Tuesday 23 January 2018

 ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ
 ಯು.ಎಸ್. ಪುಷ್ಪಾ


ಫ್ಯಾಶನ್ ಶೋ ಹೆಚ್ಚು ಜನಪ್ರಿಯವಾಗುತ್ತಿರುವಂತೆಯೇ ಅದರಲ್ಲಿ ಪಾಲ್ಗೊಳ್ಳುವವರೂ ಹೆಚ್ಚುತ್ತಿದ್ದಾರೆ. ಮಹಾನಗರಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸ್ಪರ್ಧೆ ಇಂದು ಜಿಲ್ಲಾ ಕೇಂದ್ರಗಳಿಗೂ ಕಾಲಿಟ್ಟಿದೆ. ಕೆಲವು ಸಂಸ್ಥೆಗಳು ಇಂತಹ ಸ್ಪರ್ಧೆ ಏರ್ಪಡಿಸುವ ಮೂಲಕ ಸ್ಥಳೀಯರಲ್ಲಿರುವ ಸೌಂದರ್ಯದ ಮತ್ತು ಫ್ಯಾಶನ್ ಕಾಳಜಿ ಹಾಗೂ ಆಸಕ್ತಿಯನ್ನು ಗುರುತಿಸಿ ಅವರಿಗೆ ತಮ್ಮ ನೈಜ ಸೌಂದರ್ಯ ಮತ್ತು ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುತ್ತಿದ್ದಾರೆ. 
ಶಿವಮೊಗ್ಗದ ಪ್ರತಿಭೆ ಯು.ಎಸ್. ಪುಷ್ಪಾ  ಕಳೆದ ವಾರ ಹೈದರಾಬಾದ್‌ನಲ್ಲಿ ನಡೆದ ಪ್ರತಿಷ್ಠಿತ ರಿಲಾಯನ್ಸ್ ಜ್ಯುವೆಲ್ ಮಿಸ್ ಇಂಡಿಯಾ 2017 ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಮುಂದಿನ ಹಂತ ವರ್ಲ್ಡ್ ಮಿಸ್ ಟೂರಿಸಂ ಅಂಬಾಸಿಡರ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅತಿ ಹೆಚ್ಚು ಸ್ಪರ್ಧಿಗಳಿದ್ದರೂ  ವಿವಿಧ ಹಂತಗಳಲ್ಲಿ ನಡೆಯುವ ಇಂತಹ ಸ್ಪರ್ಧೆಯಲ್ಲಿ ತಮ್ಮ ಕೌಶಲ್ಯ, ಬುದ್ಧಿಮತ್ತೆ, ಫ್ಯಾಶನ್, ಸೌಂದರ್ಯ ಎಲ್ಲವುಗಳಲ್ಲಿ ಗೆದ್ದು ಆಯ್ಕೆಯಾಗಿದ್ದಾರೆ. 
ಪುಷ್ಪಾ ಈ ಹಿಂದೆ ಶಿವಮೊಗ್ಗದಲ್ಲಿ ಸಾಫ್ರನ್ ಇವೆಂಟ್ಸ್ ಆಯೋಜಿಸಿದ್ದ ಮಿಸ್ ಕರ್ನಾಟಕ ಹಾಗೂ ಚಿಕ್ಕಮಗಳೂರಿನಲ್ಲಿ ಆರ್ಟ್ ಬ್ಯಾಟಲ್ ಹಾಗೂ ಅಕ್ಷಯ ಮಾರ್ಕ್ಸ್ ಆಯೋಜಿಸಿದ್ದ ಕ್ವೀನ್ ಆಫ್ ಕರ್ನಾಟಕದಲ್ಲಿ ಫಸ್ಟ್ ರನ್ನರ್ ಅಪ್ ಆಗಿದ್ದರು. ಬೆಂಗಳೂರಿನಲ್ಲಿ ನಡೆದ ದಕ್ಷಿಣ ಭಾರತ ಸೌಂದರ್ಯ ಸ್ಪರ್ಧೆ ಆಯ್ಕೆಯ ಆಡಿಶನ್‌ನಲ್ಲಿ ಸುಮಾರು 400 ಸ್ಪರ್ಧಿಗಳಿದ್ದರೂ ಪುಷ್ಪಾ ಆಯ್ಕೆಯಾಗಿ ರಿಲೈಯನ್ಸ್  ಜ್ಯುವೆಲ್ ಮಿಸ್ ಇಂಡಿಯಾ ಕ್ಕೆ ಆಯ್ಕೆಯಾಗಿದ್ದರು. ಜೊತೆಗೆ ಮಿಸ್ ಫೋಟೊಜೆನಿಕ್ ಬಿರುದಿಗೂ ಭಾಜನರಾಗಿದ್ದಾರೆ. ಈ ಸ್ಪರ್ಧೆಗೆ ದೇಶದ ವಿವಿಧ ಭಾಗಗಳಿಂದ ಸುಮಾರು 80 ಮಾಡೆಲ್‌ಗಳು ಭಾಗವಹಿಸಿದ್ದರೂ ಪುಷ್ಪಾ ಮೊದಲ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದಾರೆ. 
