Wednesday 10 January 2018


ಆಟಕ್ಕೂ ಸೈ, ಓದಿಗೂ ಸೈ
ಕಿಶನ್ ಗಂಗೊಳ್ಳಿ

ಚೆಸ್‌ನಲ್ಲಿ ಮತ್ತು ಜೀವನದಲ್ಲಿ ಮುಂದಾಲೋಚನೆಯೇ ಗೆಲುವನ್ನು ತಂದುಕೊಡುತ್ತದೆ ಎಂಬ ಮಾತಿದೆ. ಅಂದರೆ ಮನಸ್ಸನ್ನು ಕೇಂದ್ರೀಕರಿಸುವ ಕ್ರೀಡೆ ಚೆಸ್. ವ್ಯಕ್ತಿ ತನ್ನ ಬುದ್ಧ್ಧಿಮತ್ತೆಯಿಂದಲೇ ಗೆಲ್ಲಬೇಕಾದ ಆಟ ಇದು. ಇಂತಹ ಆಟವನ್ನು ಎಳವೆಯಿಂದಲೇ ಕಲಿತು ಅಸಾಧಾರಣ ಸಾಧನೆ ಮಾಡಿದವರು ಕೆಲವರಿದ್ದಾರೆ. ಇದರಲ್ಲಿ ಅಂಧರ ಚೆಸ್ ವಿಭಾಗವಿದ್ದು, ಸದ್ಯ ಅದರಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವವರು ನಗರದ ಪ್ರತಿಭೆ ಕಿಶನ್ ಗಂಗೊಳ್ಳಿ.
ಕಿಶನ್ ಚೆಸ್‌ನಷ್ಟೇ ಓದಿನಲ್ಲೂ ಚುರುಕು. ಶೇ. 75ರಷ್ಟು ಅಂಧತ್ವ ಹೊಂದಿದ್ದರೂ ಸಾಮಾನ್ಯ ಚೆಸ್ ಮೂಲಕವೇ ಬೆಳೆದು ನಂತರ ಅಂಧರ ಚೆಸ್ ಆಡಿದ ಕೀರ್ತಿ ಇವರದ್ದು. ಚೆಸ್ ರೇಟಿಂಗ್‌ನಲ್ಲಿ 2043 ಪಾಯಿಂಟ್ ಗಳಿಸಿ ಮುಂಚೂಣಿಯಲ್ಲಿರುವ 23ರ ಕಿಶನ್, ಸದ್ಯ ಅರ್ಥಶಾಸ್ತ್ರ ಎಂ.ಎ.ಯಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಎರಡನೆಯ ರ‌್ಯಾಂಕ್ ಗಳಿಸಿದ್ದಾರೆ.
6ನೆಯ ತರಗತಿಯಲ್ಲಿರುವಾಗ ಸೋದರ ಮಾವನ ಒತ್ತಾಯದ ಮೇರೆಗೆ ಚೆಸ್ ಕಲಿಯಲು ನಗರದ ನಳಂದಾ ಚೆಸ್ ಅಕಾಡೆಮಿಗೆ ಸೇರಿ 3 ವರ್ಷ ಕಲಿತು, ನಂತರ ಸ್ವಂತವಾಗಿ ಅಭ್ಯಾಸ ನಡೆಸಿ ರಾಜ್ಯ ಮಟ್ಟದಲ್ಲಿ ಆಡಿದರು. ಅಲ್ಲಿಯವರೆಗೆ ಅಷ್ಟೊಂದು ಗಂಭೀರವಾಗಿ ಚೆಸ್ ಅನ್ನು ಅವರು ಗಮನಿಸಿರಲಿಲ್ಲ. ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ  ಪಿಯುನಲ್ಲಿ ಓದುವಾಗ ಚಿಕ್ಕಮಗಳೂರಿನಲ್ಲಿ ನಡೆದ ಇಂಟರ್ ಪಿಯು ಚೆಸ್ ಟೂರ್ನಿಯಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನ ಗಳಿಸುವ ಮೂಲಕ ಯಶ್ವಸಿ ಚೆಸ್ ಪಯಣ ಆರಂಭಿಸಿ ಇಂದಿನವರೆಗೂ ಹಿಂದಿರುಗಿ ನೋಡಲೇ ಇಲ್ಲ. ಇದಾದ ಬಳಿಕ ಎರಡು ರಾಷ್ಟ್ರೀಯ ಟೂರ್ನಿ ಅಡಿ ಬೆಳಿ ಪದಕದೊಂದಿಗೆ ಮರಳಿದರು.
ಪಿಯು ನಂತರ ಅಂಧರ (ದೃಷ್ಟಿದೋಷವುಳ್ಳವರ) ಚೆಸ್ ಕಲಿಕೆ ಆರಂಭಿಸಿದರು. ಇದರಲ್ಲಿ ಚೆಸ್ ಬೋರ್ಡ ಮಾತ್ರ ಸ್ವಲ್ಪ ಬದಲಿರುತ್ತದೆ. ಪಾನಿಪತ್‌ನಲ್ಲಿ ನಡೆದ ಅಂಧರ ಚೆಸ್ ನ್ಯಾಶನಲ್ ಟೂರ್ನಿಯಲ್ಲಿ ಪಾಲ್ಗೊಂಡು ಬೆಳ್ಳಿ, 2011ರಲ್ಲಿ ಇಂಡಿಯನ್ ಬ್ಲೈಂಡ್ ಚೆಸ್ ಟೂರ್ನಿಯಲ್ಲಿ ದ್ವಿತೀಯ ಸ್ಥಾನ, 2011ರಲ್ಲಿ ವಿಶ್ವ ಅಂಧರ ಚೆಸ್ ಟೂರ್ನಿ ಗ್ರೀಸ್‌ನಲ್ಲಿ ನಡೆದಾಗ ಅಲ್ಲಿಯೂ 6ನೆಯ ಸ್ಥಾನ ಪಡೆದರು. 