Wednesday 10 January 2018

ವೈಕಲ್ಯತೆ ಮೆಟ್ಟಿ ನಿಂತ
ಮಮತಾ ಆಚಾರ್


ಅಂಗವೈಕಲ್ಯತೆ ಸಾಧನೆಗೆ ಅಡ್ಡಿಯಾಗದು ಎನ್ನುವ ಮಾತಿದೆ. ಇದನ್ನು ಮೀರಿ ನಿಂತರೆ, ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು. ಇದಕ್ಕೊಂದು ಉತ್ತಮ ಉದಾಹರಣೆ ನಗರದ ಮಮತಾ ವಿ. ಆಚಾರ್. ವಿದ್ಯಾರ್ಥಿ ದೆಸೆಯಿಂದಲೇ ವೈಕಲ್ಯತೆ ಅಂಟಿಕೊಂಡರೂ ಇಂದಿಗೂ ಅದನ್ನು ಮೀರಿ ಸಾಧನೆ ಮಾಡುತ್ತಿದ್ದಾರೆ. ಮನಸ್ಸಿನಿಂದ ಅಂಗವೈಕಲ್ಯ ಎಂಬ ಶಬ್ದವನ್ನು ಕಿತ್ತೊಗೆದಿದ್ದಾರೆ. ಅದು ಕೇವಲ ದೇಹಕ್ಕೆ ತಗುಲಿರುವಂತಹುದು ಎಂದು ಅರಿತಿದ್ದಾರೆ.
ಮಮತಾ ಹುಟ್ಟಿನಿಂದ ಅಂಗವೈಕಲ್ಯರಲ್ಲ. ತನ್ನ 13ನೆಯ ವಯಸ್ಸಿನಲ್ಲಿ ಅಕಸ್ಮಾತ್ ಬಂದೊದಗಿದ ವೈಕಲ್ಯತೆಯನ್ನು ಮೆಟ್ಟಿ ನಿಂತು ಇಂದಿಗೂ ಏನನ್ನಾದರೂ ಹೊಸತನದಲ್ಲಿ ತೊಡಗುವ ಧೈರ್ಯವನ್ನು  ಹೊಂದಿದ್ದಾರೆ. ಮುಂಬೈನಲ್ಲಿ ಸುಮಾರು ಆರೇಳು ವರ್ಷಗಳ ಕಾಲ ಭರತನಾಟ್ಯ ಮತ್ತು ಕೂಚುಪುಡಿ ನೃತ್ಯವನ್ನು ಅಭ್ಯಸಿಸಿರುವ ಇವರು, ಅದರಲ್ಲಿ ಸಾಕಷ್ಟು ಅನುಭವವನ್ನು ಪಡೆದಿದ್ದಾರೆ. ಆನಂತರ ಎದುರಾದ ದೈಹಿಕ ತೊಂದರೆಯಿಂದ ಅದನ್ನು ಮುಂದುವರೆಸಲಾಗದೆ ಕಲಿಕೆ ನಿಲ್ಲಿಸಿದರು. ಮುಂಬೈ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಿದ್ದಾರೆ, ಇಂದಿಗೂ ಪ್ರದರ್ಶನ ನೀಡುತ್ತಿದ್ದಾರೆ. 
ಮುಂಬೈನಲ್ಲಿ ಕಲಾಗುರು ಮೇರಿ ಅವರಲ್ಲಿ ಕಲಿತ ನಂತರ ಹಲವಾರು ಪ್ರದರ್ಶನಗಳನ್ನು ಅಲ್ಲಿಯೇ ನೀಡಿ ಉತ್ತಮ ಕಲಾವಿದೆಯಾಗಬಲ್ಲೆ ಎಂಬ ಆಶೀರ್ವಾದವನ್ನು ಪಡೆದಿದ್ದಾರೆ. ಆದರೆ ಆ ಸಂದರ್ದಲ್ಲಿ ಬೆನ್ನಿನ ನರದಲ್ಲಿ ಕಾಣಿಸಿಕೊಂಡ ನೋವು ಇವರನ್ನು ಶಾಶ್ವತ ಅಂಗವಿಕಲೆಯನ್ನಾಗಿ ಮಾಡಿತು. ಅಲ್ಲಿಂದ ಭರತನಾಟ್ಯ ಮತ್ತು ಕೂಚುಪುಡಿ ಕಲಿಕೆ ನಿಲ್ಲಿಸಿದರು. ಈ ತೊಂದರೆಯಿಂದ ಕುಗ್ಗದ ಮಮತಾ, ಎರಡು ವರ್ಷ ಕಂಪ್ಯೂಟರ್ ಕಲಿಕೆ ನಡೆಸಿದರು. ಈ ವೇಳೆ ಇವರ ಕುಟುಂಬ ತವರಿಗೆ ಮರಳುವುದು ಅನಿವಾಂರ್ವಾಗಿದ್ದರಿಂದ ಶಿವಮೊಗ್ಗಕ್ಕೆ ವಾಪಸಾದರು. ಕೆಲವು ವರ್ಷ ಮನೆಯಲ್ಲೇ ಇದ್ದರಾದರೂ ನಂತರ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡರು.
