Tuesday 16 January 2018

ಮಹಿಳಾ ನೌಕರರಿಗೆ ಮಾದರಿ
ಟಿ.ವಿ.ತಾರಾ


ಸರ್ಕಾರಿ ನೌಕರರು ತಾವಾಯಿತು, ತಮ್ಮ ಕೆಲಸವಾಯಿತು ಎಂದುಕೊಂಡು ಇರುವವರೇ ಅಧಿಕ. ಬಹುತೇಕ ನೌಕರರು ಯಾವ ಸಮಸ್ಯೆಯ, ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ  ತಲೆಕೆಡಿಸಿಕೊಳ್ಳುವುದೇ ಇಲ್ಲ. ಆದರೆ ಇಂತಹವುಗಳನ್ನು ಮೀರಿ ನಿಂತ ಮಹಿಳಾ ನೌಕರರೊಬ್ಬರು ಶಿವಮೊಗ್ಗದಲ್ಲಿದ್ದಾರೆ. ಇವರು ಸಮಾಜ ಸೇವಕರೆಂದು ಕರೆಯಿಸಿಕೊಳ್ಳುವವರು ಮಾಡುವ ಕೆಲಸವನ್ನು ತಮ್ಮ ಬಿಡುವಿನ ದಿನ, ವೇಳೆಯಲ್ಲಿ ಮಾಡಿ ತೋರಿಸುತ್ತಿದ್ದಾರೆ. ಈ ಮೂಲಕ ಉಳಿದ ಸರ್ಕಾರಿ ನೌಕರರಿಗೆ ಮಾದರಿಯಾಗಿದ್ದಾರೆ. 
ಟಿ.ವಿ.ತಾರಾ ಶಿವಮೊಗ್ಗದ ಪಶುಸಂಗೋಪನೆ ಇಲಾಖೆಯಲ್ಲಿ ಆಡಳಿತ ಸಹಾಯಕರಾಗಿದ್ದಾರೆ. ಇದು ಇವರ ವೃತ್ತಿ. ಆದರೆ ಪ್ರವೃತ್ತಿ ಸೇವೆಗೆ ಮುಡಿಪಾಗಿರಿಸಿಕೊಂಡಿರುವುದು. ತುಳಿತಕ್ಕೊಳಗಾದ ಬೇಡ ಸಮುದಾಯದಿಂದ ಬಂದಿರುವ ಇವರು, ತಮ್ಮ ಸಮುದಾಯದವರನ್ನು ಮೇಲೆತ್ತಲು ಮತ್ತು ಅವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸಲು, ಮಹಿಳೆಯರಿಗೆ ವಿವಿಧ  ಕೌಶಲ್ಯ ತರಬೇತಿ ಕೊಡಲು ಸತತ ಶ್ರಮಿಸುತ್ತಿದ್ದಾರೆ. ಮಹರ್ಷಿ ವಾಲ್ಮೀಕಿ ಶಬರಿ ಮಹಿಳಾ ಸಂಘವನ್ನು ಕೇವಲ 14 ತಿಂಗಳ ಹಿಂದೆಯಷ್ಟೇ ರಚಿಸಿ, ಇದರ ಮೂಲಕ 58 ಸ್ವಸಹಾಯ ಸಂಘವನ್ನು ಜಿಲ್ಲಾದ್ಯಂತ ಪ್ರಾರಂಭಿಸಿದ್ದಾರೆ. ಇದರಲ್ಲಿ 1300 ಸದಸ್ಯರಿದ್ದಾರೆ. ತಾರಾ ಅವರು ರಜಾ ದಿನವನ್ನು ಈ ಕೆಲಸಕ್ಕೆ ಮೀಸಲಿರಿಸಿದ್ದಾರೆ.  ಸಂಘದ ಇತರೆ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ಒಂದೊಂದು ವಾರ ಒಂದೊಂದು ತಾಲೂಕನ್ನು ಸುತ್ತಿ ಸಂಘ ಸ್ಥಾಪಿಸುತ್ತಾ, ಮಹಿಳಾ ಸಬಲೀಕರಣಕ್ಕೆ ಮುಂದಾಗಿದ್ದಾರೆ.     
ತಾವು ಸರ್ಕಾರಿ ನೌಕರರಾಗಿರುವುದರಿಂದ ವಿವಿಧ ಇಲಾಖೆಯಿಂದ ಮಹಿಳೆಯರಿಗೆ ಇರುವ ಎಲ್ಲ ನೆರವಿನ ಬಗ್ಗೆ ಮಾಹಿತಿ ಪಡೆದುಕೊಂಡು ಅದನ್ನು ನಿರಂತರವಾಗಿ ತರಬೇತಿ ಮೂಲಕ ಸಂಘದ ಸದಸ್ಯರಿಗೆ ಕೊಡಿಸುತ್ತಿದ್ದಾರೆ. ತೋಟಗಾರಿಕೆ ಇಲಾಖೆಯಿಂದ ಕಿಚನ್ ಗಾರ್ಡನ್ ತರಬೇತಿ ಕೊಡಿಸಿ ತರಕಾರಿ ಬೆಳೆಯಲು ನೆರವಾಗಿದ್ದಾರೆ. ಫಿನಾಯಿಲ್, ಸೋಪು ತಯಾರಿಕೆ, ಟೈಲರಿಂಗ್, ಬ್ಯೂಟಿಶಿಯನ್ ತರಬೇತಿ ಕೊಡಿಸಿದ್ದಾರೆ. ಸಮಾಜದವರಿಗಾಗಿ ವಧುವರರ ಅನ್ವೇಷಣಾ ಕೇಂದ್ರ ಸ್ಥಾಪಿಸಿದ್ದಾರೆ. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದು, ಗ್ರಾಮಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವುದು, ಸ್ವಸಹಾಯ ಸಂಘಗಳನ್ನು ಒಟ್ಟುಗೂಡಿಸಿ ಒಕ್ಕೂಟ ರಚಿಸುವ, ಜನಾಂಗದ ಬಡ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ನೆರವು ನೀಡುವ ಮತ್ತು ವಸತಿಗೃಹ ನಿರ್ಮಿಸುವ ಗುರಿಯನ್ನು ಹಾಕಿಕೊಂಡಿದ್ದಾರೆ.
ಗೃಹಿಣಿಯರು ಮನೆಯಲ್ಲೇ ಕುಳಿತುಕೊಳ್ಳುವುದಕ್ಕಿಂತ ಸ್ವಂತ ಉದ್ಯೋಗ ಆರಂಭಿಸಿ ಕುಟುಂಬಕ್ಕೆ ನೆರವಾಗುವ ಸಂದರ್ಭ ಪ್ರಸ್ತುತವಿದೆ. ಮನೆಯ ಖರ್ಚನ್ನು ನಿಭಾಯಿಸುವಷ್ಟು ದುಡಿಮೆಯನ್ನು ಸ್ವ ಉದ್ಯೋಗದಿಂದ ಸಂಪಾದಿಸಬಹುದು. ಇದನ್ನು ನೋಡಿದವರಿಗೆ ತಾವೂ ಸಹ ಏಕೆ ಈ ರೀತಿಯಾಗಿ ಬಾಳಬಾರದೆಂಬ ಛಲ ಮೂಡಿ ಅವರಿಗೂ ಇದು ಮಾದರಿಯಾಗಬಹುದು. ಈ ಹಿನ್ನೆಲೆಯಲ್ಲಿ ವಿವಿಧ ತರಬೇತಿ ಪಡೆದರೆ ಮಹಿಳೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುತ್ತದೆ. ಈ ಎಲ್ಲ ಮಹತ್ವಾಕಾಂಕ್ಷೆಗಳಿಂದ ರೂಪುತಳೆದ ಶಬರಿ ಮಹಿಳಾ ಸಂಘ ಈಗ ಜಿಲ್ಲೆಯಲ್ಲಿ ದಾಪುಗಾಲಿಡುತ್ತಿದೆ. ಇದಕ್ಕೆ ಸಂಘದ ಪದಾಧಿಕಾರಿಗಳು ವಹಿಸುತ್ತಿರುವ ಕಾಳಜಿ, ಶ್ರಮ ಮತ್ತು ಸಮರ್ಪಣಾ ಮನೋಭಾವವೇ ಕಾರಣ.
ಮಹಿಳೆಯರನ್ನು ಸೇರಿಸಿ ಸಂಘ ಕಟ್ಟುವುದು ಸುಲಭದ ಮಾತಲ್ಲ. ಅಂತಹುದರಲ್ಲಿ ತಮ್ಮ ನೌಕರಿಯ ಸಮಯದ ನಂತರ ಎಲ್ಲರನ್ನೂ ಸೇರಿಸಿ ಅವರಿಗೆ ಮಾಹಿತಿ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಅತಿ ಮಹತ್ವದ ಕೆಲಸವನ್ನು ತಾರಾ ಮಾಡುತ್ತಿದ್ದಾರೆ. 
ವಾಲ್ಮೀಕಿ ಜನಾಂಗದಲ್ಲಿ ಅತ್ಯಂತ ಬಡತನದಲ್ಲಿರುವವರೇ ಹೆಚ್ಚು. ಅವರೆಲ್ಲ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದೆ ಬರಬೇಕೆನ್ನುವುದು ತಮ್ಮ ಉದ್ದೇಶ. ಈ ಹಿನ್ನೆಲೆಯಲ್ಲಿ ಸಂಘ ರಚಿಸಿಕೊಂಡು ಒಗ್ಗೂಡಿಸಿ ಕೆಲಸ ಮಾಡುತ್ತಿದ್ದೇನೆ.  ಮಹಿಳೆಯರನ್ನೆಲ್ಲ ಸೇರಿಸಿ ಇತ್ತಿಚೆಗೆ ಯಶಸ್ವಿ ರಾಜ್ಯ ಸಮಾವೇಶ ನಡೆಸಿ, ಅಲ್ಲಿ ಅವರಿಗೆ ಸಮಾಜದ ಹಿರಿಯರಿಂದ   ಮಾರ್ಗದರ್ಶನ ನೀಡಲಾಗಿದೆ. ಮಹಿಳೆ ಸಮಾಜದಲ್ಲಿ ಮುಂದೆ ಬರುವಂತಾಗಬೇಕು. ಇದು ಕೇವಲ ಭಾಷಣಕ್ಕೆ ಸೀಮಿತವಾಗದೆ, ಜಾರಿಯಾಗುವಂತೆ ಮಾಡಬೇಕೆನ್ನುವುದೇ ತಮ್ಮ ಗುರಿ ಎನ್ನುತ್ತಾರೆ ತಾರಾ.   
1.4.17
..................................

No comments:

Post a Comment