ಚಿಕ್ಕಂದಿನಿಂದಲೂ ಇವರಿಗೆ  ಸೌಂದರ್ಯ ಸ್ಪರ್ಧೆಯಲ್ಲಿ ಆಸಕ್ತಿ ಇತ್ತು. ಟಿವಿಯಲ್ಲಿ ಬರುತ್ತಿದ್ದ ಇಂತಹ ಕಾರ್ಯಕ್ರಮ ನೋಡಿ ಪುಳಕಗೊಳ್ಳುತ್ತಲೇ ತಾನೂ ಸಹ ಅದನ್ನು ಅನುಕರಿಸುತ್ತಿದ್ದರು. ಕ್ಯಾಟ್‌ವಾಕ್ ರೂಢಿಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ಜರುಗಿದ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಇವರ ಪಾಲಾಗಿತ್ತು. ಇದರಿಂದ ಇನ್ನಷ್ಟು ಸಾಧನೆಯನ್ನು ಈ ಕ್ಷೇತ್ರದಲ್ಲಿ ಮಾಡಬೇಕೆಂದು ತೀರ್ಮಾನಿಸಿ, ಅದರತ್ತ ಗಮನಹರಿಸಿದರು. ಪರಿಣಾಮವಾಗಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಸಿದ್ಧರಾಗುವ ಮಟ್ಟಕ್ಕೆ ಬೆಳೆದಿದ್ದಾರೆ. 
ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ  ಕ್ರಿಯಾತ್ಮಕ ಮತ್ತು ಆವಿಷ್ಕಾರದ ಮಾರ್ಗದಲ್ಲಿ ಇಂತಹ ಸ್ಪರ್ಧೆಗಳು ನಡೆಯುತ್ತಿರುವುದರಿಂದ ಅದಕ್ಕೆ ತಕ್ಕವಾಗಿಯೇ ಸ್ಪರ್ಧಿಗಳು ಸಿದ್ಧಗೊಳ್ಳಬೇಕಿದೆ. ನಾವೀನ್ಯತೆ ಮತ್ತು ನೈಪುಣ್ಯತೆಯೂ ಇದರಲ್ಲಿ ಅಷ್ಟೇ ಮುಖ್ಯ. ಡಿಸೈನರ್ ತನ್ನ ಕಲಾತ್ಮಕ ಕೆಲಸವನ್ನು ಬಟ್ಟೆಯಲ್ಲಿ ಮೂಡಿಸಿದರೆ ಅದನ್ನು ಧರಿಸಿ ಕ್ಯಾಟ್‌ವಾಕ್ ಮಾಡುವುದು, ನೋಡುಗರಿಗೆ ಬಟ್ಟೆ ಇನ್ನಷ್ಟು ಅದ್ಭುತವಾಗಿ ಕಾಣುವಂತೆ ಮಾಡುವ ಕೆಲಸ ಸ್ಪರ್ಧಿಗಳದ್ದು. ಇಂತಹ ಮಹತ್ತರ ಜವಾಬ್ದಾರಿಯೊಂದಿಗೆ ಪುಷ್ಟಾ ಈ ಕ್ಷೇತ್ರದಲ್ಲಿ ಮಿನುಗುತ್ತಿದ್ದಾರೆ.     
ಮೂಲತಃ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹಸ್ವಂತೆ ಗ್ರಾಮದವರಾದ ಇವರು ಷಣ್ಮುಖ ಮತ್ತು ಗಾಂಧಿಬಜಾರ್‌ನಲ್ಲಿರುವ ಪೂಜಾ ಬ್ಯೂಟಿ ಪಾರ್ಲರ್ ಮಾಲಕಿ ವೇದಾವತಿಯವರ ಪುತ್ರಿ. ಎಸ್ಸೆಸೆಲ್ಸಿಯವರೆಗೆ ಮೈಸೂರಿನಲ್ಲಿ ಓದಿ ಮುಂದಿನ ಶಿಕ್ಷಣವನ್ನು ಶಿವಮೊಗ್ಗದಲ್ಲಿ ಮುಂದುವರೆಸಿದ್ದಾರೆ. ಸದ್ಯ ಪೆಸಿಟ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಾರೆ.
ತನ್ನ ಈ ಸಾಧನೆಗೆ ತಂದೆ-ತಾಯಿಯ ಪ್ರೋತ್ಸಾಹ ಕಾರಣ. ತಾಯಿ ಬ್ಯುಟಿಶಿಯನ್ ಆಗಿರುವುದರಿಂದ ಹೆಚ್ಚಿನ ಸಲಹೆ ನೀಡುತ್ತಿದ್ದಾರೆ.  ಕಾಲೇಜು ಅಧ್ಯಾಪಕರು ಕೊಡುತ್ತಿರುವ ಸಹಕಾರ ಅವಿಸ್ಮರಣೀಯ ಎನ್ನುವ ಪುಷ್ಪಾ, ಮುಂದೆ ಓದಿನ ಜೊತೆಗೆ ಫ್ಯಾಶನ್ ಮತು ಸೌಂದರ್ಯ ಸ್ಪರ್ಧೆ ಮತ್ತು ಆ ಕ್ಷೇತ್ರದಲ್ಲಿ ಮುಂದುವರೆಯುವ ನಿರ್ಧಾರ ಮಾಡಿದ್ದಾರೆ. 
....................................

No comments:

Post a Comment