Saturday 6 January 2018

ಯೋಗಸಾಧಕ, ಕ್ರೀಡಾರತ್ನ 
ಅನಿಲ್‌ಕುಮಾರ್ ಶೆಟ್ಟರ್

.........................................
ಯೋಗ ಈಗ ಎಲ್ಲೆಡೆ ಪ್ರಖ್ಯಾತವಾಗುತ್ತಿದೆ. ಚಿಕ್ಕಮಕ್ಕಳೂ ಸಹ ಯೋಗ ತರಬೇತಿಗೆ ಸೇರುತ್ತಿದ್ದಾರೆ. ಯೋಗದಿಂದ ಸಾಕಷ್ಟು ಲಾಭವಿರುವುದನ್ನು ಅರಿತು ಶಾಲೆ-ಕಾಲೇಜುಗಳಲ್ಲಿಯೂ ಅದನ್ನೊಂದು ಕಲಿಕೆಯ ವಿಷಯವನ್ನಾಗಿ ಕಲಿಸಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಸಾಕಷ್ಟು ಯೋಗ ಸಾಧಕರಿದ್ದಾರೆ. ಅವರ ಸಾಧನೆಗೆ ಈಗ ಮೌಲ್ಯ ಬರಲಾರಂಭಿಸಿದೆ, ಅವರಿಗೆ ಕೀರ್ತಿ ದೊರೆಯಲಾರಂಭಿಸಿದೆ. ಅಂತಹವರಲ್ಲಿ ರಾಜ್ಯದ ಪ್ರತಿಷ್ಠಿತ, ಪ್ರಪ್ರಥಮ ಕ್ರೀಡಾ ರತ್ನ ಪ್ರಶಸ್ತಿಯನ್ನು ಯೋಗಕ್ಕಾಗಿ  ಗಳಿಸಿದ ಕೀರ್ತಿ ಶಿವಮೊಗ್ಗ ನಗರದ ಅನಿಲ್‌ಕುಮಾರ್ ಶೆಟ್ಟರ್ ಅವರದ್ದು.
ಶೆಟ್ಟರ್ ಅವರಿಗೆ ರಾಜ್ಯ ಸರಕಾರವು 2013-14ರ ಸಾಲಿನ ಕ್ರೀಡಾರತ್ನ ಪ್ರಶಸ್ತಿಯನ್ನು ನೀಡಿ ಮೊನ್ನೆಯಷ್ಟೇ ಗೌರವಿಸಿದೆ, ಸುಮಾರು 35 ವರ್ಷಗಳ ಕಾಲ ಯೋಗದಲ್ಲಿ ಅಪಾರ ಸಾಧನೆ ಮಾಡಿದ ಹಿರಿಮೆ ಅವರದು. ನಗರದ ಹತ್ತಾರು ಶಾಲೆಯ ಸಾವಿರಾರು ಮಕ್ಕಳಿಗೆ ಯೋಗ ಕಲಿಸಿ, ನೆಹರೂ ಕ್ರೀಡಾಂಗಣದಲ್ಲಿ ಹಲವು ವರ್ಷಗಳಿಂದ ಉಚಿತವಾಗಿ ಸಾರ್ವಜನಿಕರಿಗೆ ಹೇಳಿಕೊಟ್ಟು, ಕಣಾದ ಯೋಗ ರಿಸರ್ಚ್ ಕೇಂದ್ರವನ್ನು  ಸ್ಥಾಪಿಸಿದ ಹೆಗ್ಗಳಿಕೆ ಇವರದ್ದು.
ಶೆಟ್ಟರ್ ಮೂಲತಃ ಹಾವೇರಿಯವರು, ತಮ್ಮ 16ರ ಹರಯದಲ್ಲೇ ತಂದೆಯು ಸರ್ಕಾರಿ ನೌಕರಿಯಲ್ಲಿದ್ದುದರಿಂದ ಅವರೊಟ್ಟಿಗೆ ಶಿವಮೊಗ್ಗಕ್ಕೆ ಬಂದು ನೆಲೆಸಿ, ಇಲ್ಲಿಯೇ ಶಿಕ್ಷಣ ಪಡೆದರು. ಜೆಎನ್‌ಎನ್‌ಸಿಯಲ್ಲಿ ಮೆಕ್ಯಾನಿಕಲ್ ಇಂಜಿನೀಯರಿಂಗ್ ಪದವಿಯನ್ನೂ ಪಡೆದರು. ಚಿಕ್ಕಂದಿನಿಂದ ಆರಂಭಿಸಿದ್ದ ಯೋಗ ಕಲಿಕೆಯನ್ನು ಇಲ್ಲಿಯೂ ಮುಂದುವರೆಸಿ, ಇಂದಿಗೂ ಆ ಕ್ಷೇತ್ರದಲ್ಲಿ ತಮ್ಮದೇ ಅದ ಛಾಪನ್ನು ಮೂಡಿಸಿದ್ದಾರೆ.
ಹೈಸ್ಕೂಲಿನಲ್ಲಿ ಓದುತ್ತಿರುವ ವೇಳೆ, ಶಿಕ್ಷಕರೊಬ್ಬರು ರಜೆಯ ದಿನಗಳಲ್ಲಿ ಉತ್ತಮ ಪುಸ್ತಕಗಳನ್ನು ಓದುವ ಮೂಲಕ ಜ್ಞಾನ ಗಳಿಸಬೇಕೆಂದು ಸೂಚಿಸಿದ್ದರ ಹಿನ್ನೆಲೆಯಲ್ಲಿ ‘ಯೋಗ ದೀಪಿಕಾ’ ಎಂಬ ಪುಸ್ತಕವನ್ನು ಅಂದು ಕೈಗೆತ್ತಿಕೊಂಡ ಇವರಿಗೆ ಇಂದು ಯೋಗ ಬದುಕಿನ ಅವಿಭಾಜ್ಯ ಅಂಗವಾಗಿದೆ. ಅಂದಿನಿಂದ ಸತತ ಕಲಿಕೆ ಮೂಲಕ ಅಭ್ಯಾಸ ಮಾಡಿ ಇಂದು ಗುರುವಾಗಿದ್ದಾರೆ. ಯೋಗ ಪುಸ್ತಕದಿಂದಲೇ ನೂರಕ್ಕೂ ಹೆಚ್ಚು ಆಸನ ಕಲಿತಿದ್ದಾರೆ. ಇದಕ್ಕೆ ಹಲವು ಯೋಗ ಸಾಧಕರ ಮಾರ್ಗದರ್ಶನ ಪಡೆದಿದ್ದಾರೆ. ತಮ್ಮ ಸಾಧನೆಗೆ ಕಾರಣಕರ್ತರಾದ ಶ್ರೀಕಂಠಯ್ಯ, ನಿರಂಜನಮೂರ್ತಿ ಮೊದಲಾದ ಯೋಗಗುರುಗಳನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.
