Wednesday 24 January 2018


ಸಾವಯವ ಕೃಷಿ ಸಾಧಕ
ದುರ್ಗಪ್ಪ ಅಂಗಡಿ



ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಮುಂದಾಗಿದ್ದ ರೈತನೊಬ್ಬ ಇಂದು ಸಾವಯವ ಕೃಷಿಯ ಮೂಲಕ ಜಿಲ್ಲೆಯಲ್ಲಿ ಅತ್ಯುತ್ತಮ ಕೃಷಿಕ ಎನಿಸಿಕೊಂಡಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ. ಆತ್ಮವಿಶ್ವಾಸವೊಂದೇ ಮನುಷ್ಯನನ್ನು ಉನ್ನತಕ್ಕೇರಿಸಬಲ್ಲದು, ಸಾಧನೆಗೆ ದಾರಿಯಾಗಬಲ್ಲದು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ. ಅವರೇ ದುರ್ಗಪ್ಪ ಅಂಗಡಿ.
ದುರ್ಗಪ್ಪ ಕೃಷಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬೇಕೆಂದು ಕನಸು ಕಂಡಿದ್ದರು. ಆದರೆ ಮನೆಯಲ್ಲಿ ಇದಕ್ಕೆ ವಿರೋಧ ಬಂದಿತು. ಜೊತೆಗೆ ಮನೆಯನ್ನೇ ಬಿಡಬೇಕಾಯಿತು. ಸುಮಾರು 1.45 ಲಕ್ಷ ರೂ. ಸಾಲವನ್ನು ಇವರಿಗೆ ಹೊರಿಸಿ ಉಟ್ಟ ಬಟ್ಟೆಯಲ್ಲೇ ಪತ್ನಿಯೊಂದಿಗೆ ಮನೆಯಿಂದ ಹೊರಹಾಕಲಾಯಿತು. ಆನಂತರ ಉಳಿಯಲು ಮನೆ, ಸಾಮಗ್ರಿ ಖರೀದಿಸಿ ಸುಮಾರು 3 ಲಕ್ಷ ರೂ. ವನ್ನು ಖಾಸಗಿಯವರಿಂದ ಸಾಲವಾಗಿ ಪಡೆದರು. ಅದು ಬಡ್ಡಿ ಸಹಿತ ಸುಮಾರು 4.50 ಲಕ್ಷ ದಷ್ಟಾಗಿತ್ತು. ಅದನ್ನು ಮರಳಿಸಲಾಗದೆ ನಿರಾಶರಾದರು. ಆತ್ಮಹತ್ಯೆಯೇ ದಾರಿ ಎಂದು ತೀರ್ಮಾನಿಸಿದ್ದರು.
ಈ ವೇಳೆ ಚಂದನ ಕನ್ನಡವಾಹಿನಿಯಲ್ಲಿ ಬಂದ ಕೃಷಿ ಕಾರ್ಯಕ್ರಮದಲ್ಲಿ ರೈತನೊಬ್ಬ ತನಗಿದ್ದ 2 ಎಕ್ರೆ ಜಮೀನಿನಲ್ಲಿ 9 ಲಕ್ಷ ರೂ. ಆದಾಯ ಗಳಿಸಿರುವ ಕಾರ್ಯಕ್ರಮ ನೋಡಿ ತಾನೇಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಮರುಚಿಂತನೆ ನಡೆಸಿದರು. ಇದಕ್ಕೆ ಇನ್ನಿಬ್ಬರು ಮಿತ್ರರೂ ಸಹ ಸಲಹೆ ನೀಡಿದರು. 
ಆ ಪ್ರಕಾರ ತಮ್ಮ ಪತ್ನಿಯನ್ನು ಧರ್ಮಸ್ಥಳ ಸ್ವಸಹಾಯ ಸಂಘಕ್ಕೆ ಸೇರಿಸಿ ಒಂದು ಲಕ್ಷ ರೂ. ಸಾಲ ಪಡೆದರು. ಇದರಲ್ಲಿ 25 ಸಾವಿರ ರೂ. ನಲ್ಲಿ ಅಂಗಡಿ ತೆರೆದರು. ಉಳಿದ ಹಣದಲ್ಲಿ ಸಾಲದ ಬಡ್ಡಿ ಕಟ್ಟತೊಡಗಿದರು. ಇನ್ನೊಂದೆಡೆ, ತೊಂಡೆ ಕೃಷಿ ಆರಂಭಿಸಿದರು. ಇದರಲ್ಲಿ ಒಂದು ವಾರಕ್ಕೆ 10 ಕ್ವಿಂಟಾಲ್ ಬೆಳೆ ಬರತೊಡಗಿತು. 