Thursday 18 January 2018

ಸ್ಕೌಟ್ ಸಾಧಕ
ರಾಮ್ ಸಿಂಗ್

ಮಾನಸಿಕ, ದೈಹಿಕ ಮತ್ತು ಅಧ್ಯಾತ್ಮಿಕ ಸಂಸ್ಕೃತಿಯನ್ನು ಕಲಿಸುವ ಸ್ಕೌಟ್ ಮತ್ತು ಗೈಡ್ಸ್, ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ಕೌಟ್ ಎನ್ನುವುದು ಒಂದು ಶಿಕ್ಷಣ, ಆದರೆ ನಿರ್ದೇಶನವಲ್ಲ ಎನ್ನುತ್ತಾರೆ ಸರ್ ರಾಬರ್ಟ್ ಬೇಡೆನ್ ಪೊವೆಲ್.  ಸ್ಕೌಟ್‌ನಿಂದ ಶಿಸ್ತು, ಐಕ್ಯತೆ, ಭ್ರಾತೃತ್ವ ಬೆಳೆಯುತ್ತದೆ. ಇಂತಹ ಅಪೂರ್ವ ಶಿಕ್ಷಣ ಪದ್ಧತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಿದವರು ಹಲವರಿದ್ದಾರೆ. ವರಲ್ಲೊಬ್ಬರು ರಾಮ್‌ಸಿಂಗ್. ಅವರ ಅಪೂರ್ವ ಸಾಧನೆಯನ್ನು ಗಮನಿಸಿ ಇತ್ತೀಚೆಗೆ ರಾಜ್ಯ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ.
ರಾಮ್ ಸಿಂಗ್ ಹೆಸರು ರಾಜ್ಯ ಸ್ಕೌಟ್‌ನಲ್ಲಿ ಹೆಸರುವಾಸಿ. ಸದ್ಯ ಜಿಲ್ಲಾ ಸ್ಥಾನಿಕ ಆಯುಕ್ತರಾಗಿರುವ ಇವರು, ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕೆಲಸ ಮಾಡುತ್ತಲೇ ಈ ಸೇವೆಗೆ ಸೇರಿ ಅಪಾರ ಅನುಭವ ಗಳಿಸಿ, ವಿಶೇಷ ತರಬೇತಿ ಪಡೆದು ನೂರಾರು ಸ್ಕೌಟ್ ಶಿಕ್ಷಕರನ್ನು ಬೆಳೆಸಿದವರು. ತಮ್ಮ 77ರ ಹರೆಯದಲ್ಲೂ ಸ್ಕೌಟ್ ಎಂದರೆ ಅವರ ಕಿವಿ ನಿಮಿರುತ್ತದೆ. ಇಂದಿಗೂ ಅವರಲ್ಲಿನ ಶಿಸ್ತು, ಮಾತುಗಾರಿಕೆ ಮತ್ತು ಕ್ರಿಯಾಶೀಲತೆಗೆ ಸ್ಕೌಟ್ ಕಾರಣ ಎಂದರೆ ತಪ್ಪಾಗಲಾರದು.
ಮೂಲತಃ ಚನ್ನಗಿರಿ ತಾಲೂಕು ವಡ್ನಾಳದವರಾದ ರಾಮ್ ಸಿಂಗ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಲ್ಲಿಯೇ ಕಲಿತು ಶಿವಮೊಗ್ಗದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯವರೆಗೆ ಓದಿದವರು. ಬೆಂಗಳೂರಿನಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರಕ್ ಸಂಸ್ಥೆಯಲ್ಲಿ ಬಿ.ಇಡಿ ಪದವಿ ಪಡೆದು, ಶಿಕ್ಷಕರಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕನಕಪುರದ ಪ್ರಾಥಮಿಕ ಶಾಲೆಗೆ 1965ರಲ್ಲಿ ನೇಮಕಗೊಂಡರು. ಮಾಜಿ ಸಚಿವ, ಸ್ಕೌಟ್ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ, ಸಿಂಗ್ ಅವರ ಶಿಷ್ಯರಲ್ಲೊಬ್ಬರು. ಸಿಂಧ್ಯಾಗೆ ಇಂದಿಗೂ ಸಿಂಗ್ ಅವರಲ್ಲಿ ಅಪಾರ ಗುರುಭಕ್ತಿ. ಕನಕಪುರದಿಂದ ಭದ್ರಾವತಿಯ ನ್ಯೂಟೌನ್ ಸರ್ಕಾರಿ ಶಾಲೆಗೆ 1969ರಲ್ಲಿ ವರ್ಗಾವಣೆಗೊಂಡು ಬಂದ ನಂತರ 1971ರಲ್ಲಿ ಕಬ್ ಮಾಸ್ಟರ್ ತರಬೇತಿ ಪಡೆದುಕೊಂಡು ಕೆಲಸ ನಿರ್ವಹಿಸುತ್ತಲೇ 1985ರಲ್ಲಿ  ರಾಜ್ಯದ ಸಹಾಯಕ ಸ್ಕೌಟ್ ಆಯುಕ್ತರಾಗಿ ನೇಮಕಗೊಂಡರು. ಇದು ಇಡೀ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿಯನ್ನು ಹೊಂದಿತ್ತು. ಈ ವೇಳೆಗೆ ಶಿವಮೊಗ್ಗದ ಹೊಸಮನೆ ಶಾಲೆಗೆ ಅವರು ವರ್ಗಾವಣೆಗೊಂಡಿದ್ದರು.
ತಮ್ಮ ಪ್ರಾಥಮಿಕ ಶಿಕ್ಷಣ ಕಲಿಕೆಯ ಹಂತದಲ್ಲೇ ಸ್ಕೌಟ್ ಬಗ್ಗೆ ಅಭಿರುಚಿ ಹೊಂದಿದ್ದರಿಂದಲೋ ಏನೋ, ಸ್ಕೌಟ್ ಎನ್ನುವುದು ಅವರಿಗೆ ಜೀವನದ ಅವಿಭಾಜ್ಯ ಅಂಗವಾಗಿತ್ತು. ಇದರಲ್ಲೇ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದರು. ಇದರಿಂದ ವಿವಿಧ ಹುದ್ದೆಗಳು ದೊರೆತವು. ಇಷ್ಟಾದರೂ ಸೌಮ್ಯ ಮತ್ತು ಅಷ್ಟೇ ಸಮರ್ಪಣಾಭಾವದ ಸಿಂಗ್ ಅವರ ಸೇವೆಯನ್ನು  ಯಾರೂ ಗುರುತಿಸಲೇ ಇಲ್ಲ. ಆದರೆ ಈ ವರ್ಷ ಜಿಲ್ಲಾ ಸಮಿತಿ ಅವರ  ಹೆಸರನ್ನು ರಾಜ್ಯ ಪ್ರಶಸ್ತಿಗೆ ಕಳುಹಿಸುವ ಮೂಲಕ ಪ್ರಶಸ್ತಿಯ ಗೌರವಕ್ಕೆ ಭಾಜನರಾಗುವಂತೆ ಮಾಡಿದೆ. ಅವರೆಂದೂ ಪ್ರಶಸ್ತಿ, ಸನ್ಮಾನ, ಪ್ರಚಾರ ಬಯಸದೆ ಕೆಲಸ ಮಾಡಿದರು. ಇದರಿಂದಾಗಿ ಅವರು ಬೆಳಕಿಗೆ ಬರಲೇ ಇಲ್ಲ. ಎಲೆಮರೆಯ ಕಾಯಿಯಾಗಿ ಸೇವೆ ಸಲ್ಲಿಸಿದರು. ಇಂತಹ ಸಾಧಕ ನಗರದ ಬಸವನಗುಡಿಯಲ್ಲಿ  ನಿವೃತ್ತಿ ಜೀವನ ಸಾಗಿಸುತ್ತಿದ್ದಾರೆ. ತನ್ನನರಸಿಕೊಂಡು ಬಂದ ರಾಜ್ಯ ಪ್ರಶಸ್ತಿ ನೆಮ್ಮದಿಯನ್ನು ಅವರಿಗೆ ತಂದಿದೆ. 
ಜಿಲ್ಲಾ ಸಹಾಯಕ ಆಯುಕ್ತರಾಗಿದ್ದಾಗ 3 ರ‌್ಯಾಲಿಗಳನ್ನು ಅವರು ನಡೆದಿದ್ದಾರೆ. ಅನೇಕ ರಾಷ್ಟ್ರೀಯ ತರಬೇತಿ ಮತ್ತು ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಶಿಕ್ಷಕರಿಗೆ ತರಬೇತಿ ಕೊಡುವ ವವರಾಗಿದ್ದರು. ಶಿವಮೊಗ್ಗದಲ್ಲಿ ರಾಷ್ಟ್ರೀಯ ಸ್ಕೌಟ್ ರ‌್ಯಾಲಿಯನ್ನು 1984-85ರ ಸಾಲಿನಲ್ಲಿ ಯಶಸ್ವಿಯಾಗಿ ನಡೆಸಿದ ಕೀರ್ತಿ ಅವರದ್ದು. ತಮ್ಮ ವೃತ್ತಿಯಷ್ಟೇ ಸ್ಕೌಟನ್ನೂ ಅವರು ಪ್ರೀತಿಸಿದವರು. ಜನಪದ ಸಾಹಿತ್ಯದಲ್ಲೂ ವಿಶೇಷ ಆಸಕ್ತಿಯನ್ನು ಇವರು ಹೊಂದಿದವರಾಗಿದ್ದಾರೆ.
7.7.17
...............................         

No comments:

Post a Comment