಲ್ಲಿ ಈ ಕಲೆಯಲ್ಲಿ ಪಳಗಿದವರು ತುಂಬಾ ವಿರಳ. ಸತೀಶ್‌ಕುಮಾರ್ ಈ ಕಲೆಯನ್ನು ತಮ್ಮ ಶಾಲಾ ಮಕ್ಕಳಿಗೆ ಹೇಳಿ ಕೊಡುವುದಲ್ಲದೆ, ಬೇಸಿಗೆ ರಂಗ ಶಿಬಿರದಲ್ಲೂ ತರಬೇತಿ ಕೊಡುತ್ತಿದ್ದಾರೆ.
ಸತೀಶ್‌ಕುಮಾರ್ ಮೂಲತಃ ಚಿತ್ರದುರ್ಗದವರು, ಅಲ್ಲಿನ ಎಸ್‌ಜೆಎಂ ಚಿತ್ರಕಲಾ ಮಹಾವಿದ್ಯಾಲಯದಲ್ಲಿ  ಡ್ರಾಯಿಂಗ್ ಮಾಸ್ಟರ್ ಪದವಿ ಪಡೆದು ಶಿವಮೊಗ್ಗ ತಾಲೂಕಿನ ಸೂಗೂರಿನ  ಸರ್ಕಾರಿ  ಪ್ರಾಥಮಿಕ ಹೈಸ್ಕೂಲಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಪಾಠ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೂ ಚಿತ್ರಕಲೆ ಮತ್ತು ಕ್ರಾಫ್ಟ್‌ನಲ್ಲಿ ತೀರಾ ಆಸಕ್ತಿ ಹೊಂದಿದ್ದ ಇವರಿಗೆ ಅದೇ ಕಲಿಕೆಯ ವಿಷಯವಾಗಿ, ಅದರಲ್ಲೇ ಈಗ ಕೆಲಸ ಮಾಡುವ ಮತ್ತು ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸುವ ಅವಕಾಶ ಸಿಕ್ಕಿದೆ.
ಕ್ಯಾನ್‌ವಾಸ್ ಪೇಂಟಿಂಗ್‌ನಲ್ಲಿ ಇವರು ಸಿದ್ಧಹಸ್ತರು. ಬೆಂಗಳೂರಿನ ಆರ್ಟ್ ಗ್ಯಾಲರಿಯಲ್ಲಿ ಎರಡು ವರ್ಷ ಕೆಲಸ ಮಾಡಿ ಅನುಭವ ಪಡೆದುಕೊಂಡಿದ್ದಾರೆ. ಜೊತೆಗೆ ಬೆಂಗಳೂರು, ತುಮಕೂರು, ಶಿವಮೊಗ್ಗ, ದಾವಣಗೆರೆ ಮೊದಲಾದೆಡೆ ತಮ್ಮ ಕ್ಯಾನ್‌ವಾಸ್ ಪೇಂಟಿಂಗ್‌ನ್ನು ಪ್ರದರ್ಶಿಸಿ ಜನಮನ್ನಣೆ ಗಳಿಸಿದ್ದಾರೆ. ಬೆಂಗಳೂರಿನ ಚಿತ್ರಸಂತೆಯಲ್ಲಿ ಇವರ ಕ್ಯಾನ್‌ವಾಸ್ ಪೇಂಟಿಂಗ್ ಪ್ರದರ್ಶಿತವಾಗಿದೆ.  ಕಲೆಯನ್ನು ಕೇವಲ ತಾವೊಬ್ಬರೇ ಕಲಿತು ಪ್ರದರ್ಶಿಸಿ ಹೆಸರು ಗಳಿಸುವುದಕ್ಕಿಂತ ವಿದ್ಯಾರ್ಥಿಗಳಿಗೆ ಅದನ್ನು ಕಲಿಸಿ ಅವರಲ್ಲೂ ಆಸಕ್ತಿ ಹುಟ್ಟಿಸಬೇಕು ಎನ್ನುವುದು ಸತೀಶ್ ಅವರ ಹೆಬ್ಬಯಕೆ. ಅದಕ್ಕಾಗಿ ತಾನು ಕೆಲಸ ಮಾಡುವ ಸುಗೂರು ಹೈಸ್ಕೂಲಿನಲ್ಲಿ ಚಿಣ್ಣರ ಕಟ್ಟೆ ಎಂಬ ಶಿಬಿರ ಮಾಡಿ ಮಕ್ಕಳಿಗೆ ಉಚಿತವಾಗಿ ಕಲೆ ಪರಿಚಯ ಮಾಡಿಸಿದ್ದಾರೆ. ತರಬೇತಿ ಕೊಡುತ್ತಿದ್ದಾರೆ.
