Friday 5 January 2018

ಸಬಲೀಕರಣಕ್ಕೆ ಟೊಂಕಟ್ಟಿರುವ 
ಶೋಭ ದೇವರಾಜ್


ಸಮಾಜ ಸೇವೆಗಾಗಿಯೇ ತಮ್ಮನ್ನು ಮುಡುಪಾಗಿಟ್ಟುಕೊಂಡು  ಮಹಿಳೆಯರನ್ನು ಸಶಕ್ತೀಕರಣಗೊಳಿಸುವ ಕೆಲಸದಲ್ಲಿ ತೊಡಗಿರುವವರು ತೀರಾ ವಿರಳ. ಜನಸೇವೆಯೇ ಜನಾರ್ದನನ ಸೇವೆ ಎಂದು ಹೇಳುವವರು ಸಿಗುತ್ತಾರೆಯಾದರೂ ನಿಜಕ್ಕೂ ಅದನ್ನು ಮಾಡಿ ತೋರಿಸುವವರು ಬೆರಳೆಣಿಕೆಯಷ್ಟು. ಶಿವಮೊಗ್ಗದ ಶೋಭಾ ದೇವರಾಜ್ ಸಮಾಜ ಸೇವೆ, ನಿರುದ್ಯೋಗಿ ಯುವತಿಯರಿಗೆ ನೆರವು ಕಲ್ಪಿಸುವುದು,  ಸ್ವಸಹಾಯ ಸಂಘಗಳನ್ನು ರಚಿಸಿ ಬಡ ಮತ್ತು ಗ್ರಾಮಾಂತರ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಕೆಲಸವನ್ನು ಒಂದು ದಶಕದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅವರ ಈ ಸೇವೆ ಮತ್ತು ಸಂಘಟನೆಯನ್ನು ಗುರುತಿಸಿ ಯುವ ಸಬಲೀಕರಣ ಇಲಾಖೆಯು ಇತ್ತೀಚೆಗೆ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಯನ್ನು ಪ್ರದಾನ ಮಾಡಿದೆ.
ಶೋಭಾ ದೇವರಾಜ್  ಮೂಲತಃ ಹೊನ್ನಾಳಿ ತಾಲೂಕು ಬಸವನಹಳ್ಳಿಯವರು. ತಂದೆ- ತಾಯಿ ಕೂಲಿ ಮಾಡಿ ಇವರನ್ನು ಹಾಗೂ ಸಹೋದರಿಯರನ್ನು ಬೆಳೆಸಿದ್ದರು. ಇದರಿಂದ ಬಾಲ್ಯದಲ್ಲೇ ಕಷ್ಟಗಳನ್ನೆಲ್ಲ ಚೆನ್ನಾಗಿ ಅರಿತಿದ್ದರು. ನಂತರ ಮದುವೆಯಾಗಿ ಬಂದಿದ್ದು ಶಿವಮೊಗ್ಗದ ಹರಿಗೆ ಗ್ರಾಮಕ್ಕೆ. ನಂತರ ಅಲ್ಲಿಯೇ ಸಮಾಜ ಸೇವೆಗೆ ಚಾಲನೆ ನೀಡಿ ಯಶಸ್ಸನ್ನು ಕಂಡರು. ಸಮಾಜದ ಸರ್ವತೋಮುಖ ಅಭಿವೃದ್ಧಿಯ ಯತ್ನದ ಜೊತೆಗೆ ಸಮುದಾಯದ ಅಭಿವೃದ್ಧಿಯನ್ನೂ ಮಾಡಿದ್ದಾರೆ. ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯ ಮಾರ್ಗದರ್ಶನದಲ್ಲಿ ಹರಿಗೆ ಸೇರಿದಂತೆ ಹಲವಾರು ಕಡೆ ಪತಂಜಲಿ ಸ್ವಸಹಾಯ ಸಂಘಗಳನ್ನು ರಚಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಂಪರ್ಕ ಕಲ್ಪಿಸಿ ಲಕ್ಷಾಂತರ ರೂಪಾಯಿಗಳ ಆರ್ಥಿಕ ನೆರವನ್ನು ಕೊಡಿಸಲು ಮಾರ್ಗದರ್ಶನ ಮಾಡಿದ್ದಾರೆ. ಪರಿಸರ, ಯುವ ಚಟುವಟಿಕೆ ಮತ್ತಿತ್ತರ ಹಲವಾರು ಸಮಾಜಸೇವಾ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿನಿ ಯೋಜನೆಯಡಿಯಲ್ಲಿ ಹಲವಾರು ನಿರುದ್ಯೋಗಿ ಯುವತಿಯರಿಗೆ ಸೂಕ್ತ ತರಬೇತಿಯನ್ನು ನೀಡಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಮತ್ತು ಸಹಾಯಧನವನ್ನು ಕೊಡಿಸಿದ್ದಾರೆ. ಕಾರ್ಮಿಕ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು ಮತ್ತು ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿಯ ಹಲವಾರು ಯೋಜನೆಗಳನ್ನೂ ಕೊಡಿಸಲು ನೆರವಾಗಿದ್ದಾರೆ.  