2103ರಲ್ಲಿ ಚೆನ್ನೈನಲ್ಲಿ ಅಂತಾರಾಷ್ಟ್ರೀಯ ಚೆಸ್ ಒಲಿಂಪಿಯಾಡ್ ನಡೆದಾಗ  ಚಿನ್ನದ ಹುಡುಗನಾದರು. 2013ರಿಂದ  ಸತತವಾಗಿ 3 ಬಾರಿ ನ್ಯಾಶನಲ್ ಟೂರ್ನಿಯಲ್ಲಿ ಮೊದಲ ಸ್ಥಾನಿಯಾದರು. 2013ರಲ್ಲಿ ಸ್ಪೇನ್ ಮತ್ತು 2014ರಲ್ಲಿ ಗ್ರೀಸ್‌ನಲ್ಲಿ ನಡೆದ ಟೂರ್ನಿಯಲ್ಲೂ ಪಾಲ್ಗೊಂಡು ಯಶಸ್ಸಿನ ಗರಿ ಹೊತ್ತರು. ತೀರಾ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ನ್ಯಾಶನಲ್ ಚೆಸ್ ಟೂರ್ನಿಯಲ್ಲಿ ಮೊದಲ ಸ್ಥಾನಿಯಾಗಿದ್ದಾರೆ.
ಈತನ ಸಾಧನೆ ಗಮನಿಸಿ ಶಿವಮೊಗ್ಗ ನಗರಪಾಲಿಕೆಯವರು ದಸರಾದಲ್ಲಿ ಸನ್ಮಾನಿಸಿದ್ದಾರೆ. ಆದರೆ ಸರ್ಕಾರಗಳು ಮಾತ್ರ ಇನ್ನೂ ಕಣ್ತೆರೆದು ನೋಡಿಲ್ಲ. ಇಂತಹ ಪ್ರತಿಭಾವಂತ ಸಾಧಕನ ಬಗ್ಗೆ ರಾಜಕಾರಣಿಗಳು, ವಿವಿಧ ಸಂಘ-ಸಂಸ್ಥೆಗಳು ಅರಿತು ಗೌರವಿಸುವುದರ ಜೊತೆಗೆ ನೆರವು ನೀಡಿ, ಮುಂದಿನ ಟೂರ್ನಿಗಳಿಗೆ ಸಹಾಯಕರಾಗಬೇಕಿದೆ. ಅಧಿಕಾರಿಗಳು ಅಂಧರ ಕೋಟಾದಲ್ಲಿ ಸೌಲಭ್ಯ ಸಿಗುವಂತೆ ಮಾಡಬೇಕೆನ್ನುವುದು ಗೀತಾ ಅವರ ಮನವಿ.
ಚೆಸ್‌ನಷ್ಟೇ ಮಹತ್ವವನ್ನು ಓದಿಗೂ ನೀಡಿರುವ ಕಿಶನ್ ಮುಂದೆ ಐಎಎಸ್ ಗೆ ಸಿದ್ಧತೆ ನಡೆಸುವ ಇರಾದೆ ಹೊಂದಿದ್ದಾರೆ. ಚೆಸ್ ರೇಟಿಂಗ್‌ನಲ್ಲಿ ಇನ್ನಷ್ಟು ಪಾಯಿಂಟ್‌ಗಳು ಬಂದರೆ ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ನೇಮಕವಾಗುವ ಅವಕಾಶವಿದೆ. ಇದೆಲ್ಲದಕ್ಕೂ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಗೀತಾ ಮಗನ ಅಪೂರ್ವ ಸಾಧನೆಯಿಂದ ಖುಷಿಗೊಂಡಿದ್ದಾರೆ. 
 ದೇಶದಲ್ಲಿ ಅಂಧ ಚೆಸ್ ಆಟಗಾರರಲ್ಲಿ ಉತ್ತಮ ಸಾಧನೆ ತೋರುತ್ತಿರುವವರಲ್ಲಿ ಕಿಶನ್ ಅಗ್ರಸ್ಥಾನದಲ್ಲಿದ್ದಾರೆ. ತಾಯಿ ಸದಾ ಪ್ರೋತ್ಸಾಹ ನೀಡುತ್ತ ಸಾಧನೆಗೆ ನೀರೆರೆಯುತ್ತಿದ್ದಾರೆ. ಶಿವಮೊಗ್ಗದವರೇ ಅದ ಆರ್ಬಿಟರ್ ಮಂಜುನಾಥ ಅವರ ಬೆಂಬಲವನ್ನು ಎಂದಿಗೂ ಮರೆಯುವಂತಿಲ್ಲ. ಮುಂದಿನ ವರ್ಷ ಮೆಸಿಡೋನಿಯಾದಲ್ಲಿ ಚೆಸ್ ಒಲಿಂಪಿಯಾಡ್ ನಿಗದಿಯಾಗಿದೆ. ಅದರಲ್ಲಿ ಉತ್ತಮ ಸಾಧನೆ ತೋರುವುದು ಗುರಿಯಾಗಿದೆ. ಇದಕ್ಕೂ ಮುನ್ನ ಮಣಿಪಾಲದಲ್ಲಿ ಏಶಿಯನ್ ಚಾಂಪಿಯನ್‌ಶಿಪ್ ನಡೆಯಲಿದೆ. ಅಲ್ಲಿಯೂ ಪಾಲ್ಗೊಳ್ಳುತ್ತೇನೆ ಎನ್ನುತ್ತಾರೆ ಕಿಶನ್.

published on 22.10.16
,,,,,,,,,,,,,,,,,,,,,

No comments:

Post a Comment