Thursday 18 January 2018

ಹಿಂದೂಸ್ಥಾನಿ ಸಂಗೀತದ ಅರಳು ಪ್ರತಿಭೆ   
ಶ್ರೀನಿವಾಸ ಹಂಪಿಹೊಳಿ


ಸಂಗೀತ ಮನಸ್ಸಿಗೆ ಮುದ ನೀಡುವುದು ಮಾತ್ರವಲ್ಲ, ಹೃದಯ ಸಂಸ್ಕಾರ ಮಾಡುವ ಶಕ್ತಿಯನ್ನು ಹೊಂದಿದೆ.   ಲಯ, ತಾಳ, ರಾಗಗಳ ಮೂಲಕ ಪ್ರೇಕ್ಷಕರನ್ನು ಸೆರೆಹಿಡಿಯುವ ಶಕ್ತಿ ಅದಕ್ಕಿದೆ. ಇಂತಹ ತನ್ನ ವಿಶಿಷ್ಟವಾದ ಮಾಧುರ್ಯದಿಂದ ವಾಸ್ತವ ಲೋಕದಿಂದ ಮುಕ್ತವಾಗಿಸುವಲ್ಲಿ  ಸಂಗೀತ ಯಶಸ್ವಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಗೀತ ಕಲಿಯುವವರ ಸಂಖ್ಯೆ ಹೆಚ್ಚುತ್ತಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಲಿಸುವುದೆಂದರೆ ರಸದೂಟವಾಗಿರುವುದರಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಇಂದಿನ ಯುವಪೀಳಿಗೆ ಇದರತ್ತ ವಾಲುತ್ತಿದ್ದಾರೆ.
ಶಿವಮೊಗ್ಗದಲ್ಲೂ ಇದರ ಸಾಧಕರು ಕಡಿಮೆ ಸಂಖ್ಯೆಯಲ್ಲೇನಿಲ್ಲ. ಇಂತಹವರಲ್ಲಿ ಬಾಲಸಾಧಕನೊಬ್ಬ ಈಗ ವೇದಿಕೆ ಏರಲಾರಂಭಿಸಿದ್ದಾನೆ. ಆತ ಬೇರಾರೂ ಅಲ್ಲ. ಸಂಗೀತದಲ್ಲಿ ಪಳಗಿದ ,  ಹೆಸರುವಾಸಿಯಾದ, ದಂಪತಿ ಅರುಣ್ ಹಂಪಿಹೊಳಿ ಮತ್ತು ರೇಖಾ ಹಂಪಿಹೊಳಿ ಅವರ ಏಕಮಾತ್ರ ಪುತ್ರ ಶ್ರೀನಿವಾಸ.
ಶ್ರೀನಿವಾಸನಿಗೆ ಸಂಗೀತ ಪಂಚಪ್ರಾಣ. ಬಾಲ್ಯದಿಂದಲೂ ಸಂಗೀತದ ಗಾನ, ರಾಗ, ವಾದನದ ಶಬ್ದದಲ್ಲೇ ಬೆಳೆದಿದ್ದರಿಂದಲೋ ಏನೋ ಆತನೂ ಉತ್ತಮ ಹಿಂದೂಸ್ಥಾನಿ ಗಾಯಕನಾಗುತ್ತಿದ್ದಾನೆ. ಈತನ ತಂದೆ ಅರುಣ್ ಗಾಜನೂರಿನಲ್ಲಿ ನೀರಾವರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ. ತಾಯಿ ರೇಖಾ ಗಾಜನೂರು ನವೋದಯ ಶಾಲೆಯಲ್ಲಿ ಸಂಗೀತ ಶಿಕ್ಷಕಿ. ಹೀಗಾಗಿ ಸಂಗೀತದ ಗಾಳಿಯಲ್ಲೇ ಬೆಳೆದಿದ್ದಾನೆ. ಈತನ ಇನ್ನೊಂದು ಮುಖ  ದಾಸವಾಣಿ ಹಾಡುವುದು. ಮೂರನೆಯ ಮುಖ ತಬಲಾ ವಾದನ. ಈಗಾಗಲೇ ಶಿವಮೊಗ್ಗ ಸಹಿತ ಉತ್ತರ ಕರ್ನಾಟಕದ ಬಾಗಲಕೋಟೆ, ರಾಮದುರ್ಗ, ನರಗುಂದ, ವಿಜಯಪುರ ಮೊದಲಾದೆಡೆಗಳಲ್ಲಿ ದಾಸವಾಣಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾನೆ. ಗಾಜನೂರಿನ ನವೋದಯ ಶಾಲೆಯಲ್ಲಿ ದ್ವಿತೀಯ ಪಿಯು ಓದುತ್ತಿರುವ ಈ ಬಾಲಕ ಹಿಂದೂಸ್ಥಾನಿ ಸಂಗೀತದ ಅರಳು ಪ್ರತಿಭೆಯೂ ಹೌದು. 
