Tuesday 23 January 2018

ಬೀಜದುಂಡೆಯ ಕೇಂದ್ರಬಿಂದು 
ಬಾಲಕೃಷ್ಣ ನಾಯ್ಡು


ಜಿಲ್ಲೆಯಲ್ಲಿ ಬೀಜದುಂಡೆ ಅಭಿಯಾನದ ಬಗ್ಗೆ ಕೇಳದವರಿಲ್ಲ. ಆದರೆ ಇದನ್ನು ಜಿಲ್ಲೆಗ ತಂದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಿ ಯಶಸ್ವಿಗೊಳಿಸಿದವರಾರು, ಇವರ ಹಿಂದೆ ಯಾರ‌್ಯಾರು ಇದ್ದಾರೆ ಎನ್ನುವುದು ಮಾತ್ರ ಬಹುತೇಕರಿಗೆ ಗೊತ್ತಿಲ್ಲ. ಈ ಅಭಿಯಾನದ ರೂವಾರಿ ಅಥವಾ ಕೇಂದ್ರಬಿಂದು ಬಾಲಕೃಷ್ಣ ನಾಯ್ಡು.
ಇವರು ಸಿಹಿಮೊಗೆ ಕ್ರಿಕೆಟ್ ಅಕಾಡೆಮಿಯ ಸ್ಥಾಪಕ, ರಾಘವೇಂದ್ರ ಇಂಜಿನಿಯರಿಂಗ್ಸ್‌ನ ಮಾಲಕ. ಕ್ರಿಕೆಟ್ ಅಕಾಡೆಮಿ ಮೂಲಕ ಅತಿ ಹೆಚ್ಚು ಜನರ ವಿಶ್ವಾಸ ಗಳಿಸಿದ್ದಾರೆ. ಭಾರತೀಯ ಕಿಸಾನ್ ಸಂಘದ ಮುಖ್ಯಸ್ಥರಾಗಿರುವ ನೆಲಮಂಗಲ ಸಮೀಪದ ಕಾಸರಘಟ್ಟದ ಜಿ. ಗಂಗಾಧರ ಅವರ ಅವರ ಮೂಲಕ ಜಿಲ್ಲೆಗೆ ಬೀಜದುಂಡೆ ಅಭಿಯಾನವನ್ನು ಪರಿಚಯಿಸಿದ್ದಾರೆ. ನಾಯ್ಡು ಅವರಿಗೆ ಬೆಂಬಲವಾಗಿ ನಿಂತವರು ಉತ್ತಿಷ್ಠ ಭಾರತದ ಸದಸ್ಯರು.
ನಾಯ್ಡು ಅವರು ಫೆಬ್ರುವರಿಯಲ್ಲಿ ಈ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ. ಸಂತೆಕಡೂರಿನ ಪರಿಸರ ಅದ್ಯಯನ ಕೇಂದ್ರದೊಡಗೂಡಿ ಪ್ರತಿ ತಾಲೂಕಿನಲ್ಲೂ ಸಂಚರಿಸಿ ತಾಲೂಕು ಕೇಂದ್ರದಲ್ಲಿ ಶಿಕ್ಷಕರನ್ನು ಸೇರಿಸಿ ಅವರಿಗೆ ಈ ಅಭಿಯಾನದ ಬಗ್ಗೆ ಒಂದು ದಿನದ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟಿದ್ದಾರೆ. ಇದರಿಂದ ಪ್ರೇರಿತರಾದ ಶಿಕ್ಷಕರು ಪ್ರತಿ ಶಾಲೆಯಲ್ಲಿ ಲಕ್ಷಾಂತರ ಬೀಜದುಂಡೆ ತಯಾರಿಸಿದರು. ಮಕ್ಕಳಂತೂ ಸಂತೋಷದಿಂದ ಪಾಲ್ಗೊಂಡಿದ್ದಾರೆ.
ಆಗಸ್ಟ್ ಆರಂಭದವರೆಗೆ ಜಿಲ್ಲೆಯಲ್ಲಿ ಸುಮಾರು 14 ಲಕ್ಷ ಬೀಜದುಂಡೆ ತಯಾರಿಸಿ ಆ ಪೈಕಿ 10 ಲಕ್ಷದಷ್ಟನ್ನು  ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಬಿತ್ತನೆ ಮಾಡಲಾಗಿದೆ. ಪರಿಸರ ರಕ್ಷಣೆಗೆ ಕಂಕಣತೊಟ್ಟು ಈ ಅಭಿಯಾನವನ್ನು ಮಹಾಭಿಯಾನವನ್ನಾಗಿ ಮಾರ್ಪಡಿಸಿ ನಾಯ್ಡು ಅವರು ಹೆಸರು ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಇದಕ್ಕೆ ಕೈಜೋಡಿಸಿದವರು ಸಾವಿರಾರು ಸಂಖ್ಯೆಯ ಮಕ್ಕಳು.
