Saturday 13 January 2018

ಕ್ರಿಯಾಶೀಲ ಶಿಕ್ಷಕ ಮಿತ್ರ  
ಪ್ರೊ. ಬುಧ ನಾಯ್ಕ್


ಶಿಸ್ತಿನ ಸಿಪಾಯಿ, ಕ್ರಿಯಾಶೀಲ ಶಿಕ್ಷಕ, ಜನಾನುರಾಗಿ, ಹೃದಯವಂತರಾಗಿದ್ದ ನಗರದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕ ಬುಧ ನಾಯ್ಕ್ ಇನ್ನು ಕೇವಲ ನೆನಪು ಮಾತ್ರ. ‘ಅಳಿಯುವುದೇ ಕಾಯ; ಉಳಿಯುವುದೇ ಕೀರ್ತಿ’ ಎನ್ನುವ ಮಾತಿಗೆ ಉಪಮೆಯಾಗುತ್ತಾರೆ ಬುಧ ನಾಯ್ಕ್ ಅವರು. ಹೌದು; ಬುಧ ನಾಯ್ಕ್ ಕಂಚಿನ ಕಂಠದ ಮಾತಿನ ಮಲ್ಲ; ಸಂಘಟನಾ ಚತುರ; ಸ್ನೇಹಜೀವಿ; ಜ್ಞಾನದಾಹಿ. ವಿದ್ಯಾರ್ಥಿಗಳ ಪಾಲಿಗಂತೂ ಅನುಕರಣೀಯ, ಅನುಸರಣೀಯ ಆದರ್ಶ ಚೇತನ!
ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗುವುದೆಂದರೆ ನಿಜಕ್ಕೂ ಸವಾಲಿನ ಕೆಲಸವೇ ಸರಿ. ತನ್ನ ಅಧ್ಯಯನ, ಅಧ್ಯಾಪನದ ಮೂಲಕ ವಿದ್ಯಾರ್ಥಿಗಳ ಮನಸೂರೆಗೈದ ಅಪೂರ್ವ ಶಿಕ್ಷಕ ಬುಧ ನಾಯ್ಕ್ ಅವರು. ತಮ್ಮ ಮೃದುಮಧುರ ಮಾತುಗಳಿಂದ, ಸ್ನೇಹಪರತೆಯಿಂದ, ಪ್ರತಿಭೆ-ಪಾಂಡಿತ್ಯದಿಂದ ಅವರು ಎಲ್ಲರ ಮನಗೆದ್ದಿದ್ದರು.
ಎಲ್ಲರೊಂದಿಗೆ ಬೆರೆಯುವ ಕಲೆ ಅವರಿಗೆ ಚೆನ್ನಾಗಿ ಕರಗತ. ಕಾಲೇಜಿನಲ್ಲಿ ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ  ಚಟುವಟಿಕೆ ಯಾವುದೇ ಕಾರ್ಯಕ್ರಮಗಳಿರಲಿ, ಅಲ್ಲಿ ಬುಧ ನಾಯ್ಕ್ ಇರಲೇ ಬೇಕು ಎನ್ನುವಷ್ಟರ ಮಟ್ಟಿಗೆ ಅವರು ಸಕ್ರಿಯರು. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಅವರ ಮಾನವೀಯತೆ ಮತ್ತು ಕಳಕಳಿ ನಿಜಕ್ಕೂ ಶ್ಲಾಘನೀಯ. ಈ ಗುಣವಿಶೇಷದಿಂದಲೇ ಅವರು ಚಿರಸ್ಮರಣಿಯರೆನ್ನಿಸುತ್ತಾರೆ. ಬಡ ವಿದ್ಯಾರ್ಥಿಗಳೆಂದರೆ ಅದೇನೋ ವಿಶೇಷವಾದ ಮಮತೆ. ಅವರಿಗೆ ಪ್ರವೇಶ ಕೊಡಿಸುವುದರಲ್ಲಿ, ಹಾಸ್ಟೆಲ್ ಕಲ್ಪಿಸುವುದರಲ್ಲಿ ಸದಾ ಮುಂದು. ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿಯೂ ನೆರವು ನೀಡುತ್ತಿದ್ದ ಉದಾರರು.
 ಚನ್ನಗಿರಿ  ತಾಲೂಕಿನ ದೇವರಹಳ್ಳಿ ಗ್ರಾಮದ ಲಕ್ಷ್ಮೀಪುರ ತಾಂಡಾದವರಾದ ನಾಯ್ಕ್, ಸಹ್ಯಾದ್ರಿ ಕಾಲೇಜಿನಲ್ಲಿಯೇ ಓದಿದವರು. ಅನಂತರ ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಲ್ಲಿಯೇ ಹಿಂದಿ ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದರು. 1993ರಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ವರ್ಗಾವಣೆಯಾಗಿ ಬಂದು, ಇಲ್ಲಿಯೇ ನೆಲೆ ನಿಂತವರು.
