Monday 22 January 2018

ವೃತ್ತಿ ಬೇರೆ, ಪ್ರವೃತ್ತಿ ಬೇರೆ

ಹನುಮಂತ ಪಾಟೀಲ


 ಪೊಲೀಸ್ ಇಲಾಖೆಗೂ ಸಾಹಿತ್ಯ, ಸಂಗೀತಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಪೊಲೀಸ್ ವೃತ್ತಿಯಲ್ಲಿದ್ದವರಿಗೆ ಇತರೆ ಹವ್ಯಾಸಗಳತ್ತ ತಲೆಹಾಕಲು ಪುರುಸೊತ್ತೇ ಇರುವುದಿಲ್ಲ. ಕೆಲಸದ ಒತ್ತಡದಲ್ಲಿ ಕುಟುಂಬದವರೊಂದಿಗೂ ಸರಿಯಾಗಿ ಬೆರೆಯಲಾಗದೆ, ಹಬ್ಬ-ಹರಿದಿನ ಆಚರಿಸಲಾಗದೆ ಎಲ್ಲೋ ಊಟ, ತಿಂಡಿ, ನಿದ್ದೆ ಮಾಡುವ ಸಂದರ್ಗಳೇ ಹೆಚ್ಚು. ಇಂತಹ ಜಂಜಡದ ಸೇವೆಯ ಮಧ್ಯೆ ಇದ್ದಾಗಲೂ  ಸಾಹಿತ್ಯ, ಸಂಗೀತ, ಬರವಣಿಗೆಯಲ್ಲಿ ತೊಡಗಿಸಿಕೊಂಡವರಿದ್ದಾರೆ.
ರಿಪ್ಪನ್‌ಪೇಟೆ ವಾಸಿ ಹನುಮಂತ ಎ. ಪಾಟೀಲ್ ನಿವೃತ್ತ ಪೊಲೀಸ್. ಈ ಹವ್ಯಾಸಗಳನ್ನು ಅಂಟಿಸಿಕೊಂಡು ಆನಂತರದ ದಿನಗಳಲ್ಲಿ ಇವೇ ಸಾಧನೆಗೆ ಕಾರಣವಾದವು. ಈ ವರ್ಷ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆಯಾಗುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದಾರೆ. ಸಾಹಿತ್ಯದ ಕ್ಷೇತ್ರದವರಲ್ಲದಿದ್ದರೂ ಆ ಕ್ಷೇತ್ರಕ್ಕೆ ಪ್ರವೇಶಿಸಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಅಷ್ಟೇ ಅಲ್ಲ, ಇದರಲ್ಲೇ ಬೆಳೆದು ಎಲ್ಲರೂ ಗುರುತಿಸುವಂತಾಗುವುದು ಇನ್ನೂ ಕಷ್ಟದ ಕೆಲಸ. ಇಂತಹ ಮಹತ್ಸಾಧನೆಯನ್ನು ಪಾಟೀಲರು ಮಾಡಿ, ಇತರರಿಗೂ ಮಾದರಿಯಾಗಿದ್ದಾರೆ. 
  ಸಾಧನೆ ಮೂಲಕ ಸಾಹಿತ್ಯ ಸರಸ್ವತಿಯನ್ನು ಒಲಿಸಿಕೊಂಡು, ಕನ್ನಡ ಸಾಹಿತ್ಯದ ಪ್ರಮುಖ ಕೃತಿಯನ್ನೆಲ್ಲ ಓದಿ ಅರ್ಥೈಸಿಕೊಂಡವರು. ನಿವೃತ್ತ ನಂತರ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಕವಿಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಾ ತಮ್ಮಲ್ಲಿ ಇನ್ನೂ ಸೃಜನಶೀಲತೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಹಿರಿಯ ಸಾಹಿತಿಗಳನ್ನು ಭೇಟಿ ಮಾಡಿ ಅನೇಕ ವಿಚಾರಗಳನ್ನು ಕೇಳಿ ತಿಳಿದುಕೊಂಡಿದ್ದಾರೆ. ಇವೆಲ್ಲ ಅವರ ಬರವಣಿಗೆಗೆ ಇನ್ನಷ್ಟು ಸಾಥ್ ನೀಡಿದವು. ಇದರ ಫಲವಾಗಿ ಅವರಿಂದ  9 ಕೃತಿಗಳು ಈವರೆಗೆ ಪ್ರಕಟಗೊಂಡಿವೆ.
