Saturday 13 January 2018

ಗಮಕಿ, ಲೇಖಕಿ, ಮನೋಚಿಕಿತ್ಸಕಿ
 ತಾರಾಪ್ರಸಾದ್

ಕಲೆ, ಸಾಹಿತ್ಯದ ಸಂಸರ್ಗ ಪಡೆದವನು ಹೃದಯಸಂಪನ್ನನಾಗುತ್ತಾನೆ. ಇವು ಮನುಷ್ಯನ್ನು ಅರಳಿಸುತ್ತವೆ. ಬುದ್ಧಿಯನ್ನು ಪ್ರಚೋದಿಸಿ ಹೃದಯವನ್ನು ತಲುಪುತ್ತವೆ. ನೂರಾರು ಜನರು ಇದನ್ನು ಸವಿಯುತ್ತಾರೆ. ಆಗ ಮಾತ್ರ  ಕಲೆಯೂ, ಕಲಾಕಾರನೂ, ಸಾಹಿತಿಯೂ ಪ್ರಸಿದ್ಧನಾಗುತ್ತಾನೆ.
ಲಲಿತಕಲೆಗಳಲ್ಲಿ ಒಂದಾದ ಗಮಕಕಲೆ ಜಿಲ್ಲೆಯ ಮಟ್ಟಿಗೆ ಬಹಳ ಖ್ಯಾತಿ ಪಡೆದಿದೆ. ಏಕೆಂದರೆ, ಅದರಲ್ಲಿ ಅಷ್ಟೇ ಮಹತ್ವದ ಸಾಧನೆಯನ್ನು ಮಾಡಿದವರು ಹಲವರಿದ್ದಾರೆ. ಇವರ ಸಾಧನೆ ರಾಜ್ಯವ್ಯಾಪಿಯಾಗಿದೆ, ರಾಜ್ಯವನ್ನು ದಾಟಿದೆ. ಗಮಕದ ಬಗ್ಗೆ ಸಂಶೋಧನೆ ಮಾಡಿ ಪುಸ್ತಕ ಬರೆದವರಿದ್ದಾರೆ. ಗಮಕ ಕಲಿಸುವವರಿದ್ದಾರೆ. ಇಂತಹ ಅಪೂರ್ವ ಕಲೆಯನ್ನು ಬೆಳೆಸುತ್ತಿರುವವರಲ್ಲಿ, ಪಸರಿಸುತ್ತಿರುವವರಲ್ಲಿ ಒಬ್ಬರು ತಾರಾಪ್ರಸಾದ್. ಇವರು ಕೇವಲ ಗಮಕಿ ಮಾತ್ರವಲ್ಲ, ಮನೋಚಿಕಿತ್ಸಕರೂ ಹೌದು. ಅಭಯಾಶ್ರಮವನ್ನು ಸ್ಥಾಪಿಸಿ ನೊಂದಜೀವಗಳಿಗೆ ಆಶ್ರಯ ನೀಡುತ್ತಿದ್ದಾರೆ.
1983ರಿಂದ ಗಮಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ತಾರಾಪ್ರಸಾದ್, ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಗಮಕ ಕಲಿಸಿದ್ದಾರೆ. ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ. ‘‘ಭಾವನಾತ್ಮಕ ಬುದ್ದಿವಂತಿಕೆ ಗಮಕದಿಂದ ಸಾಧ್ಯ’’ ಎಂಬ ವಿಷಯದಲ್ಲಿ ಪ್ರಬಂಧ ಬರೆದು 2009ರಲ್ಲಿ ಕೇಂದ್ರ ಸರ್ಕಾರದ ಹಿರಿಯ ಫೆಲೋಶಿಪ್ ಪಡೆದಿದ್ದಾರೆ. ಗಮಕದ ಬಗ್ಗೆ ಅಪಾರ ಜ್ಞಾನ, ಸಂಶೋಧನೆ ನಡೆಸಿರುವ ಇವರ ಗಮಕ ವ್ಯಾಖ್ಯಾನದಲ್ಲಿನ ಮಾತಿನ ಮೋಡಿಯಿಂದ ಕೇಳುಗರಿಗೆ ಮುದ ಉಂಟುಮಾಡುತ್ತದೆ.  ಪ್ರಾಚೀನ ಕಾವ್ಯಗಳನ್ನು ಮನಮುಟ್ಟುವಂತೆ ವ್ಯಾಖ್ಯಾನ ಮಾಡುವ ಇವರಿಗೆ ಸುವರ್ಣ ಕರ್ನಾಟಕ ಪತಂಜಲಿ ರತ್ನ ಎಂಬ ಬಿರುದೂ ಸಹ ದಕ್ಕಿದೆ.
