Saturday 13 January 2018

ಜಾಗತಿಕ ದೇಹದಾರ್ಢ್ಯ ಪಟು
ಜೆ. ಸಿ. ಜಗದೀಶ


ಆರೋಗ್ಯ ಚೆನ್ನಾಗಿದ್ದರೆ ಮನುಷ್ಯನ ಬಾಳು ಸಂತಸವಾಗಿರುತ್ತದೆ. ಆರೋಗ್ಯವೇ ಇಲ್ಲದಿದ್ದರೆ ಏಷ್ಟೇ ಸಂಪತ್ತು, ಸುಖ- ಭೋಗ ಇದ್ದರೂ ಅದರಿಂದ ಪ್ರಯೋಜನವಿಲ್ಲ. ಈ ಹಿನ್ನೆಲೆಯಲ್ಲಿ ಇಂಗ್ಲೀಷ್‌ನಲ್ಲಿ ಒಂದು ಮಾತಿದೆ. ದೇಹದ ಬಗ್ಗೆ ಸದಾ ಕಾಳಜಿ ಇಡಿ. ನೀವು ಉತ್ತಮವಾಗಿ ಬದುಕಲು ಇದೊಂದೇ ದಾರಿ ಎಂದು.
ಇದಕ್ಕಾಗಿ ದಿನನಿತ್ಯ ವ್ಯಾಯಾಮ, ದೈಹಿಕ ಕಸರತ್ತು ಮಾಡುವುದರ ಮೂಲಕ ದೇಹದಾರ್ಢ್ಯವನ್ನು ಬೆಳೆಸಿಕೊಳ್ಳಬೇಕು. ಇತ್ತೀಚೆಗೆ ಮನುಷ್ಯನ ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿರುವುದರಿಂದ ಫಿಟ್‌ನೆಸ್ ಕೇಂದ್ರಗಳು ಹೆಚ್ಚುತ್ತಿವೆ. ವ್ಯಾಯಾಮ ಶಾಲೆಗಳು ಬಹಳ ಹಿಂದಿನಿಂದಲೂ ಕಾರ್ಯಾಚರಿಸುತ್ತಿವೆ. ಇಲ್ಲಿ ಅನೇಕರು ದೈಹಿಕ ಕಸರತ್ತು ಮಾಡುವುದರ ಮೂಲಕ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಇದನ್ನೇ ಹವ್ಯಾಸವನ್ನಾಗಿ ತೆಗೆದುಕೊಂಡು ದೇಹದಾಢರ್ಯ್ಪಟುಗಳಾಗಿ, ಪವರ್ ಲಿಫ್ಟರ್‌ಗಳಾಗಿ ರಾಜ್ಯ, ದೇಶ, ವಿದೇಶಗಳಲ್ಲಿ ಸಾಧನೆ ಮಾಡುತ್ತ ಪ್ರಶಸ್ತಿ ಪಡೆಯುತ್ತಿದ್ದಾರೆ.
ನಗರದಲ್ಲಿ ಇಂತಹ ಸಾಧಕರೊಬ್ಬರಿದ್ದಾರೆ. ಅವರೇ ಜಿ. ಸಿ. ಜಗದೀಶ. ಜಗದೀಶ ಅತಿ ಬಡಕುಟುಂಬದವರು. ಚೌಡೇಶ್ವರಿನಗರ ವಾಸಿಯಾದ, 48ರ ಹರಯದ ಇವರು, ಗೂಡ್ಸ್ ಆಟೋ ಓಡಿಸಿ ಅದರಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ದೇಹದಾರ್ಢ್ಯದ ಮೂಲಕವೂ ಹೆಸರು ಮಾಡಿದ್ದಾರೆ. ಅವರು ಪಡೆದ ಪದಕಗಳು ಲೆಕ್ಕವಿಲ್ಲದಷ್ಟು. ಜಿಲ್ಲಾ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಈವರೆಗೆ ಸುಮಾರು 50ಕ್ಕೂ ಹೆಚ್ಚು ಪದಕ ಗಳಿಸಿದ್ದಾರೆ. ಈಗ ವಿಶ್ವ ದೇಹದಾರ್ಢ್ಯ ಮತ್ತು ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ.
ಈ ತಿಂಗಳ ಆದಿಭಾಗದಲ್ಲಿ ಮುಂಬೈನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಆಯ್ಕೆಯಲ್ಲಿ ಇವರು ಸ್ಥಾನ ಪಡೆದಿದ್ದಾರೆ. ಎಪ್ರಿಲ್‌ನಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಜಗದೀಶ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇವರ ತಂದೆ ಜಿ. ಎಚ್. ಚನ್ನಬಸಪ್ಪ ನಗರದ ಪ್ರಖ್ಯಾತ ಕುಸ್ತಿಪಟುವಾಗಿದ್ದರು. ಅದೇ ಹಿನ್ನೆಲೆಯಲ್ಲಿ ಇವರೂ ಸಹ ದೇಹದಾರ್ಢ್ಯವನ್ನು ಸುಮಾರು 17ವರ್ಷದಿಂದ ಪುಲಿಕೇಶಿ ವ್ಯಾಯಾಮ ಶಾಲೆಯಲ್ಲಿ  ಕಲಿಯಲಾರಂಭಿಸಿ, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕವನ್ನು ಪಡೆದಿದ್ದಾರೆ. ಇದೇ ಮುಂದಿನ ಕಲಿಕೆಗೆ ಅವರಿಗೆ ಪ್ರೋತ್ಸಾಹ ನೀಡಿತು.
ಸತತ ಅಭ್ಯಾಸ ಮುಂದುವರೆಸಿ ಪವರ್‌ಲಿಫ್ಟಿಂಂಗ್‌ನಲ್ಲೂ ತೊಡಗಿಸಿಕೊಂಡರು. ನಂತರ ರಾಜ್ಯಮಟ್ಟದ ಸ್ಪರ್ಧೆಗಳು ಸಾಗರ, ದಾವಣಗೆರೆಯಲ್ಲಿ ಜರುಗಿದಾಗ ಅಲ್ಲೆಲ್ಲ ಪದಕ ಗೆದ್ದೇ ಮರಳಿದರು. ದಕ್ಷಿಣ ವಲಯದ ಸ್ಪರ್ಧೆಯಲ್ಲೂ ಪದಕಗಳನ್ನು ಇವರು ಬೇಟೆಯಾಡಿದ್ದಾರೆ. ಆಗ್ರಾ, ಉ.ಪ್ರದೇಶ, ಮಧ್ಯ ಪ್ರದೇಶ, ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ ಮೊದಲ ಮತ್ತು ದ್ವಿತೀಯ ಸ್ಥಾನ ಇವರ ಪಾಲಾಗಿತ್ತು. 
ಮುಂಬೈನಲ್ಲಿ ಜರುಗಿದ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಾಗ ಚಿನ್ನದ ಪದಕ ಇವರ ಕೊರಳೇರಿತ್ತು. ಇಂದಿಗೂ ತಮ್ಮ ದುಡಿಮೆಯನ್ನು ಮಗಿಸಿದ ನಂತರ ಸಂಜೆ ಎರಡು ಗಂಟೆ ವ್ಯಾಯಾಮ ಶಾಲೆಗೆ ತೆರಳಿ ಪ್ರಾಕ್ಟೀಸ್ ನಡೆಸುತ್ತಾರೆ. ಇವರ ಪುತ್ರ, ಬಿ. ಫಾರ್ಮಾ ಓದುತ್ತಿರುವ ವಿನಯ್ ಸಹ ದೇಹದಾರ್ಢ್ಯ ಪಟುವಾಗಿ, ಉತ್ತಮ ಕ್ರಿಕೆಟ್ ಆಟಗಾರನಾಗಿದ್ದಾನೆ.
ವಿಷಾದವೆಂದರೆ, ಇವರ ಸಾಧನೆಯನ್ನು ಕ್ರೀಡೆಗೆ ಮಹತ್ವ ಕೊಡುವ ಈ ಜಿಲ್ಲೆಯಲ್ಲಿ ಈವರೆಗೆ ಯಾರೂ ಗಮನಿಸಿಲ್ಲ, ಗುರುತಿಸಿಲ್ಲ. ಇಷ್ಟೊಂದು ಪ್ರಶಸ್ತಿ, ಪದಕ ಧರಿಸಿದ್ದರೂ  ಕಾನನ ಕುಸುಮದಂತೆ ಇದ್ದಾರೆ. ಇತ್ತೀಚೆಗೆ ಕುಂಚಿಟಿಗರ ಜಿಲ್ಲಾ ಸಂಘದವರು ಸನ್ಮಾನಿಸಿದ್ದಾರೆ. ವಿವಿಧ ಸಂಘಟನೆಗಳು ಇಂತಹ ಕ್ರೀಡಾಪಟುವಿನ ನೆರವಿಗೆ ಮುಂದಾಗಬೇಕಿದೆ.
ಜಗದೀಶ್ ಸರಳ, ಸಜ್ಜನಿಕೆ ವ್ಯಕ್ತಿ. ಕಷ್ಟದಿಂದ ಮೇಲೆದ್ದು ಬಂದಿರುವುದರಿಂದ ಇಂದಿಗೂ ದುಡಿದು ತಿನ್ನುವುದಕ್ಕೇ ಆದ್ಯತೆ ಕೊಟ್ಟಿದ್ದಾರೆ. ಇಂತಹ ಶ್ರಮಜೀವಿ ಥೈಲ್ಯಾಂಡ್‌ನ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾರಾದರೂ ಅಲ್ಲಿಗೆ ಹೋಗಲು ಬೇಕಾದ ಹಣ ಹೊಂದಿಸುವುದು ಹೇಗೆಂಬ ಚಿಂತೆಯಲ್ಲಿದ್ದಾರೆ. ದಾನಿಗಳು, ಸಂಘ- ಸಂಸ್ಥೆಗಳು, ಜನಪ್ರತಿನಿಧಿಗಳು ಇವರ ನೆರವಿಗೆ ಮುಂದಾಗಬೇಕಿದೆ. 
.......................................

No comments:

Post a Comment