Tuesday 9 January 2018

ರಂಗಭೂಮಿಯ ಭವಿಷ್ಯದ ತಾರೆ
 ಪನ್ನಗಾ ಜೋಯ್ಸ್

 ‘ನೀನು ಯೌವ್ವನಾವಸ್ಥೆಯಲ್ಲಿದ್ದು, ಪ್ರತಿಭೆಯನ್ನು ಹೊಂದಿದ್ದರೆ ಅದು ನಿನಗೆ ರೆಕ್ಕೆ ಇದ್ದಂತೆ’-ಇದು ಆಂಗ್ಲ ಭಾಷೆಯ ಗಾದೆಯೊಂದರ ಕನ್ನಡಾನುವಾದ. ಇದು ಇಂದಿನ ಯುವ ಪ್ರತಿಭೆಗಳ ಕುರಿತಾದದ್ದು. ತಾರುಣ್ಯ ಮತ್ತು ಪ್ರತಿಭೆ ಇದ್ದರೆ ಎಷ್ಟೆತ್ತರಕ್ಕೂ ಬೆಳೆಯಬಹುದು; ಏರಬಹುದು; ಜಗದಗಲ, ಮುಗಿಲಗಲ ತಮ್ಮ ಕೀರ್ತಿಪತಾಕೆಯನ್ನು ಹಾರಿಸಬಹುದು; ಸ್ವತಂತ್ರವಾಗಿ, ಹಾರುಹಕ್ಕಿಯಾಗಿ ಜೀವಿಸಬಹುದು ಎನ್ನುವುದು ಈ ಗಾದೆಯೊಳಗೆ ಹುದುಗಿರುವ ಧ್ವನಿ. ಶಿವಮೊಗ್ಗ ನಗರದಲ್ಲಿ ಇಂತಹ ಅದ್ಭುತ ಪ್ರತಿಭೆಯೊಂದು ಕುಡಿಯೊಡೆದು     ಮಿನುಗುತ್ತಿದೆ. ಆ ಅಪ್ರತಿಮ ಪ್ರತಿಭೆಯೇ ಪನ್ನಗಾ ಜೋಯ್ಸ್.
ಪನ್ನಗಾ ಥಿಯೇಟರ್ ಅಥವಾ ರಂಗ ಕಲಾವಿದೆ. ‘ಬೆಳೆಯ ಸಿರಿಯನ್ನು ಮೊಳಕೆಯಲ್ಲೇ ಕಾಣು’ ಎಂಬ ನಾಣ್ಣುಡಿಯಂತೆ ಇವರು ಈಗಾಗಲೇ ಏಕವ್ಯಕ್ತಿ ಪ್ರದರ್ಶನವನ್ನು ಅತ್ಯದ್ಭುತವಾಗಿ ಪ್ರದಶಿಸುವ ಮೂಲಕ ತಾನೊಬ್ಬ ಅಪ್ಪಟ ಕಲಾವಿದೆ ಎನ್ನುವುದನ್ನು ನಿರೂಪಿಸಿದ್ದಾರೆ.  ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯಲ್ಲಿ 2015ರಲ್ಲಿ ಪದವಿ ಪಡೆದು ನಿರ್ದೇಶನ ಮತ್ತು ವಿನ್ಯಾಸದ ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಖ್ಯಾತಿಯ ನಿರ್ದೇಶಕರಾದ ಅರಿಯಾಸ್ ಮುಷ್ಕಿನ್, ಅನುರಾಧಾ ಕಪೂರ್, ಅಭಿಲಾಷ್ ಪಿಳ್ಳೈ, ಪೀಟರ್ ಕುಕ್ ಮುಂತಾದವರಿಂದ ತರಬೇತಿ ಪಡೆದಿದ್ದಾರೆ. ಮುಂದಿನ ವ್ಯಾಸಂಗಕ್ಕಾಗಿ ಈ ತಿಂಗಳಾಂತ್ಯದಲ್ಲಿ ಲಂಡನ್ ವಿಶ್ವವಿದ್ಯಾಲಯದ ಗೋಲ್ಡ್‌ಸ್ಮಿತ್ಸ್ ಕಾಲೇಜಿಗೆ ತೆರಳಲಿದ್ದಾರೆ. ಇದಕ್ಕಾಗಿ ಅವರಿಗೆ ಅಲ್ಲಿನ ಚಾರ್ಲ್ಸ್ ವ್ಯಾಲೇಸ್ ಟ್ರಸ್ಟ್ ಸ್ಕಾಲರ್‌ಶಿಪ್ ಲಭಿಸಿದೆ.