ಪರಿಸರ, ಯುವ ಚಟುವಟಿಕೆ ಮತ್ತಿತರ ಹಲವಾರು ಸಮಾಜಸೇವಾ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಸ್ವಸಹಾಯ ಸಂಘವನ್ನು, ಇದರ ಹೊರತಾಗಿ ನಗರ ಪ್ರದೇಶದಲ್ಲೂ ಇಂತಹ ಸಂಘವನ್ನು ರಚಿಸಿದ್ದಾರೆ. ಬಡ ಮತ್ತು ಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗುವ ಏಕೈಕ ಉದ್ದೇಶದಿಂದ ಈ ಕೈಂಕರ್ಯದಲ್ಲಿ ತೊಡಗಿಸಿದ್ದಾರೆ. ಇದಕ್ಕೆ ಪತಿ ಮತ್ತು ಮಕ್ಕಳ ಸಹಕಾರವೂ ಇದೆ. ಜೊತೆಗೆ ಪತಂಜಲಿ ಸಂಸ್ಥೆಯ ನಾಗರಾಜ್ ಸದಾ ಬೆಂಬಲ ನೀಡುವ ಮೂಲಕ ಬೆನ್ನೆಲುಬಾಗಿ ನಿಂತಿದ್ದಾರೆ.
  ಒಬ್ಬ ಮಹಿಳೆ ಸಮಾಜದಲ್ಲಿ ಮುಂದೆ ಬಂದು ಇಂತಹ ಸೇವೆ ಮಾಡುವುದು ಎಷ್ಟು ಕಷ್ಟದ ಕೆಲಸ ಎನ್ನುವುದು ಎಲ್ಲರಿಗೂ ಗೊತ್ತು. ಅವಳನ್ನು ಕೀಳಾಗಿ, ಕೆಟ್ಟದಾಗಿ ಕಾಣುವವರೇ ಹೆಚ್ಚಿರುವ ಇಂದಿನ ಕಾಲಘಟ್ಟದಲ್ಲಿ ಪ್ರೋತ್ಸಾಹಿಸಿ ಬೆನ್ನುತಟ್ಟುವವರ ಸಂಖ್ಯೆ ಹೆಚ್ಚಬೇಕು. ಆಗ ಮಾತ್ರ ಮಹಿಳಾ ಸಬಲೀಕರಣಕ್ಕೆ ಅರ್ಥ ಬರುತ್ತದೆ ಎನ್ನುತ್ತಾರೆ ಶೋಭಾ.
 ಇವರ ಸಮಾಜಸೇವೆಗೆ  ಮತ್ತು ಯುವತಿಯರನ್ನು ನಿರುದ್ಯೋಗದಿಂದ ಮೇಲೆತ್ತಿ ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಿದ್ದರಿಂದ ಕಿತ್ತೂರುರಾಣಿ ಚೆನ್ನಮ್ಮ ಯುವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿವೆ.  ಪ್ರಸ್ತುತ ಪತಂಜಲಿ ವಾಲ್ಮೀಕಿ ಕಲಾ ಯುವತಿ ಮಂಡಳಿಯ ಅಧ್ಯಕ್ಷೆಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕೊಡಮಾಡುವ 2013-14ನೆಯ ಸಾಲಿನ ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಇದರ ಹೊರತಾಗಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಹತ್ತು ಹಲವು ಸನ್ಮಾನ, ಗೌರವಗಳು ಸಂದಿವೆ. ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆ ಇಟ್ಟಿರುವ ಶೋಭಾ ಅಂತಹವರು ಇನ್ನಷ್ಟು ಬೆಳೆಯಬೇಕಿದೆ. 

2.4.2016
....................................

No comments:

Post a Comment