ತನ್ನ ತಾಯಿ ರೇಖಾ ಅವರಲ್ಲಿ ಸಂಗಿತಾಭ್ಯಾಸ ಆರಂಭಿಸಿದ ಶ್ರೀನಿವಾಸ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಮತ್ತು ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗುವ ಮೂಲಕ ತಾನೊಬ್ಬ ಪ್ರತಿಭಾನ್ವಿತ ಗಾಯಕನಾಗಬಲ್ಲೆ ಎನ್ನುವುದನ್ನು ನಿರೂಪಿಸಿದ್ದಾನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ್ರಾಯೋಜಿಸಿದ್ದ ಕೆಲವು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾನೆ. ಆದರೆ ಅಧಿಕೃತವಾಗಿ ಇತ್ತೀಚೆಗೆ ಶಿವಮೊಗ್ಗದಲ್ಲಿ ಸಪ್ತಸ್ವರ ಸಂಗೀತ ಸಭಾದ ಅವರು ಏರ್ಪಡಿಸಿದ್ದ ಅಪರೂಪದ ಹಿಂದೂಸ್ಥಾನಿ ಗಾಯನ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಶ್ರೋತೃಗಳ ಮನತಣಿಸಿದ್ದಾನೆ.
   ಪ್ರಸ್ತುತ ನಗರದ ಅಶೋಕನಗರದ ಶಿವಮೊಗ್ಗ ವೇಣುಗೋಪಾಲ ಅವರಲ್ಲಿ ಹಿಂದೂಸ್ಥಾನಿ ಗಾಯನ ಕಲಿಯುತ್ತಿದ್ದಾನೆ. ಈತನ ಪ್ರತಿಭೆ ಗುರುತಿಸಿ ಬೆಂಗಳೂರಿನ ಸಪ್ತಕ ಸಂಸ್ಥೆಯು ಸ್ಕಾಲರ್‌ಶಿಪ್ ನೀಡಿ ಗೌರವಿಸಿದೆ. ಜೊತೆಗೆ ತಬಲಾ ವಾದನದಲ್ಲೂ ಈತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾನೆ.  ಮಹಾರಾಷ್ಟ್ರ ಸರ್ಕಾರ ನಡೆಸುವ ಗಂಧರ್ವ ಮಹಾವಿದ್ಯಾಲಯ  ಸಂಗೀತ ಪರೀಕ್ಷೆಯಲ್ಲಿ ಮಧ್ಯಮ, ಪೂರ್ಣ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾನೆ.
 ಸ್ಪಿಕ್ ಮೆಕೆ ಸಂಸ್ಥೆ ಯುವ ಸಂಗೀತ ಪ್ರತಿಭೆಗಳಿಗೆ ಗುರುಕುಲದಲ್ಲಿ ಉಚಿತ ಸಂಗೀತ ಶಿಕ್ಷಣ ನೀಡುತ್ತಿದ್ದು, ಬೆಂಗಳೂರಿನಲ್ಲಿ ಮುಂದಿನವಾರ ಈ ಸಂಬಂಧ ಸಂದರ್ಶನ ಏರ್ಪಡಿಸಿದೆ. ಇದರಲ್ಲಿ ಶ್ರೀನಿವಾಸ್ ಭಾಗವಹಿಸಲಿದ್ದಾನೆ. ಈ ಯುವಪ್ರತಿಭೆ ಇನ್ನಷ್ಟು ವೇದಿಕೆಗಳಲ್ಲಿ ಮಿಂಚಬೇಕಿದೆ. ಮಲೆನಾಡಿಗೆ ಹೆಸರು ತರಬೇಕಿದೆ. ಅನೇಕ ಪ್ರಶಸ್ತಿ, ಗೌರವಾದರಗಳು ಸಿಗಬೇಕಿದೆ.. ತನ್ನ ಬದುಕಿನ ಸಾಕ್ಷಾತ್ಕಾರಕ್ಕಾಗಿ ಮತ್ತು ಶ್ರೋತೃಗಳ ಸಂತೋಷಕ್ಕೆ ಕಾರಣರಾಗಬೇಕಿದೆ. 
ಬೆಳೆವ ಸಿರಿ ಮೊಳಕೆಯಲ್ಲಿ ನೋಡು ಎನ್ನುವ ಮಾತಿದೆ. ಇತ್ತೀಚೆಗೆ ಕುವೆಂಪು ರಂಗಮಂದಿರದಲ್ಲಿ ಈತನ ಹಿಂದೂಸ್ಥಾನಿ ಕಾರ್ಯಕ್ರಮ ಕೇಳಿದವರಿಗೆ ಈ ಕ್ಷೇತ್ರದಲ್ಲಿ ಮಿಂಚಬಲ್ಲ ಎಲ್ಲ ಪ್ರತಿಭೆ ಶ್ರೀನಿವಾಸನಲ್ಲಿದೆ ಎನ್ನುವುದು ಶ್ರುತಪಟ್ಟಿದೆ. ನಗರದ ಈ ಯುವಪ್ರತಿಭೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳಗಲು ಸಾಕಷ್ಟು ಅವಕಾಶಗಳು ಬಾಗಿಲ ತೆರೆದು ನಿಂತಿವೆ. ಅವುಗಳನ್ನು ಸದುಪಯೋಗಿಸಿಕೊಂಡು ಶ್ರೀನಿವಾಸ ಬೆಳಗಲಿ, ಕೀರ್ತಿ ತರಲಿ.ಎಲ್ಲೆಡೆ ಹಿಂದೂಸ್ಥಾನಿ ಸಂಗೀತದ ಕಂಪು ಬೀರಲಿ.
................................. 

No comments:

Post a Comment