2013ರಲ್ಲಿ ಬೆಂಗಳೂರಿನ ನೂಪುರ ಫೈನ್ ಆರ್ಟ್ಸ್ ಅಕಾಡೆಮಿ ಏರ್ಪಡಿಸಿದ್ದ ನೂಪುರ ಸಂಗಮದಲ್ಲಿ ಪಾಲ್ಗೊಂಡು ಅತ್ಯಂತ ಯಶಸ್ವಿ ಕಲಾವಿದೆ ಎಂಬ ಪ್ರಶಂಸಾಪತ್ರ ಪಡೆದಿದ್ದಾರೆ. ಇಂದಿಗೂ ಸಹ ಗೋಧಿ ಕಡ್ಡಿಯಲ್ಲಿ ವಿವಿಧ ಕಲಾಕೃತಿ ರಚಿಸುವುದು, ರಂಗವಲ್ಲಿ ಬಿಡಿಸುವುದು, ಯೋಗ, ಏರೋಬಿಕ್ಸ್‌ನಲ್ಲಿ ಪಾಲ್ಗೊಳ್ಳುವುದನ್ನು ಮಾಡುತ್ತಲೇ ಇದ್ದಾರೆ. ಇವರ ಸಾಧನೆ ಗಮನಿಸಿ ನಗರದ ಹಲವು ಸಂಘ-ಸಂಸ್ಥೆಗಳು ಸನ್ಮಾನಿಸಿವೆ. ಇತ್ತೀಚೆಗೆ ಜರುಗಿದ ವಿಶ್ವಕರ್ಮ ಜಯಂತಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಗೌರವಿಸಲಾಗಿದೆ. ಈ ಮಧ್ಯೆ ಒಂದು ವರ್ಷ ಗಮಕ ಕಲಿಕೆಯಲ್ಲಿ ತೊಡಗಿ ಅದರಲ್ಲೂ ಸಾಧನೆ ಮಾಡಿದ್ದಾರೆ.
ಇವರ ತಂದೆ ನಗರದ ಹೆಸರಾಂತ ಚಿನ್ನ-ಬೆಳ್ಳಿ ತಯಾರಕ 83 ಹರಯದ  ಎಂ.ಆರ್. ವೀರಾಚಾರ್. ಬಿಬಿ ರಸ್ತೆಯ ವಾಸಿಯಾದ ಇವರು ಮಗಳೊಂದಿಗೆ ವಾಸವಾಗಿದ್ದಾರೆ. ಮಗಳಿಗೆ ತಂದೆ, ತಂದೆಗೆ ಮಗಳು ಸಹಾಯ ಮಾಡುತ್ತ  ಬದುಕು ಸಾಗಿಸುತ್ತಿದ್ದಾರೆ.
ಅಂಗವೈಕಲ್ಯ ನಮ್ಮ ಸಾಧನೆಗೆ ತಡೆಯಾಗಬಾರದು. ನಮಗಿರುವ  ಉತ್ಸಾಹಕ್ಕೆ ಅಂಗವೈಕಲ್ಯತೆ ಬರಬಾರದು. ಅದು ಕೇವಲ ದೇಹಕ್ಕೆ ಮಾತ್ರ. ಜೊತೆಗೆ ವೈಕಲ್ಯತೆ ಶಾಪವಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ನಮ್ಮಲ್ಲಿ ಅದಮ್ಯ ವಿಶ್ವಾಸವನ್ನು ಬೆಳೆಸಿಕೊಂಡು ಯಾವುದಾದರೊಂದು ಸಾಧನೆಗೆ ಅಡಿಯಿಟ್ಟಲ್ಲಿ ಅದನ್ನು ಸಾಧಿಸಬಹುದು. ಆಗ ವೈಕಲ್ಯತೆ  ತೊಂದರೆಯಾಗದು ಎನ್ನುವುದು ಮಮತಾ ಅವರ ಅಭುಪ್ರಾಯ.
ಆತ್ಮವಿಶ್ವಾಸ ಮತ್ತು ಮುನ್ನುಗ್ಗುವ ಧೈರ್ಯವಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಮ್ಮೆದುರು ಇರುವ ಶಾಸ್ತ್ರೀಯ ನೃತ್ಯಗಾರ್ತಿ, ಟಿವಿ, ಸಿನಿಮಾ ನಟಿ ಸುಧಾಚಂದ್ರನ್, ಭಾರತದ ಟಿ -20 ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್ ನಾಯ್ಕ್, ತಮಿಳುನಾಡು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಪ್ರೀತಿ ಶ್ರೀನಿವಾಸನ್, ವ್ಹೀಲ್ ಚೇರ್ ಟೆನಿಸ್ ಆಟಗಾರ ಬೋನಿಫೇಸ್ ಪ್ರಭು, ಮೌಂಟ್ ಎವೆರೆಸ್ಟ್ ಏರಿದ ಅರುಣಿಯಾ ಸಿನ್ಹಾ, ಕ್ರೀಡಾಪಟು ಮಾಲತಿ ಹೊಳ್ಳ ಉದಾಹರಣೆಯಾಗಿದ್ದಾರೆ. ಇಂತಹವರ ಸಾಲಿನಲ್ಲಿ ಮಮತಾ ಆಚಾರ್ ಸಹ ನಿಲ್ಲುತ್ತಾರೆ. ಧೈರ್ಯಂ ಸರ್ವತ್ರ ಸಾಧನಂ ಎನ್ನುವುದಕ್ಕೆ ಇವರೆಲ್ಲ ಅತ್ಯುತ್ತ್ತಮ ಉದಾಹರಣೆಯಾಗಿದ್ದಾರೆ. 
,,,,,,,,,,,,,,,,,,,,,,,,,

No comments:

Post a Comment