ಎರಡನೆಯ ಹಂತದ ಬೀಜದುಂಡೆ ಅಭಿಯಾನ ಮತ್ತೆ ಆರಂಭವಾಗಿದೆ. ಆದರೆ ಮಳೆ ಕಡಿಮೆ ಇರುವುದರಿಂದ ಬಿತ್ತನೆಯನ್ನು ಸದ್ಯಕ್ಕೆ ತಟಸ್ಥಗೊಳಿಸಲಾಗಿದೆ. ಇಷ್ಟೆಲ್ಲ ಪರಿಸರದ ತುಡಿತವನ್ನಿಟುಕೊಂಡ ನಾಯ್ಡು, ತಮ್ಮ ಬಿಡುವಿಲ್ಲದ ಉದ್ದಿಮೆ, ಅಕಾಡೆಮಿಯ ಕೆಲಸದ ಮಧ್ಯೆಯೂ ಸದಾ ಯಾವುದಾದರೊಂದು ಜನಮುಖಿ ಕೆಲಸದತ್ತಲೇ ಚಿಂತನೆ ಮಾಡುತ್ತಾರೆ.
ಮುಂದಿನ ದಿನಗಳಲ್ಲಿ ಔಷಧಿ ಸಸ್ಯಗಳನ್ನು ಬೀಜದುಂಡೆ ಮಾಡಿ, ಆಯ್ದ ಪ್ರದೇಶಗಳಲ್ಲಿ ಬಿತ್ತನೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದಾರೆ. ಇದೇ ರೀತಿ ಭತ್ತದ ಬೀಜದುಂಡೆಯನ್ನು ಮಾಡಿ ಗದ್ದೆಗಳಲ್ಲಿ ಬಿತ್ತನೆ ಮಾಡುವ ಮಹತ್ತರ ಯೊಜನೆ ಇವರ ಮುಂದಿದೆ. ಇದಕ್ಕೆ ರೈತರನ್ನು ಮತ್ತು ಗ್ರಾಮಾಂತರ ವಾಸಿಗಳನ್ನು ಸೇರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭತ್ತ ಬೆಳೆಯುವವರ ಸಂಖ್ಯೆ ತೀವ್ರ ಇಳಿಮುಖವಾಗುತ್ತಿರುವುದರಿಂದ ಮತ್ತು ಜನರ ಅತಿ ಮುಖ್ಯ ಆಹಾರವಾಗಿರುವುದರಿಂದ ಇದನ್ನು ಇನ್ನಷ್ಟು ಪ್ರಮಾಣದಲ್ಲಿ ಬೆಳೆಯಲು ಪ್ರೇರೇಪಿಸುವುದು ಇದರ ಮುಖ್ಯ ಉದ್ದೇಶವಾಗಿದೆ. 
ತಮ್ಮ ಈ ಕಾರ್ಯದಲ್ಲಿ ಅನೇಕ ಅರಣ್ಯಾಧಿಕಾರಿಗಳು ಮತ್ತು ಮಿತ್ರರು ವಿವಿಧ ರೀತಿಯಲ್ಲಿ ನೆರವಾಗಿದ್ದನ್ನು ಅವರು ಸ್ಮರಿಸುತ್ತಾರೆ. ವಿಶೇಷವಾಗಿ ಉತ್ತಿಷ್ಠ ಭಾರತದ ಸದಸ್ಯರಾದ  ಗಜಾನನ ಐತಾಳ್, ಶ್ರೀನಿಧಿ ಹೆಬ್ಬಾರ್, ಜಿ. ಕೆ. ವೆಂಕಟೇಶ್, ಮನೋಜ್ ಉಪಾಧ್ಯಾಯ ಅವರ ಶ್ರಮ  ಮರೆಯಲಾಗದ್ದು ಎನ್ನುತ್ತಾರೆ. ಅದೇ ರೀತಿ ಮಣ್ಣು, ಸೆಗಣಿ, ಬೀಜವನ್ನು ಅನೇಕ ಮಿತ್ರರು ಉಚಿತವಾಗಿ ನೀಡಿದ್ದನ್ನು ನೆನೆಪಿಸುತ್ತಾರೆ.   
ವಿಶ್ವದ ತಾಪಮಾನ ದಿನೇದಿನೇ ಏರಿಕೆಯಾಗುತ್ತಲೇ ಇದೆ. ಇನ್ನೊಂದೆಡೆ ಅರಣ್ಯ ನಾಶವೂ ಮುಂದುವರೆದಿದೆ. ಸರ್ಕಾರ ಮತ್ತು ಜನರು ಇದರ ಪರಿವೆಯೇ ಇಲ್ಲದೆ ತಮ್ಮ ವ್ಯವಹಾರ, ಕೆಲಸದಲ್ಲಿ ನಿರತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಮ್ಮ ಭವಿಷ್ಯವನ್ನು  ಕಟ್ಟಿಕೊಳ್ಳುವ, ಕೆಲವೇ ಜನರಿಂದ ಪ್ರಾರಂಭವಾದ ಯೋಜನೆ ಬೀಜದುಂಡೆ. ಇದನ್ನು ಜಿಲ್ಲೆಯಲ್ಲಿ ಬಿತ್ತಿದವರು ಬಾಲಕೃಷ್ಣ ನಾಯ್ಡು ಅವರು.
26.8.17
...............................

No comments:

Post a Comment