Wednesday 10 January 2018

‘ಅಸಾಮಾನ್ಯ ಕನ್ನಡಿಗ’ರಾದ ಹಳ್ಳಿ ಮೇಷ್ಟ್ರು
ಕೂಬಾ ನಾಯ್ಕ್ 

ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಕೆಲಸ ಮಾಡುವ  ಶಾಲೆಯನ್ನು ಆಕರ್ಷಣೀಯವಾಗಿ, ಅನುಕರಣೀಯವಾಗಿ, ಅನುಸರಣೀಯವಾಗಿ ರೂಪಿಸುವುದು ಶಿಕ್ಷಕನ ಜವಾಬ್ದಾರಿ. ಭದ್ರಾವತಿ ತಾಲೂಕಿನ ಹಳ್ಳಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ಕೂಬಾ ನಾಯ್ಕ್ ಶೈಕ್ಷಣಿಕ ಮತ್ತು ಸೇವಾಮನೋಭಾವದಿಂದ ಈಗ ರಾಜ್ಯದಲ್ಲಿ ಮನೆಮಾತಾಗುವಂತೆ ಈ ಶಾಲೆಯನ್ನು ರೂಪಿಸಿದ್ದಾರೆ. ನಿನ್ನೆಯಷ್ಟೇ ರಾಜ್ಯಮಟ್ಟದ ‘ಅಸಾಮಾನ್ಯ ಕನ್ನಡಿಗ’ ವಾರ್ಷಿಕ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾಗಿದ್ದಾರೆ.
ಬಡವರಿಂದಲೇ ತುಂಬಿರುವ ಹಳ್ಳಿಕೆರೆ  ಶಾಲೆಯಲ್ಲೀಗ 174 ಮಕ್ಕಳಿದ್ದಾರೆ. 4 ವರ್ಷದ ಹಿಂದೆ ಇವರು ಈ ಶಾಲೆಗೆ ಬಂದಾಗ 90 ಮಕ್ಕಳು  ಇದ್ದರು. ಇವರು ಮಾಡಿದ ಮೊದಲ ಕೆಲಸವೆಂದರೆ, ಒಂದನೆಯ ತರಗತಿಗೆ ಸೇರುವ ಪ್ರತಿ ಮಗುವಿನ ಹೆಸರಲ್ಲಿ 1 ಸಾವಿರ ರೂಪಾಯಿಯನ್ನು 10 ವರ್ಷದವರೆಗೆ ಠೇವಣಿ ಇಟ್ಟು, ಇದರ ಬಾಂಡ್‌ನ್ನು ತಾಯಿ ಮತ್ತು ಮಗುವಿನ ಹೆಸರಲ್ಲಿ ನೀಡುವುದು. ಮಗು ಎಸ್ಸೆಸೆಲ್ಸಿಗೆ ಬರುವಾಗ ಈ ಹಣ ದೊರೆಯುತ್ತದೆ. ಹಣವನ್ನು ದಾನಿಗಳಿಂದ ಪಡೆಯುತ್ತಾರೆ. ನಾಲ್ಕು ವರ್ಷದಲ್ಲಿ 1.18 ಲಕ್ಷ ರೂ ಸಂಗ್ರಹಿಸಿ 118 ಮಕ್ಕಳ ಹೆಸರಲ್ಲಿ ಠೇವಣಿ ಇಟ್ಟಿದ್ದಾರೆ. ಸಹಜವಾಗಿಯೇ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
 ಇನ್ನೊಂದು ಮಹತ್ವದ ಕೆಲಸವೆಂದರೆ, ಈ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿರುವುದು. ಈ ಮಕ್ಕಳಿಗಾಗಿ ಇಬ್ಬರು ಶಿಕ್ಷಕರು ಮತ್ತು ಒಬ್ಬ ಆಯಾ ನೇಮಕ. ಇದರ ಖರ್ಚು ಭರಿಸಲು ದಾನಿಗಳಿಂದ ಹಣ ಸಂಗ್ರಹಿಸಿ ‘ಶಿಕ್ಷಣ ನಿಧಿ’ ಆರಂಭ. ಕಳೆದೆರಡು ವರ್ಷದಿಂದ 35 ಮಕ್ಕಳು ಇಲ್ಲಿ ಸೇರ್ಪಡೆಯಾಗಿದ್ದಾರೆ. ಇದಕ್ಕೆ ಜಿಪಂ ಮಾಜಿ ಸದಸ್ಯ ಎಸ್. ಕುಮಾರ್ ನೆರವು ನೀಡಿದ್ದನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಈ ಮಕ್ಕಳಿಗೆ ‘ಸ್ಮಾರ್ಟ್ ಕ್ಲಾಸ್’ ವ್ಯವಸ್ಥೆ ಇದೆ.