ಗ್ರಾಮಾಂತರ ಪ್ರದೇಶದಿಂದ ಬಂದಿರುವುದರಿಂದಲೋ ಏನೋ, ಆ ಪ್ರದೇಶಗಳಿಂದ ಬರುವ ಮಕ್ಕಳ ಮೇಲೆಬಗ್ಗೆ ವಿಶೇಷವಾದ ಮಮತೆ, ಕಾಳಜಿ. ಎನ್ನೆಸ್ಸೆಸ್         ಅಧಿಕಾರಿಯಾಗಿದ್ದಾಗ ಅವರು ಮಾಡಿದ ಕೆಲಸಗಳು ಇಂದಿಗೂ ಮಾದರಿಯಾಗಿವೆ. ಅದೇ ರೀತಿ ಹಾಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿಯಾಗಿಯೂ ಕೆಲಸ ಮಾಡುತ್ತಿದ್ದರು. ಅವರ ಸಮಸ್ಯೆಗಳಿಗೆ ತತಕ್ಷಣ ಸ್ಪಂದಿಸುತ್ತಿದ್ದರು. ಅತ್ಯುತ್ತಮ ಕ್ರೀಡಾಪಟುವಾಗಿ, ಕಬಡ್ಡಿ ಆಟಗಾರನಾಗಿ, ಕುಸ್ತಿಪಟುವಾಗಿ ರಾಷ್ಟ್ರಮಟ್ಟದಲ್ಲಿ ಅವರು ಮಿಂಚಿದ್ದರು.
 ಲಂಬಾಣಿ ಜನಾಂಗದವರಾದ ಅವರು ಆ ಸಮುದಾಯದ ಕಲೆ, ಸಂಸ್ಕೃತಿ ಉಳಿಸಲು ವಿಶೇಷ ಪ್ರಯತ್ನ ಮಾಡಿದ್ದರು. ಲಂಬಾಣಿ ಭಾಷೆಯ ಉಳಿವಿಗೆ ರಾಷ್ಟ್ರಮಟ್ಟದಲ್ಲಿ ಯತ್ನಿಸಿದ್ದರು. ಬಂಜಾರಾ ಸಂಘದ ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಸಂಘಟನೆಯ ಉಪಾಧ್ಯಕ್ಷರೂ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಜನಾಂಗದ ಏಳಿಗೆಗೆ ಅಪಾರ ಕೆಲಸ ಮಾಡಿದ್ದಾರೆ. ‘ನಮ್ಮ ಜನಾಂಗದವರ ಏಳಿಗೆಗೆ, ಶಿಕ್ಷಣಕ್ಕೆ ನಾವೇ ನೆರವಾಗದಿದ್ದರೆ ಅವರಿಗೆ ನೆರವಾಗುವವರು ಯಾರು, ಅವರಿಗೆ ಸೌಲಭ್ಯ ಕಲ್ಪಿಸಿಕೊಡುವಲ್ಲಿ ವಿದ್ಯಾವಂತರಾದ ನಾವು ಹೋರಾಡಬೇಕು. ಶಿಕ್ಷಣದಿಂದ ಮಾತ್ರ ಸುಧಾರಣೆ ಸಾಧ್ಯ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ತಾಂಡಾದಲ್ಲಿ ಶಿಕ್ಷಣದ ಬೆಳಕು ಚಿಮ್ಮಬೇಕು ’ ಎಂದು ಹೇಳುತ್ತಿದ್ದರು. 
ಕಲೆ- ಸಾಹಿತ್ಯದ ಅಭಿಮಾನಿ, ಪೋಷಕರಾಗಿದ್ದ ಬುಧ ನಾಯ್ಕ್ ಅವರಿಗೆ ರಾಜಕೀಯದಲ್ಲೂ ವಿಶೇಷ ಆಸಕ್ತಿ. 2013ರ ವಿಧಾನಸಭಾ ಚುನಾವಣೆಗೆ ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷವೊಂದರಿಂದ ಟಿಕೆಟ್ ಬಯಸಿದ್ದರು. ಆದರೆ ಅವರ ಆಸೆ ನೆರವೇರಲಿಲ್ಲ. ರಾಜಕಾರಣಿಯಾಗಬೇಕೆಂಬ ಅವರ ಕನಸು ನನಸಾಗಲಿಲ್ಲ. ಅವರ ಅಗಲುವಿಕೆಯಿಂದ ಶಿಕ್ಷಕ ಮಿತ್ರನೊಬ್ಬನನ್ನು ಕಳೆದುಕೊಂಡಂತಾಗಿದೆ. ತಾವು ವಾಸಿಸುತ್ತಿದ್ದ ನಂಜಪ್ಪ ಬಡಾವಣೆಯಲ್ಲೂ ನಾಯ್ಕ್ ಸ್ನೇಹಮಯಿಯಾಗಿ, ಎಲ್ಲರ ಕಷ್ಟ-ಸುಖಗಳಿಗೆ ಸ್ಪಂದಿಸುವವರಾಗಿದ್ದರು. ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತ ಎಲ್ಲರಿಗೂ ಬೇಕಾದವರಾಗಿದ್ದರು. 
ಇಂತಹ ಒಬ್ಬ ಸಹೃದಯೀ, ಕ್ರಿಯಾಶೀಲ, ಜನಾನುರಾಗಿ ಶಿಕ್ಷಕನನ್ನು ನಗರದ ಜನತೆ ಕಳೆದುಕೊಂಡಂತಾಗಿದೆ. 
,,,,,,,,,,,,,,,,,,,,,,,,,,,,,,,,,,,

No comments:

Post a Comment