 ಶಿವಮೊಗ್ಗದಲ್ಲಿ ಹೊ. ನ. ಸತ್ಯ ಅವರ ರಂಗಪ್ರಯೋಗ, ರಂಗಾಯಣ ಮೊದಲಾದ ಸಂಸ್ಥೆಗಳು ಏರ್ಪಡಿಸುವ ಬೇಸಿಗೆ ರಂಗ ಶಿಬಿರದಲ್ಲಿ ಪ್ರಮುಖ ಪಾತ್ರಧಾರಿಯಾಗಿ ಇವರು ಕೆಲಸ ಮಾಡುತ್ತಾರೆ. ಕ್ರಾಫ್ಟ್ ಬಗ್ಗೆ ತರಬೇತಿ ಕೊಡುವುದಕ್ಕೆ ಇವರೇ ಉತ್ತಮರು ಎಂದರಿತು ಇವರನ್ನು ಆಹ್ವಾನಿಸಲಾಗುತ್ತಿದೆ. ಎ. 24ರಿಂದ ಮೇ 12ರವರೆಗೆ ಶಿವಮೊಗ್ಗದಲ್ಲಿ ನಡೆಯಲಿರುವ ರಂಗಜಾತ್ರೆ ಎಂಬ ರಂಗ ಶಿಬಿರದಲ್ಲಿ ಈ ಎಲ್ಲ ಕಲೆಗಳನ್ನು ಮಕ್ಕಳಿಗೆ ಕಲಿಸಲು ಅವರು ಸಿದ್ಧರಾಗುತ್ತಿದ್ದಾರೆ.
ಇದರೊಟ್ಟಿಗೆ ರಂಗಾಭಿನಯ, ರಂಗಸಜ್ಜಿಕೆಯಲ್ಲೂ ಇವರು ಎತ್ತಿದಕೈ. ಬೆಂಗಳೂರಿನ ರಾಷ್ಟ್ರೀಯ ಕಲಾ ಶಾಲೆಯಲ್ಲಿ ಈ ಬಗ್ಗೆ ತರಬೇತಿ ಪಡೆದಿರುವ ಸತೀಶ್,  ಶಿಕ್ಷಣದಲ್ಲಿ ರಂಗಭೂಮಿ ತರಬೇತಿ  ಎಂಬ ವಿಷಯದ ಬಗ್ಗೆ ವಿಶೇಷ ಅಧ್ಯಯನ ನಡೆಸಿ ಅದನ್ನು ಜಾರಿಗೊಳಿಸುವಲ್ಲಿ  ಪ್ರಮುಖ ಪಾತ್ರ ವಹಿಸಿದ್ದಾರೆ. ಜಿಲ್ಲೆಯ ಹಲವೆಡೆ ಈ ಬಗ್ಗೆ ಉಪನ್ಯಾಸಗಳನ್ನು ಅವರು ನೀಡಿದ್ದಾರೆ. ‘ಉಸಿರಾ’ ಎಂಬ ನಾಟಕವನ್ನು ತಾವೇ ನಿರ್ದೇಶಿಸಿದ್ದಾರೆ.  ಕೃಷ್ಣಮೂರ್ತಿ ಕವತ್ತಾರ್ ಅವರ ದಕ್ಷಯಜ್ಞ, ವೀರ ಭಗತ್ ಸಿಂಗ್,  ಕೈವಾರ ನಾರಾಯಣ ಮೊದಲಾದ ನಾಟಕಗಳಲ್ಲಿ  ಅಭಿನಯಿಸಿದ್ದಾರೆ. ಸೃಜನಶೀಲ ವ್ಯಕ್ತಿತ್ವದವರಾಗಿರುವುದರಿಂದ ಅದ್ಭುತ ಪರಿಕಲ್ಪನೆಯ ಮೂಲಕ ರಂಗಸಜ್ಜಿಕೆ ನಿರ್ಮಾಣ ಮಾಡುತ್ತಾರೆ. ಜನಪದ ಗೀತ ಗಾಯನವನ್ನು ಕಲಿಸಿ ಮಕ್ಕಳಿಂದ ಅದರ ಪ್ರದರ್ಶನ ಮಾಡಿಸುತ್ತಿದ್ದಾರೆ.  ಹೀಗೆ ಕೇವಲ ಚಿತ್ರಕಲೆಗೆ ಮಾತ್ರ ಅಂಟಿಕೊಳ್ಳದೆ, ಅದರ ಅಂಗಾಂಗಗಳಂತಿರುವ ಇತರೆ ಕಲೆಗಳಲ್ಲೂ ತಮ್ಮ ಕೌಶಲ್ಯ ಮೆರೆಯುವ ಮೂಲಕ ಮರೆಯಲ್ಲಿದ್ದುಕೊಂಡೇ ಕೆಲಸ ಮಾಡುತ್ತಿದ್ದಾರೆ.

published on-23.4.16
...........................

No comments:

Post a Comment