ಈ ಮಕ್ಕಳಿಗೆ ಆಂಗ್ಲ ಭಾಷೆಯ ಪುಸ್ತಕವನ್ನು ಇಲ್ಲಿ ದಾನಿಗಳಿಂದ ಕೊಡಿಸಿ, ಅವರಲ್ಲಿ ಆಂಗ್ಲ ಭಾಷೆಯ ಜ್ಞಾನ ಮೂಡಿಸುತ್ತಿದ್ದಾರೆ. ಈ ಶಾಲೆಗೆ ಸರಕಾರ 6 ಮತ್ತು 7ನೆಯ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡಿದೆ. ಹಳೆವಿದ್ಯಾರ್ಥಿ ಸಂಘದವರ ದಾನದ ಮೂಲಕ ಈ ಎಲ್ಲ ಕೆಲಸ ಮಾಡುತ್ತಿದ್ದಾರೆ. ಶಾಸಕ ಅಪ್ಪಾಜಿಗೌಡರು ಸುಮಾರು 300 ಮಕ್ಕಳು ಏಕಕಾಲದಲ್ಲಿ ಊಟ ಮಾಡಬಲ್ಲ ಹಾಲ್ ಕಟ್ಟಿಸಿಕೊಟ್ಟಿದ್ದಾರೆ. ಶಾಲೆಯ ಶಿಕ್ಷಕವರ್ಗ ಮತ್ತು ಮಕ್ಕಳೇ ಸ್ವತಃ ಆಸಕ್ತಿಯಿಂದ ಬೆಳೆಸಿದ ಪೌಷ್ಟಿಕಾಂಶವುಳ್ಳ ತರಕಾರಿಗಳೇ ಬಿಸಿಯೂಟದ ಅಡುಗೆಗೆ ಬಳಸಲ್ಪಡುತ್ತದೆ. 
ಪ್ರತಿ ಶುಕ್ರವಾರ ಕೊನೆಯ ಒಂದೂವರೆ ಗಂಟೆ ಪಠ್ಯೇತರ ಚಟುವಟಿಕೆ. ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಪ್ರತಿ ವಾರ ಒಬ್ಬೊಬ್ಬ ಶಿಕ್ಷಕರು ಬಹುಮಾನ ನೀಡಿ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಎಲ್ಲಾ ಕೆಲಸಕ್ಕೆ ಇತರೆ 8 ಸಹಶಿಕ್ಷಕರು ಸಹಕರಿಸುತ್ತಿದ್ದಾರೆ. ಶಾಲಾಭಿವೃದ್ಧಿ ಮಂಡಳಿಯವರೂ ಬೆಂಬಲಿಸುತ್ತಿದ್ದಾರೆ.
ಮೂಲತಃ ಭದ್ರಾವತಿ ತಾಲೂಕು ನವುಲೆ- ಬಸಾಪುರ ಗ್ರಾಮದ ನಾಯ್ಕರು ತವರಿನಲ್ಲಿ ಪಿಯುವರೆಗೆ ಓದಿ, ಚಿತ್ರದುರ್ಗದಲ್ಲಿ ಪದವಿ ಪೂರೈಸಿ, ಕೊಟ್ಟೂರಿನಲ್ಲಿ ಬಿಇಡಿ ಓದಿ, ಪೊಲೀಸ್ ಕೆಲಸಕ್ಕೆ ಸೇರಿದ್ದರು. ಅನಂತರ ಅದಕ್ಕೆ ರಾಜೀನಾಮೆ ನೀಡಿ, ಶಿಮುಲ್‌ನಲ್ಲಿ ಲೆಕ್ಕಾಧಿಕಾರಿಯಾಗಿ ಕೆಲವು ವರ್ಷ ಕೆಲಸ ಮಾಡಿ, ಅಲ್ಲಿಯೂ ರಾಜೀನಾಮೆ ನೀಡಿ, ಶಿಕ್ಷಕರಾಗಿ ಆಯ್ಕೆಯಾದರು. 25 ವರ್ಷಗಳಿಂದ ಈ ವೃತ್ತಿಯಲ್ಲಿರುವ ಅವರನ್ನು ತಾಲೂಕು, ಜಿಲ್ಲಾ ಮತ್ತು ರಾಜ್ಯ ಶಿಕ್ಷಕ ಪ್ರಶಸ್ತಿಗಳು ಅರಸಿ ಬಂದಿವೆ. ಈ ಬಾರಿ ಕನ್ನಡ ಪ್ರಭ- ಸುವರ್ಣ ನ್ಯೂಸ್ ಕೊಡಮಾಡುವ ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿಯ ಗರಿ! ಪಬ್ಲಿಕ್ ಟಿವಿ ಚಾನೆಲ್‌ನಲ್ಲಿ ‘ಪಬ್ಲಿಕ್ ಹೀರೊ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಹಿರಿಮೆ ಇವರದು.
  ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ಶಿಕ್ಷಕ ನಿವೃತ್ತನಾದರೂ ಅವನಿಂದ ಕಲಿತ ವಿದ್ಯಾರ್ಥಿಗಳು ಸದಾ ಸ್ಮರಿಸುತ್ತಾರೆ.  ಶಿಕ್ಷಕನಾದವ ಸಕ್ರಿಯನಾಗಿದ್ದು, ಸೃಜನಶೀಲತೆಯನ್ನು ಬೆಳೆಸಿಕೊಂಡರೆ ಎಲ್ಲಾ ಶಾಲೆಗಳು ಮಾದರಿಯಾಗಬಲ್ಲವು ಎನ್ನುತಾರೆ ಕೂಬಾ ನಾಯ್ಕ್.

published on 29.10.16
................................


No comments:

Post a Comment