Saturday 13 January 2018

ಸಮಾಜಸೇವಕಿಗೆ  ಸಹಕಾರಿ ಗೌರವ
ಜೆ. ಮಾಧವಿ

ಸಹಕಾರಿ ಸಂಘಗಳಲ್ಲಿ  ಮಹಿಳೆಯರು ಪದಾಧಿಕಾರಿಗಳಾಗಿ, ಅತ್ಯುತ್ತಮ ಸಾಧನೆ ಮಾಡುವುದು ವಿರಳ. ಈ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಿದ ಮಹಿಳೆಯರು ಇನ್ನೂ ವಿರಳ. ಆದರೂ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಸಹಕಾರ ಸಂಘದ ಅಭಿವೃದ್ಧಿಗೆ ತಮ್ಮನ್ನು ಅರ್ಪಿಸಿ ಕೊಂಡು, ಅದರ ಜೊತೆಗೆ ಸಮಾಜ ಸೇವೆಯನ್ನು ಮಾಡುತ್ತ ಈ ಬಾರಿಯ ರಾಜ್ಯ ಮಟ್ಟದ ಸಹಕಾರಿ ಪ್ರಶಸ್ತಿಯನ್ನು ನಗರದ ಸಾಧಕಿ  ಮಹಿಳೆ ಯೊಬ್ಬರು ಪಡೆದುಕೊಂಡಿದ್ದಾರೆ. ಅವರೇ ಜೆ. ಮಾಧವಿ. 
ಶಿವಮೊಗ್ಗದ ಜಯನಗರದಲ್ಲಿರುವ  ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯ ಖಜಾಂಚಿಯಾಗಿರುವ ಮಾಧವಿ, ಇಡೀ ದಿನವನ್ನು ಸಹಕಾರ ಸಂಘದ ಕೆಲಸ ಮತ್ತು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದಾರೆ. ನಗರದ ವಿವಿಧ ಸಹಕಾರಿ ಸಂಘಗಳಲ್ಲಿ ಮಹಿಳಾ ನಿರ್ದೇಶಕರಿದ್ದಾರೆ. ಆದರೆ ಪುರುಷ ನಿರ್ದೇಶ ಕರ ಮುಂದೆ ಇಂತಹವರ ಸಾಧನೆ ಬೆಳಕಿಗೆ ಬರುತ್ತಿಲ್ಲ.  ಮಾಧವಿ ತಮ್ಮ ಅಪಾರ ಬುದ್ಧಿಮತ್ತೆ ಮತ್ತು ಒಂದಿಲ್ಲೊಂದು ಹೊಸ ವಿಚಾರದಿಂದಾಗಿ ಅದನ್ನು ಅನುಷ್ಠಾನಗೊಳಿಸಲು ಮುಂದಾಗು ತ್ತಾರೆ. ಸಹಕಾರಿ ಸಂಘದಲ್ಲೂ ಮಹಿಳೆ ತನ್ನ ಇರುವುವಿಕೆಯನ್ನು ಸಾಬೀತುಪಡಿಸಬಹುದು ಎನ್ನುವುದಕ್ಕೆ ಅವರು ಉತ್ತಮ ಉದಾಹರಣೆ. ಈ ಹಿನ್ನೆಲೆಯಲ್ಲಿ ಅವರು  ರಾಜ್ಯ ಸಹಕಾರಿ ಪ್ರಶಸ್ತಿಗೆ ಇತ್ತೀಚೆಗೆ ಭಾಜನರಾಗಿದ್ದಾರೆ.
ನಗರದ ಹೆಸರಾತ ವೈದ್ಯೆ ಮತ್ತು ಸಮಾಜ ಸೇವಕಿಯಾಗಿದ್ದ ಡಾ. ಜಯಮ್ಮ ಅವರ ಪುತ್ರಿ ಯಾಗಿರುವ ಮಾಧವಿ, ತಾಯಿಯಂತೆಯೇ ಸಮಾಜ ಚಿಂತನೆಯಲ್ಲಿ ತೊಡಗಿಸಿಕೊಂಡವರು.  ಇವರು ಉಚಿತವಾಗಿ ಬಡ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳನ್ನು  ನಡೆಸುತ್ತಿದ್ದಾರೆ. ಗ್ರಾಮಾಂತ ರದ ಎಲ್ಲ ಜಾತಿಯ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದಾರೆ. ವಿವಿಧ ಕೋರ್ಸುಗಳನ್ನು ಓದುವ ಬಡಹೆಣ್ಣುಮಕ್ಕಳು ನಗರದಲ್ಲಿ ಬಂದು ಉಳಿದು ವಿದ್ಯಾಭ್ಯಾಸ ಮಾಡುವುದು ಇಂದಿನ ಕಾಲದಲ್ಲಿ ಕಷ್ಟದ ಕೆಲಸ. ಇದನ್ನರಿತೇ ತಾಯಿಯಂತೆಯೇ ಅವರ ನೆರವಿಗೆ ನಿಂತಿದ್ದಾರೆ.
