Monday 8 January 2018

ಡಿಪ್ಲೊಮಾದಲ್ಲಿ ರಾಜ್ಯಕ್ಕೆ ಮೊದಲಿಗ
ರೋಶನ್ ಡಿಸೋಜಾ



ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ಶಿಕ್ಷಣ ಕಲಿತರೆ  ಭವಿಷ್ಯ ನಿರ್ಮಾಣವಾಗುತ್ತದೆ. ದೇಶದ ಅಭಿವೃದ್ಧಿಗೆ ಶಿಕ್ಷಣ ಅವಶ್ಯ ಎಂದು ಹೇಳುತ್ತೇವೆ. ಈ ಹಿನ್ನೆಲೆಯಲ್ಲಿ ಇಂದು ಮಕ್ಕಳನ್ನು ತಪ್ಪದೇ ಪಾಲಕರು ಶಾಲೆಗೆ ಕಳುಹಿಸುತ್ತಿದ್ದಾರೆ. ಖಾಸಗಿಯಾಗಿರಬಹುದು, ಸರಕಾರಿ ಶಾಲೆಗಳಾಗಿರಬಹುದು, ತಮ್ಮ ಮಗು ಉತ್ತಮ ಪ್ರಜೆಯಾಗಬೇಕು, ವಿದ್ಯಾವಂತನಾಗಬೇಕೆಂಬ ಹಂಬಲ ಪಾಲಕರದ್ದಾಗಿದೆ.
ಇಂತಹ ಶಾಲೆಗಳಲ್ಲಿ ಕಲಿತ ಜಿಲ್ಲೆಯ ಎಷ್ಟೋ ಮಕ್ಕಳು ಇಂದು ಉತ್ತಮ ಸಾಧನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಧನೆ ಮೆಚ್ಚುವಂತಹದ್ದಾಗಿದೆ. ಇತ್ತೀಚೆಗೆ ನಡೆದ ಎಸ್ಸೆಸೆಲ್ಸಿಯಲ್ಲಿ ಭದ್ರಾವತಿಯ ವಿದ್ಯಾರ್ಥಿಯೊಬ್ಬ ರಾಜ್ಯಕ್ಕೆ ಮೊದಲ ರ‌್ಯಾಂಕ್ ಗಳಿಸಿದ್ದು ಇನ್ನೂ ನಮ್ಮಲ್ಲಿ ಹಸಿರಿರುವಾಗಲೇ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಇಂಜಿನೀ
ಯರಿಂಗ್‌ನಲ್ಲಿ ತೀರ್ಥಹಳ್ಳಿಯ ಬಾಲಕನೊಬ್ಬ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿ ಜಿಲ್ಲೆಯ ಹೆಸರನ್ನು ಇನ್ನಷ್ಟು ಮೇಲೇರಿಸಿದ್ದಾನೆ. ಈ ವಿದ್ಯಾರ್ಥಿ ಹೆಸರು ರೋಶನ್  ಡಿಸೋಜಾ .
ರೋಶನ್ ತೀರ್ಥಹಳ್ಳಿಯ ಇಂದಿರಾನಗರದ ತೀರ ಬಡಕುಟುಂಬದ ಹುಡುಗ. ಈತನ ತಂದೆ ರೊನಾಲ್ಡ್ ಗಾರೆ ಕೆಲಸ ಮಾಡಿ ಸಂಸಾರದ ಬಂಡಿ ಸಾಗಿಸುತ್ತಿದ್ದರೆ, ತಾಯಿ ಹೆಲೆರಿನಾ ಗೃಹಿಣಿ. ಇವರಿಗೆ ಇಬ್ಬರು   ಪ್ರತಿಭಾವಂತ ಗಂಡುಮಕ್ಕಳು. ರೋಶನ್ ಎಸ್ಸೆಸೆಲ್ಸಿಯಲ್ಲಿ ಇಲ್ಲಿನ ಸೇಂಟ್ ಮೇರೀಸ್‌ನಲ್ಲಿ ಓದಿ,ಶೇ. 81ರಷ್ಟು ಅಂಕವನ್ನು ಪಡೆದಿದ್ದಾನೆ. ನಂತರ ಪಿಯುವನ್ನು ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಓದಿ, ಡಿಪ್ಲೊಮಾವನ್ನು ಸಹ್ಯಾದ್ರಿ ಪಾಲಿಟೆಕ್ನಿಕ್‌ನಲ್ಲಿ ಮುಗಿಸಿದ್ದಾನೆ. ಈತ ಪ್ರತಿಭಾವಂತನಾದುದ್ದರಿಂದ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಬಳ್ಳಾರಿಯ ಜಿಂದಾಲ್ ಉಕ್ಕಿನ ಕಾರ್ಖಾನೆಗೆ ಆಯ್ಕೆಯಾಗಿದ್ದಾನೆ.