ಪನ್ನಗಾ ನಗರದ ಖ್ಯಾತ ರಂಗ ನಿದೇಶಕ ಮತ್ತು ಡಿವಿಎಸ್ ಕಲಾ-ವಿಜ್ಞಾನ ಕಾಲೇಜಿನ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥ ಪ್ರೊ. ಸಿ.ಎಸ್. ಗೌರೀಶಂಕರ್ ಅವರ ಪುತ್ರಿ. ವಂಶಪಾರಂಪರ್ಯವೆಂಬಂತೆ ಬಾಲ್ಯದಿಂದಲೇ ರಂಗಕಲೆಯತ್ತ ವಿಶೇಷ ಆಸಕ್ತಿ. ಹೈಸ್ಕೂಲ್ ದಿನಗಳಲ್ಲೇ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ ಹಿರಿಮೆ. ಮ್ಯಾಕ್‌ಬೆಥ್, ಒಥೆಲ್ಲೊ ಮೊದಲಾದ ನಾಟಕಗಳಲ್ಲಿ ಮನೋಜ್ಞವಾಗಿ ಅಭಿನಯಿಸದ್ದರಿಂದ ಅಂದೇ ರಂಗಭೂಮಿಯ ಭವಿಷ್ಯದ ಕಲಾವಿದೆಯಾಗಬಲ್ಲಳೆಂಬ ನಿರೀಕ್ಷೆ ಮೂಡಿಸಿದ್ದ ಪ್ರತಿಭೆ. ಪಿಯು ವಿದ್ಯಾಭ್ಯಾಸವನ್ನು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಮುಗಿಸಿ, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಬಿಎ ಮತ್ತು ಆಂಗ್ಲ ವಿಷಯದಲ್ಲಿ ಎಂ.ಎ ಪದವಿ ಪಡೆದಿದ್ದಾರೆ. ಈ ವೇಳೆ ಆ ಕಾಲೇಜಿನಲ್ಲಿರುವ ಥಿಯೇಟರ್ ಕಲಾವಿದರ ಜೊತೆ ಸಾಕಷ್ಟು ಅಭಿನಯ, ನಿರ್ದೇಶನ, ವಿನ್ಯಾಸದ ಕುರಿತು ಸಾಕಷ್ಟು ಜ್ಞಾನ ಸಂಪಾದನೆ. ರಂಗಕಲಾವಿದೆ ಲಕ್ಷ್ಮೀ ಚಂದ್ರಶೇಖರ್ ಜೊತೆ ಚರ್ಚೆ, ಸಂವಾದದಲ್ಲಿ ಪಾಲ್ಗೊಂಡು ಅವರಿಂದಲೂ ಹೆಚ್ಚಿನ ಮಾಹಿತಿ ಪಡೆದಿದ್ದಾರೆ.