ವಿನೋಬನಗರದ  ಮೊದಲ ಕ್ರಾಸ್‌ನಲ್ಲಿರುವ ತಮ್ಮ ಮನೆಯಲ್ಲಿ ‘ಶಾಂತಿ ಆಪ್ತ ಸಲಹಾ ಕೇಂದ್ರ’ವನ್ನು ಸ್ಥಾಪಿಸಿ, ಪ್ರತಿನಿತ್ಯ  ನೊಂದ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಾಂತ್ವನದ ಮೂಲಕ ಚಿಕಿತ್ಸೆ ನೀಡುತ್ತಿದ್ದಾರೆ. ಪತಿ-ಪತ್ನಿಯರ ಮಧ್ಯೆ ವಿರಸ ತಲೆದೋರಿದಾಗ ಅವರಿಗೆ ಬುದ್ಧಿ ಹೇಳಿ ಒಂದುಗೂಡಿಸುವ ಪವಿತ್ರ ಕೆಲಸವನ್ನು ಮಾಡಿಕೊಂಡು ಬಂದಿರುವ ಇವರು ನಿಜಕ್ಕೂ ಆದರ್ಶಪ್ರಾಯರು. 59ರ ಹರಯದಲ್ಲೂ ಹತ್ತು ಹಲವಾರು ಚಟುವಟಿಕೆಗಳಲ್ಲಿ ತೊಡಗಿಕೊಂಡು ಪಾದರಸದಂತೆ  ಓಡಾಡುತ್ತಾರೆ.
ಮನಃಶಾಸ್ತ್ರ ಮತ್ತು  ಕನ್ನಡದಲ್ಲಿ ಸ್ನಾತಕೋತ್ತರ ಎರಡು ಎಂಎ ಪದವಿ ಪಡೆದಿದ್ದಾರೆ. ಕಒರಿಯೆಯ ಮೇರೆಗೆ ಕರ್ನಾಟಕ ಮುಕ್ತ  ವಿವಿಗೆ ಮನಃಶಾಸ್ತ್ರದ 4 ಪುಸ್ತಕ ರಚಿಸಿಕೊಟ್ಟಿದ್ದಾರೆ.  ಗಮಕ ಪ್ರದೀಪ ಎಂಬ ಕೃತಿ ರಚಿಸಿದ್ದು, ಇದನ್ನು ವಿವಿಯ ಪ್ರಸಾರಾಂಗವೇ ಮುದ್ರಿಸಿದೆ. ಆಕಾಶವಾಣಿ, ದೂರದರ್ಶನದಲ್ಲಿ ಇವರ ಹಲವಾರು ಗಮಕ ಕಾರ್ಯಕ್ರಮ ಪ್ರಸಾರವಾಗಿದೆ. ನೈತಿಕ ಶಿಕ್ಷಣದ ಬಗ್ಗೆ ನೂರಾರು ಉಪನ್ಯಾಸಗಳನ್ನು ನಾಡಿನಾದ್ಯಂತ, ಶಾಲಾ, ಕಾಲೇಜುಗಳಲ್ಲಿ ನೀಡುವುದರ ಮೂಲಕ ಹೆಸರುವಾಸಿಯಾಗಿದ್ದಾರೆ.