ಅಂದಿನ ಕಲಿಕೆಯನ್ನು ಅಂದೇ ಮನದಟ್ಟು ಮಾಡಿಕೊಳ್ಳಬೇಕು. ಆಗ ಯಾವುದೇ ಒತ್ತಡ ಇರುವುದಿಲ್ಲ. ಪರೀಕ್ಷೆಗಿಂತ ಮುನ್ನ ಪ್ರತಿ ವಿಷಯವನ್ನೂ ಮೂರು ಬಾರಿ ಪುನರ್ಮನನ ಮಾಡಿದೆ.ಜೊತೆಗೆ ಒಂದೇ ಒಂದು ದಿನವೂ ಕ್ಲಾಸಿಗೆ ಗೈರುಹಾಜರಾಗದೆ ಶೇ. 100ರಷ್ಟು ಹಾಜರಾತಿ ದಾಖಲಿಸಿದೆ. ಇದರಿಂದ ಸಾಧನೆಗೆ ಅನುಕೂಲವಾಯಿತು. ಮನೆಯಲ್ಲಿ ಎಷ್ಟೇ ಕೆಲಸವಿದ್ದರೂ, ಅದನ್ನೆಲ್ಲ ಪೂರೈಸಿ  ಓದು ಮುಂದುವರೆಸುತ್ತಿದ್ದೆ ಎನ್ನುವ ರೋಶನ್, ಇಂಟರ್ನೆಲ್ ಪರೀಕ್ಷೆಗೆ ಚೆನ್ನಾಗಿ ಓದುತ್ತಿದ್ದೆ. ಪ್ರಾಕ್ಟಿಕಲ್‌ಗಿಂತ ಥಿಯರಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೆ.  ಥಿಯರಿಯಲ್ಲೇ ಅತಿ ಹೆಚ್ಚು ಅಂಕ ಗಳಿಸಲು ಇದರಿಂದ ಸಾಧ್ಯವಾಯಿತು. ಜೊತೆಗೆ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಉಪನ್ಯಾಸಕರು ತುಂಬಾ ಪ್ರೋತ್ಸಾಹ ನೀಡಿದ್ದಾರೆ ಎಂದು ಮನದುಂಬಿ ನುಡಿಯುತ್ತಾನೆ.
ಕಾಲೇಜಿಗೆ ಮತ್ತು ಪಾಠಕ್ಕೆ ಎಂದೂ ಗೈರಾಗಬಾರದು. ಓದುವಾಗ ಎದುರಾಗುವ ಸಮಸ್ಯೆಗಳನ್ನೆಲ್ಲ ಮಾರನೆಯ ದಿನವೇ ಉಪನ್ಯಾಸಕರ ಬಳಿ ತೆರಳಿ ಬಗೆಹರಿಸಿಕೊಳ್ಳಬೇಕು. ಅವರ ಮೆಚ್ಚಿನ ವಿದ್ಯಾರ್ಥಿಯಾಗಬೇಕು. ಇದರಿಂದ ಉಪನ್ಯಾಸಕರೂ ಕೂಡ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹ ಕೊಡುತ್ತಾರೆ ಎನ್ನುವುದು ರೋಶನ್ ಅಭಿಪ್ರ್ರಾಯ. ಸಹ್ಯಾದ್ರಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಜೆ. ಟಿ. ಸುಂದರೇಶ್, ಮೆಕ್ಯಾನಿಕಲ್ ಇಂಜಿನೀಯರಿಂಗ್ ವಿಭಾಗದ ಮುಖ್ಯಸ್ಥ ಸುಭಾಶ್‌ಚಂದ್ರ, ಉಪನ್ಯಾಸಕರಾದ ನಿತಿನ್, ಗಂಗಾಧರ್ ಮೊದಲಾದವರ ಸಹಾಯವನ್ನು ಸ್ಮರಿಸುತ್ತಾನೆ.   
ಕೇವಲ ಓದಿನಲ್ಲಿ ಮಾತ್ರವಲ್ಲ, ಚಿತ್ರಕಲೆ ಮತ್ತು ಕ್ರೀಡೆಯಲ್ಲೂ ರೋಶನ್ ಮುಂದು. ಎಸ್ಸೆಸೆಲ್ಸಿಯವರೆಗೆ ಚಿತ್ರಕಲೆಯಲ್ಲಿ ಆತ ಗಳಿಸಿದ ಪ್ರಶಸ್ತಿಗಳಿಗೆ ಲೆಕ್ಕವೇ ಇಲ್ಲ. ನಂತರ ಓದಿನ ಒತ್ತಡ ಹೆಚ್ಚಾಗಿದ್ದರಿಂದ ಆದ್ಯತೆಯನ್ನು ಕಡಿಮೆ ಮಾಡಿ, ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ವಾಲಿಬಾಲ್, ಥ್ರೋಬಾಲ್ , ಕ್ರಿಕೆಟ್‌ನಲ್ಲಿ ಸದಾ ಮುಂದು. ಈತ ಡಿಪ್ಲೊಮಾ ಅಂತಿಮ ಪರೀಕ್ಷೆಯಲ್ಲಿ ಶೇ. 94.58ರಷ್ಟು ಅಂಕ ಗಳಿಸಿದ್ದಾನೆ. ಆರು ಸೆಮಿಸ್ಟರ್‌ನಲ್ಲಿ ಸರಾಸರಿ ಈತ ಗಳಿಸಿದ ಅಂಕ ಶೇ. 92ರಷ್ಟು. ಈಗ ಡಿಪ್ಲೊಮಾ ಸಿಇಟಿ  ಬರೆದಿದ್ದಾನೆ. ಮುಂದೆ ಜಿಂದಾಲ್‌ನಲ್ಲಿ ಕೆಲಸಕ್ಕೆ ಸೇರಬೇಕೇ ಅಥವಾ ಓದು ಮುಂದುವರೆಸಬೇಕೇ ಎನ್ನುವುದನ್ನು ಇನ್ನೂ ರೋಶನ್ ನಿರ್ಧಾರ ಮಾಡಿಲ್ಲ.
 ಕಷ್ಟಪಟ್ಟು ಕಲಿಸಿದ ಮಗ ಇಷ್ಟೊಂದು ಸಾಧನೆ ಮಾಡಿರುವುದು ಮರೆಯಲಾಗದ ಸಂದರ್ಭ. ಸಾಧನೆಯಿಂದ ಸಂತೋಷಗೊಂಡಿದ್ದೇನೆ ಎನ್ನುತ್ತಾರೆ ಆತನ ಪಾಲಕರು.
published on 18.6.16
..................................

No comments:

Post a Comment