ಎನ್‌ಎಸ್‌ಡಿ ಪದವೀಧರೆಯಾದ ನಂತರ ಶಿವಮೊಗ್ಗದಲ್ಲಿ ಇತ್ತೀಚೆಗೆ ಯಕ್ಷಗಾನ ಕಲೆಯನ್ನು ಬಳಸಿಕೊಂಡು ಜನ್ನನ ‘ಯಶೋಧರ ಚರಿತೆ’ ಕೃತಿಯನ್ನಾಧರಿಸಿದ ಅಮೃತಮತಿ ಎಂಬ ಏಕವ್ಯಕ್ತಿ ಪ್ರದರ್ಶನವನ್ನು ಅಭಿನಯಿಸಿ ಜನಮನ ಸೂರೆಗೊಂಡಿದ್ದಾರೆ. ನೀನಾಸಂ ರಂಗಶಿಬಿರದಲ್ಲಿ ಪಾಲ್ಗೊಂಡು, ಅಲ್ಲಿಯ ನಾಟಕಗಳನ್ನು ನೋಡಿ ಸಾಕಷ್ಟು ಪ್ರಭಾವಿತರಾಗಿದ್ದ ಇವರು, ಇದರಿಂದ ನಾಟಕದ ಪ್ರಾಮುಖ್ಯ ಏನೆನ್ನುವುದನ್ನು ಅರಿತುಕೊಂಡವರು. ಮುಂದೆ ತಾನು ಉತ್ತಮ ರಂಗನಿರ್ದೇಶಕಿಯಾಗಬೇಕು; ಭಾರತೀಯ ರಂಗಭೂಮಿಯಲ್ಲಿ ವಿಶಿಷ್ಟವಾದುದನ್ನು ಸಾಧಿಸಬೇಕೆನ್ನುವ ಹಂಬಲ ಇವರದ್ದು. ಕಲೆಯಲ್ಲಿ ಸಾಧನೆ ಮಾಡುವುದು ಸಾಕಷ್ಟಿದೆ. ಕಲೆಯ ಮೂಲಕ ಜನರಿಗೆ ಉತ್ತಮ ಸಂದೇಶವನ್ನು ನೀಡುವುದು ಮುಖ್ಯ. ಜನರನ್ನು         ರಂಜಿಸುವುದಕ್ಕಿಂತ ಮುಖ್ಯವಾಗಿ ಕಲೆಯ ಮೂಲಕ ಮೌಲ್ಯಗಳನ್ನು  ಜನರಿಗಾಗಿ ನೀಡಬೇಕು ಎನ್ನುವುದು ಅವರ ಅಭಿಮತ.
ಶಿವಮೊಗ್ಗದಲ್ಲಿ ರಂಗಕಲಾವಿದರು ಸಾಕಷ್ಟಿದ್ದಾರೆ. ರಂಗತಂಡಗಳೂ ಸಹ ಇವೆ. ಇವರಲ್ಲಿ ಸಾಕಷ್ಟು ಜನ ಆ ಕ್ಷೇತ್ರದಲ್ಲಿ ಹೆಸರು ಮಾಡಿದವರೂ ಇದ್ದಾರೆ. ನೀನಾಸಂ, ರಂಗಾಯಣ ಮೊದಲಾದೆಡೆ ಕಲಿತು ಬಂದವರಿದ್ದಾರೆ; ಇಲ್ಲಿ ತರಬೇತಿ ನೀಡುವವರಿದ್ದಾರೆ. ನೂರಾರು ತರುಣ-ತರುಣಿಯರು ರಂಗಕಲೆಯತ್ತ ಮುಖ ಮಾಡಿದ್ದಾರೆ. ಸಾಂಸ್ಕೃತಿಕ ನಗರಿ ಎಂಬ ಹೆಮ್ಮೆಯ ಈ ಜಿಲ್ಲೆಯಲ್ಲಿ ತಂದೆಯ ಹಾದಿಯಲ್ಲೇ ಮಗಳು ಬೆಳೆಯುತ್ತಿದ್ದಾರೆ. ತಂದೆ ತಮ್ಮ ಅದ್ಭುತ ಪರಿಕಲ್ಪನೆಯ ಮೂಲಕ  ನಾಟಕ ನಿರ್ದೇಶಿಸಿ ಸೈ ಎನ್ನಿಸಿಕೊಂಡವರು; ಮಗಳು  ರಂಗಕಲೆಯಲ್ಲೇ ಪದವಿ ಪಡೆದು ಅದರಲ್ಲೇ ತನ್ನನ್ನು ತೊಡಗಿಸಿಕೊಂಡು ಸಾಧನೆ ಮಾಡುವ ಹಾದಿಯಲ್ಲಿ ಮುನ್ನಡೆಯುತ್ತಿರುವವರು.
..................................

No comments:

Post a Comment