ಮೂಲತಃ ತರಿಕೆರೆ ತಾಲೂಕಿನ ಲಿಂಗದಹಳ್ಳಿಯವರಾದ ತಾರಾಪ್ರಸಾದ್ ಮದುವೆಯಾದ್ದು  ಹರಿಪ್ರಸಾದ್ ಇವರನ್ನು. ಇವರು ತೀರ್ಥಹಳ್ಳಿ ತಾಲೂಕಿನ ಬಸವಾನಿ ಗ್ರಾಮದವರು. ಬಸವಾನಿಯಲ್ಲಿ ಅಭಯಾಶ್ರಮವನ್ನು ಈ ದಂಪತಿ ಸ್ಥಾಪಿಸಿ, ನಡೆಸುತ್ತಿದ್ದಾರೆ. ಇಲ್ಲಿ ನೊಂದ ಜೀವಗಳಿಗೆ ಆಶ್ರಯ ನೀಡಲಾಗುತ್ತಿದೆ.
ತಾರಾಪ್ರಸಾದ್ ಲೇಖಕಿಯಾಗಿಯೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಈವರೆಗೆ 3 ಕೃತಿಗಳನ್ನು ಅವರು ರಚಿಸಿದ್ದಾರೆ. ಅವುಗಳೆಂದರೆ, ಗಮಕ ಸಂಪದ, ಸ್ಫೂರ್ತಿಯ ಸೆಲೆ, ವಾತ್ಸಲ್ಯದ ನೆಲೆ ಮತ್ತು ಸಪ್ತಪದಿ. ವಿಮುಕ್ತಿ, ಮೂರ್ಖರ ಮೇಳ, ಸಂಜೆಯ ನೆರಳು ಎಂಬ 3 ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ.  ರಂಗಪ್ರಯೋಗ ಕಂಡ ಚಾಂಡಾಲಿಕಾ ನಾಟಕಕ್ಕೆ ಹಾಡುಗಳನ್ನು ಬರೆದುಕೊಟ್ಟಿದ್ದಾರೆ. ಮನೆಯಲ್ಲಿಯೇ ವಿವಿಧ ಆಹಾರೋತ್ಪನ್ನಗಳನ್ನು ತಯಾರು ಮಾಡಿ ಮಾರುಕಟ್ಟೆಬಿಡುವ ಕಾಯಕವನ್ನೂ ನಡೆಸುತ್ತಿದ್ದಾರೆ.
ಲಲಿತಕಲೆಗಳಿಗೆ ಪ್ರೋತ್ಸಾಹ ಮತ್ತು ಕಲಾವಿದರ ಯೋಗಕ್ಷೇಮಕ್ಕಾಗಿ ಲಲಿತ ಕಲಾ ಕೇಂದ್ರವನ್ನು ಸ್ಥಾಪಿಸಿ ಅದರ ಅಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಯ ಮೂಲಕ ಪ್ರೌಢಶಾಲಾ ಪಠ್ಯಾಧಾರಿತ ಕಾವ್ಯಭಾಗವನ್ನು ವಾಚನ ಮತ್ತು ವ್ಯಾಖ್ಯಾನದ ಮೂಲಕ ಸಿದ್ಧಪಡಿಸಿ, ಅವುಗಳನ್ನು ಸುಮಾರು 900 ಸಿಡಿ ಮೂಲಕ ಶಾಲೆಗಳಿಗೆ ವಿತರಿಸಿದ್ದಾರೆ.
ಜಿಲ್ಲಾ ಬಾಲ ನ್ಯಾಯ ಮಂಡಳಿಯ ಸದಸ್ಯರೂ ಆಗಿದ್ದಾರೆ. ಇವರ ಪ್ರತಿಭೆಗೆ ಹಲವು ಪ್ರಶಸ್ತಿ, ಪುರಸ್ಕಾರ ಮತ್ತು ಬಿರುದುಗಳು ದಯಪಾಲಿಸಲ್ಪಟ್ಟಿವೆ.
24.12.16
.............................................

No comments:

Post a Comment