ಜಯನಗರದಲ್ಲಿರುವ ಸರ್ವೋದಯ ವಿದ್ಯಾಸಂಸ್ಥೆಯ  ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದು, ಸದ್ಯ ನಿರ್ದೇಶಕರಾಗಿದ್ದಾರೆ. ಇವರು ಕಾರ್ಯದರ್ಶಿಯಾಗಿದ್ದಾಗ ಅಲ್ಲಿನ ಬಾಲ ಕಿಯರಿಗೆ ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ.
ಸೇವಾ ಮನೋಭಾವ ಎಲ್ಲರಲ್ಲೂ ಇರುವು ದಿಲ್ಲ. ಸಾಕಷ್ಟು ಹಣವಿದ್ದರೂ ಸೇವೆ ಮಾಡದವರು ಇದ್ದಾರೆ. ಆದರೆ ಮಾಧವಿ ಅವರು, ಸಮಾಜಕ್ಕೆ ಉಪಯೋಗವಾಗುವ ಕೆಲಸವನ್ನು ಮಾಡಬೇಕು. ಬಡವರಿಗೆ ನೆರವಾಗಬೇಕು ಎನ್ನುವ ಮನೋ ಭಾವವನ್ನು ಬೆಳೆಸಿಕೊಂಡವರು.   
ಇವರ ಪತಿ ಇಂಜಿನಿಯರ್ ಆಗಿದ್ದು, ಮಡದಿ ಮಾಡುವ ಎಲ್ಲ ಕೆಲಸದಲ್ಲೂ ಸದಾ ಬೆಂಬಲ ನೀಡುತ್ತಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಓದಿ ಅತಿ ಹೆಚ್ಚು ಅಂಕ ಗಳಿಸುವ ಮಕ್ಕಳಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಲಕ ಪ್ರತಿ ವರ್ಷ ನೆರವು ನೀಡುತ್ತಿದ್ದಾರೆ. ಇವರ ಮಾತೃಶ್ರೀ ಡಾ. ಜಯಮ್ಮ ಹೆಸರಲ್ಲಿ ಕುವೆಂಪು ವಿವಿಯಲ್ಲಿ ಪ್ರತಿವರ್ಷ ಇಂಗ್ಲಿಷ್ ಎಂಎಯಲ್ಲಿ ಅತಿ ಹೆಚ್ಚು ಅಂಕ ಪಡೆಯು ವವರಿಗೆ ನಗದು ಮತ್ತು ಪಾರಿತೋಷಕವನ್ನು  ಕೊಡುತ್ತಿದ್ದಾರೆ. 
ನಾವು ಬದುಕಿದರಷ್ಟೇ ಸಾಲದು, ನಮ್ಮ ಮುಂದಿನ ಪೀಳಿಗೆಯೂ ಈ ಸಮಾಜದಲ್ಲಿ ಬದುಕಬೇಕು, ಹೀಗಾಗಿ ಸುಂದರ, ಸಶಕ್ತ, ಸುಭದ್ರ ಸಮಾಜ ನಿರ್ಮಾಣವಾಗಬೇಕು. ಸಾಮಾಜಿಕ ಚಿಂತನೆ ಎಲ್ಲರಲ್ಲೂ ಬೆಳೆಯಬೇಕು ಎನ್ನುವ ಮಾಧವಿ, ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ, ಎಲ್ಲರೊಳಿತಿನ ಕೂಡ ನಮ್ಮ ಒಳಿತು ಎಂಬಂತಿರ ಬೇಕು. ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚೆಚ್ಚು ಮುಂದೆ ಬರಬೇಕು. ಸಿಗುವ ಸವಲತ್ತನ್ನು ಪಡೆದುಕೊಳ್ಳಬೇಕು. ಆಗ ಮಾತ್ರ ಮಹಿಳೆ ಆರ್ಥಿಕವಾಗಿ ಸದೃಢವಾಗಲು ಸಾಧ್ಯ ಎನ್ನುವ ಇವರು, ಪ್ರಾಮಾಣಿಕ ಪ್ರಯತ್ನ, ಸಾಧಿಸುವ ಛಲ, ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಕೆಲಸ ಮಾಡುವ ಮನೋಭಾವ ಇದ್ದರೆ ಪರಿಶ್ರಮಕ್ಕೆ ಫಲ ಇದ್ದೇ ಇದೆ ಎನ್ನುತ್ತಾರೆ.
 ಸಮಾಜ ಸೇವೆ ಹೆಸರಲ್ಲಿ  ಪ್ರಚಾರ ಬಯಸದೆ, ತಾವಾಯಿತು, ತಮ್ಮ ಕೆಲಸವಾಯಿತು ಎನ್ನುತ್ತ  ಆ ಸೇವೆ, ಕೆಲಸದಿಂದಲೇ ತೃಪ್ತಿ, ನೆಮ್ಮದಿ, ಸಂತಸ ಪಡೆಯುತ್ತಿದ್ದಾರೆ.
..............................................

No comments:

Post a Comment