1984ರಿಂದ ವಿವಿಧ ಸ್ಪರ್ಧೆಗಳಲ್ಲಿ ಆರಂಭಿಸಿದ ಶೆಟ್ಟರ್,  ಅಂದಿನಿಂದ ಇಂದಿನವರೆಗೂ ಪ್ರಶಸ್ತಿಗಳನ್ನು ಬಾಚುತ್ತಲೇ ಇದ್ದಾರೆ. 1984ರಲ್ಲಿ ಶಿವಮೊಗ್ಗ ಜೇಸಿಸ್‌ನವರು ಏರ್ಪಡಿಸಿದ್ದ ಸ್ಪಧೆಯಲ್ಲಿ ಪ್ರಥಮ, 1986ರಲ್ಲಿ ಪ್ರಪ್ರಥಮವಾಗಿ ಭದ್ರಾವತಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ, ಮಾರನೆಯ ವರ್ಷ ಮೈಸೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಮೂರನೆ ಸ್ಥಾನ ಗಳಿಸಿದರು. 2011ರಲ್ಲಿ ಪಾಂಡಿಚೆರಿಯಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯಕ್ಕೆ  ತೆರಳಿ ದ್ವಿತೀಯ ಸ್ಥಾನಿಯಾದರು, 2011ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲೂ ಪಾಲ್ಗೊಂಡು 4 ಚಿನ್ನದ ಪದಕ ಧರಿಸಿ ಬಂದಿದ್ದಾರೆ. 2014ರಲ್ಲಿ ಚೀನಾದಲ್ಲಿ ನಡದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಇದರೊಟ್ಟಿಗೆ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿಯೆಲ್ಲ ಇವರ ಪಾಲಾಗಿದೆ.
2013-14ರ ಸಾಲಿನಿಂದ ಕ್ರೀಡಾ ಇಲಾಖೆಯು ಯೋಗವನ್ನೂ ತನ್ನ ಇಲಾಖೆಗೆ ಸೇರಿಸಿಕೊಂಡು ಕ್ರೀಡಾರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿತ್ತು. ಆ ಪ್ರಕಾರ ಶೆಟ್ಟರ್  ಅರ್ಜಿ ಸಲ್ಲಿಸಿದ್ದರು. ಆ ಸಾಲಿನ ಪ್ರಶಸ್ತಿ ಮೊನ್ನೆ ನೀಡಲ್ಪಟ್ಟಿದೆ. ಶಿವಮೊಗ್ಗದಲ್ಲಿ ದಾನಿಗಳ, ಸರಕಾರದ ನೆರವಿನಿಂದ ಯೋಗಮಂದಿರವನ್ನು ಸ್ಥಾಪಿಸಿ ಅದರಲ್ಲಿ ಯೋಗ ಕಲಿಕೆ ಮತ್ತು ಮಾರ್ಗದರ್ಶನ ನೀಡುವ ಕೆಲಸವನ್ನು ಮಾಡಬೇಕೆನ್ನ್ನುವ ಮಹದಿಚ್ಛೆಯನು ಅವರು ಹೊಂದಿದ್ದಾರೆ.
ಒತ್ತಡ ರಹಿತ, ಔಷಧಿ ರಹಿತ ಜೀವನಕ್ಕೆ ಯೋಗ ಮುಖ್ಯ, ಪ್ರತಿಯೊಬ್ಬರೂ ಆಹಾರ ಕ್ರಮವನ್ನು ಬದಲಿಸಿಕೊಳ್ಳಬೇಕು. ಇದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎನ್ನುವ ಶೆಟ್ಟರ್, ಯೋಗ ಕಲಿಕೆಯಿಂದ  ದುಶ್ಚಟ ಮುಕ್ತರಾಗಲು ಸಾಧ್ಯ. ಮನುಷ್ಯ ಮಾನಸಿಕವಾಗಿ ಸ್ವಸ್ಥನಾಗಬೇಕು. ಉತ್ತಮ ಆಹಾರ ಪದ್ಧತಿಯನ್ನು ಬೆಳೆಸಿಕೊಳ್ಳಬೇಕು ಎನ್ನುವುದು ಅವರ ಅಭಿಮತ.
,,,,,,,,,,,,,,,,,,,,,,,,,,,  

No comments:

Post a Comment