ಹನುಮಂತ ಪಾಟೀಲ್ ಮೂಲತಃ ಹಾವೇರಿ ಜಿಲ್ಲೆ ಕುಂದಗೋಳ ತಾಲೂಕಿನವರು. 1975ರಿಂದೀಚೆ ಶಿವಮೊಗ್ಗ ಜಿಲ್ಲೆಯವರೇ ಅಗಿದ್ದಾರೆ. ಪೊಲೀಸ್ ಇಲಾಖೆಗೆ ಸೇರಿದ ನಂತರ ಶಿವಮೊಗ್ಗ, ತೀರ್ಥಹಳ್ಳಿ, ಮಾಳೂರು, ರಿಪ್ಪನ್ಪೇಟೆ, ಸೊರಬ ಮತ್ತು ಕಾರ್ಗಲ್ ಠಾಣೆಗಳಲ್ಲಿ ಕೆಲಸ ಮಾಡಿ ಜನಸ್ನೇಹಿ ಪೊಲೀಸ್ ಮಾಮಾ ಎನಿಸಿಕೊಂಡವರು. ಠಾಣೆಗೆ ಬರುತ್ತಿದ್ದವರ ನೋವನ್ನಾಲಿಸಿ ಅದಕ್ಕೆ ಧ್ವನಿಯಾಗಿ ಅದನ್ನು ಪರಿಹರಿಸಲು ಮುಂದಾಗುತ್ತಿದ್ದರು. ಇಂತಹ ಜನಪರ ಕಾಳಜಿಯ, ಸಮಾಜಮುಖಿ ವ್ಯಕ್ತಿ ಪೊಲೀಸ್ ಇಲಾಖೆಯಲ್ಲಿ ಅಪರೂಪ. ಹೀಗಾಗಿಯೇ ಅವರು ಜನರಿಗೆ ತೀರ ಹತ್ತಿರವಾಗಿದ್ದರು.     
2006ರಲ್ಲಿ ಮುಖ್ಯ ಪೇದೆಯಾಗಿ ನಿವೃತ್ತಿಯಾದ ನಂತರ ರಿಪ್ಪನ್‌ಪೇಟೆಯ ವಾಸಿಯಾಗಿರುವ ಇವರು, ಹಿಂದುಸ್ತಾನಿ ಸಂಗೀತದ ಆರಾಧಕರಾದರು. ಮೊದಲಿನಿಂದಲೂ ಸಂಗೀತ ಕೇಳುವುದರಲ್ಲಿ ತೀವ್ರ ಆಸಕ್ತಿ ಇದ್ದುದರಿಂದಲೋ ಏನೋ, ಇನ್ನಷ್ಟು ಅದರ ಹತ್ತಿರಕ್ಕೆ ಹೋಗಲು ಅನುವಾಯಿತು. ಗಜಲ್, ಭಾವಗೀತೆಗಳು, ಹಳೆಯ ಕನ್ನಡ ಮತ್ತು
ಹಿಂದಿ ಚಲನಚಿತ್ರ ಗೀತೆಗಳ ಆರಾಧಕರೂ ಹೌದು. ಪ್ರೇಕ್ಷಣೀಯ ಪ್ರಾಕೃತಿಕ ಪಾರಂಪರಿಕ ಮತ್ತು ಐತಿಹಾಸಿಕ ಸ್ಳಳಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಇವರು ಹೊಂದಿರುವ ಇವರು, ಇತಿಹಾಸದ ಬಗ್ಗೆಯೂ ವಿಶೇಷ ಒಲವನ್ನು ಹೊಂದಿದ್ದಾರೆ.
ಕೋವಿ ಮತ್ತು ಗುಬ್ಬಚ್ಚಿ ಗೂಡು,  ಕವನ ಬರುವುದಾದರೆ ಬರಲಿ ಎಂಬ ಕವನ ಸಂಕಲನ ಮತ್ತು ಯುಗಾದಿ ಒಂದು ಚಿಂತನೆ ಎಂಬ ಕೃತಿ ಹೊರತಂದಿದ್ದಾರೆ. ಇತರ ವಿಚಾರಗಳ ಕುರಿತಾಗಿ 6 ಕೃತಿ ಬರೆದಿದ್ದಾರೆ. ಇವರ ಸಾಧನೆ ಗಮನಿಸಿ ಅನೇಕ ಸನ್ಮಾನ, ಗೌರವಗಳು ಸಂದಿವೆ. ರಿಪ್ಪನ್‌ಪೇಟೆಯ ಹಲವು ಸಂಘಟನೆಗಳು, ಜಿಲ್ಲಾ ರಾಜ್ಯೋತ್ಸವದಲ್ಲಿ, ಸಾಹಿತ್ಯ ಹುಣ್ಣಿಮೆ, ಕೊಡಗು ಮತ್ತು ಹಾವೇರಿಯಲ್ಲಿ ನಡೆದ ಚುಟುಕು ಸಮ್ಮೇಳನದಲ್ಲಿ  ಸನ್ಮಾನಿತರಾಗಿದ್ದಾರೆ.
70ರ ಹರಯದಲ್ಲೂ ಸದಾ ಕ್ರಿಯಾಶೀಲ ವ್ಯಕ್ತಿತ್ವವನ್ನು ಉಳಿಸಿಕೊಂಡಿರುವ ಪಾಟೀಲರು, ಸಾಹಿತ್ಯದ ಕಾರ್ಯಕ್ರಮ ಅಕ್ಕಪಕ್ಕದ ತಾಲೂಕಿನಲ್ಲಿ ಎಲ್ಲಿ ಇದ್ದರೂ ಅಲ್ಲಿ ಹಾಜರಿರುತ್ತಾರೆ. ತಾಲೂಕಿನ ಅನೇಕ ವಿದ್ವಾಂಸರ, ಸಾಹಿತಿಗಳ ಜೊತೆ ಉತ್ತಮ ಸಂಬಂಧವಿಟ್ಟುಕೊಂಡು ಸಾಹಿತ್ಯದ ಕೃಷಿ ಮುನ್ನಡೆಸುತ್ತಿದ್ದಾರೆ.  ಇವರ ಸಾಹಿತ್ಯಾರಾಧನೆ ಮನ್ನಿಸಿ ತಾಲೂಕು ಸಾಹಿತ್ಯ ಪರಿಷತ್ ಸಮ್ಮೇಳನದ ಅಧ್ಯಕ್ಷತೆಯ ಗೌರವ ನೀಡಿದೆ. 

22,7,`17
 ............................

No comments:

Post a Comment