8 ತಿಂಗಳಲ್ಲಿ ಈ ಬೇಳೆಯಲ್ಲಿ  ಬರೋಬ್ಬರಿ  4 ಲಕ್ಷ ರೂ. ಆದಾಯ ಬಂದಾಗ ದುರ್ಗಪ್ಪ ಅವರಿಗಾದ ಆನಂದಕ್ಕೆ ಪಾರವೇ ಇರಲಿಲ್ಲ. ಎಲ್ಲಾ ಸಾಲ ತೀರಿಸಿದರು. ಈಗ ಅವರ ಬಳಿ 7.5 ಎಕರೆ ಜಮೀನಿದೆ. ಇದರಲ್ಲಿ 5 ಎಕರೆಯಲ್ಲಿ ಭತ್ತ, ಉಳಿದವುಗಳಲ್ಲಿ ವಿವಿಧ ತರಕಾರಿ ಬೆಳೆಯುತ್ತಾರೆ. ಕೇವಲ ತರಕಾರಿಯಿಂದಲೇ ಇವರ ವಾರ್ಷಿಕ ಆದಾಯ ಕನಿಷ್ಟ 5 ಲಕ್ಷ ರೂ. ಇದೆ.
 ಯಾವುದೇ ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಬಾರದು. ರಾಸಾಯನಿಕ ಬಳಸದೆ ಸಾವಯವದ ಮೂಲಕವೇ ಕೃಷಿ ಮಾಡಿದರೆ ಹೆಚ್ಚಿನ ಆದಾಯ ಸಾಧ್ಯ ಎನ್ನುವ ಅವರು, ತನ್ನ ಸಾಧನೆಗೆ ಶಿವಮೊಗ್ಗ ಕೃಷಿ, ತೋಟಗಾರಿಕೆ ವಿವಿಯವರು, ಕೃಷಿ, ತೋಟಗಾರಿಕೆ ಇಲಾಖೆಯವರು ನೀಡಿದ ಸಹಕಾರವನ್ನು ಸ್ಮರಿಸುತ್ತಾರೆ. 
ಎಸ್ಸೆಸೆಲ್ಸಿಯವರೆಗೆ ಓದಿರುವ ದುರ್ಗಪ್ಪ ಅವರಿಗೆ ಈಗ 43ರ ಹರಯ. ಶಿಕಾರಿಪುರ ತಾಲೂಕು ಸಾಸರವಳ್ಳಿ ಗ್ರಾಮದವರಾದ ಇವರು ತಮ್ಮ ಹೊಲದಲ್ಲಿ ಅವರು ತೊಂಡೆ, ಡಬಲ್ ಬೀನ್ಸ್, ಭತ್ತ, ಮೆಕ್ಕೆ ಜೋಳ, ಅಡಕೆ, ನಾಟಿ ಕೋಳಿ ಮತ್ತು ಜೇನು ಸಾಕಾಣಿಕೆ, ಮೇವಿನ ಹುಲ್ಲು, ಇತರೆ ಮಿಶ್ರಬೆಳೆಯನ್ನು ಬೆಳೆಯುತ್ತಿದ್ದಾರೆ. ದಿನವಿಡಿ ಹೊಲದಲ್ಲೇ ಕಾಯಕ ಮಾಡುತ್ತಾ ಕೃಷಿಗಾಗಿಯೇ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
ಇವರ ಸಾಧನೆ ಗಮನಿಸಿ ಈ ಬಾರಿ ಬೆಂಗಳೂರು ಕೃಷಿ ವಿವಿ ಡಾ. ಜಿ. ಕೆ. ವೀರೇಶ್ ಎಂಡೊಮೆಂಟ್ ಅವಾರ್ಡ್ ನೀಡಿ ಗೌರವಿಸಿದೆ. ಇದು ರಾಜ್ಯದ ಸಾವಯವ  ಕೃಷಿ ಸಾಧಕನಿಗೆ ಕೊಡುವ ಉನ್ನತ ಪ್ರಶಸ್ತಿ. ಇದರೊಟ್ಟಿಗೆ ಧರ್ಮಸ್ಥಳ ಸಂಘದಿಂದ ಉತ್ತಮ ಕೃಷಿಕ ಪ್ರಶಸ್ತಿ, ಶಿವಮೊಗ್ಗ ಕೃಷಿ, ತೋಟಗಾರಿಕೆ ವಿವಿಯಿಂದ  ಜಿಲ್ಲಾ ಪ್ರಗತಿಪರ ರೈತ ಪುರಸ್ಕಾರ ದೊರೆತಿದೆ. ಇತರೆ ಸಂಘ, ಸಂಸ್ಥೆಗಳೂ ಸಹ ಗೌರವಿಸಿವೆ. ಸುಮಾರು 9 ಪ್ರಶಸ್ತಿಗಳನ್ನು ಈವರೆಗೆ ಅವರು ಧರಿಸಿದ್ದಾರೆ.
4.11.17
   ..............................................

1 comment: