Tuesday 16 January 2018

ರಂಗಪ್ರವೇಶಕ್ಕೆ ಅಣಿಯಾದ
ಎಸ್.ಪಿ.ಪ್ರೀತಿ


  ನಾಟ್ಯ ಸಂತೋಷದ ಭಾಷೆ, ಆರೋಗ್ಯದ ಪರಿಭಾಷೆ. ಇದರಲ್ಲಿ ಒಂದು ಸೆಳೆತವಿದೆ, ಮೋಹವಿದೆ, ವ್ಯಾಮೋಹವಿದೆ. ಇದಾದ ಬಳಿಕ ಅದೊಂದು ಮನರಂಜನೆಯಾಗುತ್ತದೆ. ಇಂದಿನ ಯುವಪೀಳಿಗೆ ವಿಶೇಷವಾಗಿ ಭರತನಾಟ್ಯದೆಡೆ ಸೆಳೆಯಲ್ಪಡುತ್ತಿದೆ. ಇದೊಂದು ವಿಶೇಷ ಎನ್ನಬಹುದು. ಜೊತೆಗೆ ಅಪಾರ ಸಾಧನೆಯನ್ನೂ ಮಾಡುತ್ತಿದ್ದಾರೆ. ಈ ರೀತಿಯಿಂದ  ಭರತನಾಟ್ಯ ಕಲಿಕೆಗೆ ಹೆಚ್ಚಿನ ಮಹತ್ವ ಬಂದಿದೆ. ಎಷ್ಟು ತನ್ಮಯತೆ ಮತ್ತು ಒತ್ತು ಕೊಟ್ಟು ಇದನ್ನು ಕಲಿಯುತ್ತಾರೋ ಅಷ್ಟು ಶಾಸ್ತ್ರಬದ್ಧವಾಗಿ, ಪ್ರಬುದ್ಧವಾಗಿ ಅದನ್ನು ಅಭಿನಯಿಸಲು ಅವರು ಶಕ್ತರಾಗುತ್ತಾರೆ.
ಈ ರೀತಿ ಪ್ರದರ್ಶನ ನೀಡುವ ನಗರದ ಎಸ್.ಪಿ. ಪ್ರೀತಿ ಜನವರಿ 29ರಂದು ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ. ಸಾಂಸ್ಕೃತಿಕ ನಗರಿ ಶಿವಮೊಗ್ಗೆಯ ರವೀಂದ್ರನಗರದ ಕುವರಿ ಪ್ರೀತಿ ತನ್ನ 5ನೆಯ ವಯಸ್ಸಿನಲ್ಲೇ  ಈ ಕ್ಷೇತ್ರಕ್ಕೆ ಅಡಿಯಿಟ್ಟವರು. ಮಗಳಲ್ಲಿ ನೃತ್ಯದ ಬಗ್ಗೆ ಇದ್ದ ಆಸಕ್ತಿ ಗಮನಿಸಿದ ತಂದೆ ಪೂರ್ಣಚಂದ್ರ ಮತ್ತು ತಾಯಿ ಪ್ರೇಮಾ ಮನೆಯ ಹತ್ತಿರವೇ ನೃತ್ಯ ಶಾಲೆ ನಡೆಸುತ್ತಿರುವ ಡಾ. ಕೆ.ಎಸ್. ಪವಿತ್ರಾ ಅವರ ಶಿಷ್ಯೆಯಾಗಿ ಸೇರಿಸಿದರು. ಕಲಿಕೆಯಲ್ಲಿ ತೀವ್ರ ಆಸಕ್ತಿ, ಶೃದ್ಧೆ ಹೊಂದಿದ್ದ ಪ್ರೀತಿ ಜೂನಿಯರ್ ಮತ್ತು ಸೀನಿಯರ್ ಗ್ರೇಡ್ ಪರೀಕ್ಷೆಯನ್ನು  ಮುಗಿಸಿದ ನಂತರ  ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ತೆರಳಿದರು. ಅಲ್ಲಿ ನೃತ್ಯ ಶಿಕ್ಷಣವನ್ನು ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಭರತನಾಟ್ಯ ಉಪನ್ಯಾಸಕಿ ಚೇತನಾ ರಾಧಾಕೃಷ್ಣ ಅವರಲ್ಲಿ ಆರಂಭಿಸಿದರು. ಚೇತನಾ ಅವರು ಮೈಸೂರಿನ ಜಯಲಕ್ಷ್ಮೀಪುರಂನಲ್ಲಿ ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈಗ ಅವರ ಶಿಷ್ಯೆಯಾಗಿ ಕಲಿಕೆಯನ್ನು ಮುಂದುವರೆಸಿದ್ದಾರೆ. 
ವಿದ್ಯಾಭ್ಯಾಸವನ್ನು ಸ್ವಾಮಿ ವಿವೇಕಾನಂದ ಆಂಗ್ಲ ಮಧ್ಯಮ ಶಾಲೆ, ವಿಕಾಸ ವಿದ್ಯಾ ಸಂಸ್ಥೆ ಮತ್ತು ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಪಡೆದು ಎಸ್‌ಆರ್‌ಎನ್‌ಎಮ್ ಕಾಲೇಜಿನಲ್ಲಿ ಅನ್ವಯಿಕ ವಿಜ್ಞಾನದಲ್ಲಿ ಪದವಿ ಪಡೆದು ಮೈಸೂರು ವಿವಿಯಲ್ಲಿ ಜೀವರಸಾಯನಶಾಸ್ತ್ರದಲ್ಲಿ ಎಂಎಸ್‌ಸಿ ಮುಗಿಸಿದ್ದಾರೆ.
ತನ್ನ ಕಲಿಕೆಯ ಅವಧಿಯಲ್ಲೇ ಪ್ರತಿಭೆ ಪ್ರದರ್ಶನ ಆರಂಭಿಸಿದ ಪ್ರೀತಿ, ಶಿವಮೊಗ್ಗದಲ್ಲಿ ಜರುಗಿದ 73ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕೊಡಚಾದ್ರಿ ಉತ್ಸವ, ಚಂದನೋತ್ಸವ, ಮಂಗಳೂರಿನ ಕುದ್ರೋಳಿ ದೇವಸ್ಥಾನ. ಮೈಸೂರು ದಸರಾ, ಭದ್ರಾವತಿ, ತೀರ್ಥಹಳ್ಳಿ ದಸರಾದಲ್ಲಿ, ದಾವಣಗೆರೆಯಲ್ಲಿ, ಬೆಂಗಳೂರಿನಲ್ಲಿ ನೀಡಿದ್ದಾರೆ. ಕಾಲೇಜು ದಿನಗಳಲ್ಲಿ ಅಂತರ್ ಕಾಲೇಜು, ಅಂತರ್ ವಿವಿ ನೃತ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶೃಂಗೇರಿ ಜೆಜೆಸಿಬಿಎಂ ಕಾಲೇಜಿನವರು ಪ್ರತಿವರ್ಷ ನಡೆಸುವ ಸಾಂಸ್ಕೃತಿಕ ಉತ್ಸವದಲ್ಲಿ ಸತತ ಮೂರು ವರ್ಷ ಪ್ರಥಮ ಸ್ಥಾನ ಪಡೆದ ಕೀರ್ತಿ ಇವರದ್ದು.
ತಮ್ಮ ಪ್ರತಿಭೆ ಮತ್ತು ಸಮರ್ಪಣಾ ಮನೋಭಾವಕ್ಕಾಗಿ 2010ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಸ್ಕಾಲರ್‌ಶಿಪ್ ಪಡೆದಿದ್ದಾರೆ. ಪ್ರಸ್ತುತ ವಿದ್ವಾನ್ ಪರೀಕ್ಷೆಯನ್ನು ತೆಗೆದುಕೊಂಡಿದ್ದು, ಮೇ ನಲ್ಲಿ ನಡೆಯಲಿರುವ ಈ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಭರತನಾಟ್ಯದ ಹೊರತಾಗಿ ಕರ್ನಾಟಕ ಸಂಗೀತದ ಹಾಡುಗಾರಿಕೆಯಲ್ಲಿ ಜೂನಿಯರ್ ಗ್ರೇಡ್ ಮುಗಿಸಿದ್ದಾರೆ. ಶಂಕರ ಚಾನೆಲ್‌ನಲ್ಲಿ ಅತಿಥಿ ನಿರೂಪಕಿಯಾಗಿಯೂ ಕೆಲಸ ನಿರ್ವಹಸಿದ್ದಾರೆ. ಅಕ್ರಿಲಿಕ್ಸ್‌ನಲ್ಲಿ ಕ್ಯಾನ್ವಾಸ್ ಪೇಂಟಿಂಗ್ ಇವರ ಇನ್ನೊಂದು ಹವ್ಯಾಸ. ಇದರಲ್ಲಿನ ಇವರ ಕಲಾಕೌಶಲ್ಯಕ್ಕೆ ಕಲಾಭಿಜ್ಞರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜೀವನದ ಎಲ್ಲ ಹಂತದಲ್ಲೂ ಕಲಾಸಕ್ತಿಯನ್ನು ಮೈಗೂಡಿಸಿಕೊಂಡು ಅದರಲ್ಲೇ ತಲ್ಲೀನರಾಗಿರುವ ಪ್ರೀತಿ ತನ್ನ ಕ್ರಿಯಾಶೀಲತೆಯನ್ನು ರಂಗಪ್ರವೇಶದ ಮೂಲಕ ಸಾದರಪಡಿಸಲು ಕಾತರರಾಗಿದ್ದಾರೆ. 
ಉದ್ಯೋಗದ ಜೊತೆಗೆ ಭರತನಾಟ್ಯದಲ್ಲೂ ಮುಂದುವರೆಯುವ ಆಸಕ್ತಿ ಇದೆ. ದಿನಕ್ಕೆ ಕೆಲವು ಗಂಟೆಯನ್ನಾದರೂ ನಾಟ್ಯಕ್ಕೆ ಮೀಸಲಿಡುತ್ತೇನೆ. ಜೊತೆಗೆ ನಾಟ್ಯ ಕ್ಷೇತ್ರದಲ್ಲಿ ಇನ್ನೂ ಅಪಾರ ತಿಳಿವಳಿಕೆ ಪಡೆಯುವ ಹಂಬಲವಿದೆ. ತಂದೆ-ತಾಯಿ ಮತ್ತು ಗುರುಗಳ ಆಶೀರ್ವಾದದಿಂದ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಹಂಬಲವಿದೆ ಎನ್ನುವ ಪ್ರೀತಿ, ಯಾವ ಕಲೆಯು ರಸಪೂರ್ಣವಾಗಿರುತ್ತದೆಯೋ  ಅದು ಹೃದಯವನ್ನು ತಟ್ಟುತ್ತದೆ, ಬಹುಕಾಲ ಮರೆಯದೇ ಉಳಿಯುತ್ತದೆ ಎನ್ನುತ್ತಾರೆ.
published on 28.1.17
........................................

No comments:

Post a Comment