Tuesday 23 January 2018

ವಿಶ್ವ ದಾಖಲೆಯ ಪ್ರಾಧ್ಯಾಪಕ 
 ಅರವಿಂದ ಮಲ್ಲಿಕ್
....................................

ಉತ್ತಮ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣವನ್ನು ಹೇಗೆ ಕೊಡಬಲ್ಲೆ ಎನ್ನುವುದರ ಬಗ್ಗೆ ಸದಾ ಯೋಚಿಸುತ್ತಾನೆ. ಇದಕ್ಕಾಗಿ ಶಿಕ್ಷಕನೂ ಕೂಡ ವಿದ್ಯಾರ್ಥಿಗಳಂತೆಯೇ ದಿನನಿತ್ಯ ಹೊಸ ಚಿಂತನೆಗಳಲ್ಲಿ, ಸಂಶೋಧನೆಗಳಲ್ಲಿ ತನ್ನನ್ನು ಅಳವಡಿಸಿಕೊಳ್ಳುತ್ತಾನೆ. 
ಡಿ.ಎಂ ಅರವಿಂದ್ ಮಲ್ಲಿಕ್ ಶಿವಮೊಗ್ಗದ ಪೆಸಿಟ್ ಕಾಲೇಜಿನ ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ. ಮೊಬೈಲ್ ಮೂಲಕವೇ ವಿದ್ಯಾರ್ಥಿಗಳಿಗೆ ಪಾಠ ಮಾಡಬಲ್ಲ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಫ್ಲಿಫ್ಟ್ ಕ್ಲಾಸ್ ರೂಪಿಸಿದ ಕೀರ್ತಿ ಇವರದದ್ದು. ಡಿಸೈನ್ ಥಿಂಕಿಂಗ್ ಎಂಬ ಹೊಸ ಪರಿಕಲ್ಪನೆಯನ್ನೂ ಹುಟ್ಟುಹಾಕಿದ್ದಾರೆ. ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಂನ್ನು ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೇಗೆ ಬಳಸಿಕೊಳ್ಳಬಹುದೆನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಇವುಗಳ ಮೂಲಕವೇ ತಮ್ಮ ಸಂದೇಹವನ್ನು ಪರಿಹರಿಸಿಕೊಳ್ಳುತ್ತಿದ್ದಾರೆ. ಜೊತೆಗೆ, ಮಾರನೆಯ ದಿನ ಪಾಠ ಮಾಡುವ ಅಧ್ಯಾಯದ ಕೆಲವು ವಿಚಾರಗಳನ್ನು ಮುನ್ನಾದಿನವೇ ಮಕ್ಕಳಿಗೆ ತಿಳಿಸಿ ಅವರಲ್ಲಿ ಕುತೂಹಲ, ಆಸಕ್ತಿ ಹೆಚ್ಚುವಂತೆ ಮಾಡುತ್ತಿದ್ದಾರೆ.
  ಪಾಠ ಮಾಡುವ ವಿಚಾರದಲ್ಲಿ ಏನೆಲ್ಲ ನಾವೀನ್ಯತೆಯನ್ನು ಅಳವಡಿಸಿಕೊಳ್ಳಬಹುದು ಎನ್ನುವುದರ ಬಗ್ಗೆಯೇ ಸದಾ ಚಿಂತಿಸುವ ಅರವಿಂದ್, ಬಿಇ, ಎಂಬಿಎ ಪದವೀಧರರು. ತುಮಕೂರಿನಲ್ಲಿ ಬಿಇ ಮುಗಿಸಿ ಮಣಿಪಾಲದಲ್ಲಿ ಎಂಬಿಎ ಓದಿ, ಮಣಿಪಾಲ್ ಪ್ರೆಸ್‌ನ ಮಾರ್ಕೆಟಿಂಗ್, ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡಿ 2011ರಿಂದ ಪೆಸಿಟ್‌ನಲ್ಲಿ ಅಧ್ಯಾಪಕರಾಗಿದ್ದಾರೆ.
ಫ್ಲಿಫ್ಟ್ ಕ್ಲಾಸ್ ಎನ್ನುವ ಹೊಸ ಅವಿಷ್ಕಾರವನ್ನು 2011ರಲ್ಲೇ ಇವರು ಮಾಡಿದ್ದಾರೆ. ತಾವು ಮಾಡುವ ಪಾಠವನ್ನು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ತಮ್ಮದೇ ಆದ ವೆಬ್‌ಸೈಟ್‌ಗೆ ಹಾಕುತ್ತಾರೆ. ಮಕ್ಕಳು ಇದರ ಲಾಭ ಪಡೆಯುತ್ತಾರೆ. ವೆಬ್‌ಸೈಟ್‌ಗೆ ಹೋದರೆ ಪಾಠದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ತರಗತಿಗೆ ಬಾರದ ವಿದ್ಯಾರ್ಥಿಯೂ ಇದರ ಲಾಭಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಆಗಾಗ ಪಾಠ ಮನನ ಮಾಡಿಕೊಳ್ಳಲು ಸಹಾಯಕವಾಗಿದೆ. ಪ್ರಯಾಣದಲ್ಲಿರಲಿ, ಬಂಧು-ಮಿತ್ರರ ಮನೆಯಲ್ಲಿರಲಿ, ಎಲ್ಲಿದ್ದರೂ ಇದನ್ನು ಓದಿಕೊಳ್ಳಬಹುದು, ಕೇಳಿಸಿಕೊಳ್ಳಬಹುದು. ಮಕ್ಕಳು ಪಠ್ಯ ಓದುವುದಕ್ಕಿಂತ ಹೆಚ್ಚು ಇದರಲ್ಲೇ ತೊಡಗಿಸಿಕೊಂಡು ಉತ್ತಮ ಫಲಿತಾಂಶಕ್ಕೆ ಕಾರಣರಾಗಿದ್ದಾರೆ.
 ಸ್ಟ್ರೆಟೆಜಿಕ್ ಮ್ಯಾನೇಜ್‌ಮೆಂಟ್ ಎಂಬ ವಿಷಯವನ್ನು ಬೋಧಿಸುವ ಅರವಿಂದ್, ಅಮೆರಿಕದಲ್ಲಿ ಕಲಿಸಲ್ಪಡುವ ಫ್ಲಿಫ್ಟ್ ಕ್ಲಾಸನ್ನು ಜಾರಿಗೊಳಿಸಿದ ಪ್ರಪ್ರಥಮ ಭಾರತೀಯ. ಇದಕ್ಕಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಡಿಸೈನ್ ಥಿಂಕಿಂಗ್ ಎಂಬ ಪರಿಕಲ್ಪನೆಯನ್ನೂ ಜಾರಿಗೊಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಕನ್ಸೂಮರ್ ಬಿಹೇವಿಯರ್ ಬಗ್ಗೆ ಪಾಠ ಮಾಡಿದ್ದಾರೆ. ಗ್ರಾಹಕ ಸಾಮಗ್ರಿ ಖರೀದಿಸುತ್ತಿರುವ ಚಿತ್ರವೊಂದನ್ನು ಇನ್‌ಸ್ಟಾಗ್ರಂಗೆ ಹಾಕಿ ಅದರ ಬಗ್ಗೆ ವಿದ್ಯಾರ್ಥಿಗಳೇ ವಿವರಣೆ ನೀಡುವ ಹೊಸತನಕ್ಕೂ ಕೈಹಾಕಿದ್ದಾರೆ.
 ವೈವ್ ರೆಕಾರ್ಡಿಂಗ್, ಮೈಂಡ್ ಮ್ಯಾಪ್ ಮೂಲಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತರಾಗುವಂತೆ ಮಾಡಿದ ಕೀರ್ತಿ ಇವರದ್ದು. ತಮಿಳುನಾಡು ಸರ್ಕಾರ 2014ರಲ್ಲಿ ಇವರ ಈ ಸಾಧನೆಗೆ ಬೆಸ್ಟ್ ಟ್ರೆಂಡ್ ಸೆಟ್ಟರ್ ಎಂಬ ಪ್ರಶಸ್ತಿ ನೀಡಿದೆ. ಲಿಮ್ಕಾ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿದ್ದಾರೆ. ಅರವಿಂದ್ ಒಟ್ಟಾರೆ 9 ರಾಷ್ಟ್ರೀಯ, 4 ಅಂತಾರಾಷ್ಟ್ರೀಯ ಮತ್ತು 5 ವಿಶ್ವ ದಾಖಲೆ ಮಾಡಿದ್ದಾರೆ. ವಿಶೇಷವೆಂದರೆ, ಇವ್ಯಾವುದನ್ನೂ ಅವರು ಪ್ರಚಾರ ಮಾಡಿಕೊಳ್ಳಲು ಹೋಗಿಲ್ಲ. ನವದೆಹಲಿಯ 3ಇ ಇನೊವೇಟಿವ್ ಫೌಂಡೇಶನ್ ಮೊನ್ನೆ ಶಿಕ್ಷಕರ ದಿನದಂದು ಇವರಿಗೆ ಅತ್ಯುತ್ತಮ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿದೆ. 
ವಿದ್ಯಾರ್ಥಿಗಳಲ್ಲಿ ಕಲಿಕೆಯ ಮನೋಭಾವ , ಕ್ರಿಯಾಶೀಲತೆ ಹೆಚ್ಚಿಸಬೇಕು. ಇದಕ್ಕಾಗಿ ಶಿಕ್ಷಕ ಸತತ ವಿದಾರ್ಥಿಯಾಗಿರಬೇಕು. ನೋಟ್ಸ್ ಕೊಟ್ಟು ಮತ್ತು ಪಠ್ಯದಲ್ಲಿರುವಷ್ಟನ್ನೇ ಹೇಳಿದರೆ ಅದು ಕೇವಲ ಅಂಕ ಗಳಿಕೆಗೆ ಮಾತ್ರ ಅನುಕೂಲ. ಕಲಿಕೆಯಿಂದ ಹೊಸತನ ಮೂಡಬೇಕು. ಅವರ ಬದುಕು ರೂಪುಗೊಳ್ಳಬೇಕು ಎನ್ನುತ್ತಾರೆ ಅರವಿಂದ್. 
16.9.17
..............................................
  

No comments:

Post a Comment