Wednesday 10 January 2018

ರಾಜ್ಯ  ಕ್ರಿಕೆಟ್‌ನಲ್ಲಿ ನಗರದ ಪ್ರತಿಭೆ 
ಅದಿತಿ ರಾಜೇಶ್




ಇಂದಿನ ಯುವಕ- ಯುವತಿಯರಲ್ಲಿ ಕ್ರಿಕೆಟ್ ಎಂದರೆ ಅದೇನೋ ವಿಶೇಷ ಆಸಕ್ತಿ. ಅದರಲ್ಲೂ ಅಂತಾರಾಷ್ಟ್ರೀಯ ಪಂದ್ಯಗಳನ್ನು ಕುತೂಹಲದಿಂದ ವೀಕ್ಷಿಸುತ್ತಾರೆ. ತಮ್ಮದೇ ಆದ ರೀತಿಯಲ್ಲಿ ವಿಮರ್ಶೆ ಮಾಡುತ್ತಾರೆ. ಬಿಡುವಿದ್ದಾಗ ಗಲ್ಲಿ-ಗಲ್ಲಿಗಳಲ್ಲಿ ಆಡುತ್ತಾರೆ. ಮೈದಾನಗಳಂತೂ ರಜಾ ದಿನದಲ್ಲಿ ಖಾಲಿ ಇರುವುದೇ ಇಲ್ಲ. ಅಷ್ಟೊಂದು ಕ್ರಿಕೆಟ್ ಹುಚ್ಚು ನೆಲೆಸಿದೆ. ಆದರೆ ಇದರಲ್ಲಿ ಉತ್ತಮ ತರಬೇತಿ ಪಡೆದು ಮುಂದುವರೆಸುವವರು ತೀರಾ ವಿರಳ. ಏಕೆಂದರೆ, ಹಲವೆಡೆ ತರಬೇತಿ ನೀಡುವ ವ್ಯವಸ್ಥೆ ಇಲ್ಲ. ಇನ್ನೂ ಹಲವರಿಗೆ ಇದು ದುಬಾರಿಯಾಗಿಯೂ ಪರಿಣಮಿಸುತ್ತಿದೆ. ಆದರೆ ಇತ್ತೀಚೆಗೆ ಪ್ರತಿಭಾವಂತ ಬಾಲಕ-ಬಾಲಕಿಯರನ್ನು ಶೋಧಿಸಲು ಕರ್ನಾಟಕ ಕ್ರಿಕೆಟ್ ಅಕಾಡೆಮಿ (ಕೆಸಿಎ) ಸ್ವತಃ ಮುಂದಾಗಿದೆ. ಹಲವರು ಪ್ರತಿಭಾ ಶೋಧ ಟೂರ್ನಿಗಳನ್ನು ಏರ್ಪಡಿಸುತ್ತಿದೆ. ಶಿವಮೊಗ್ಗದಲ್ಲೂ ಇಂತಹ ಕಾರ್ಯಕ್ರಮ ನಡೆಯುತ್ತಿದೆ. ಇದರೊಟ್ಟಿಗೆ  ಕ್ರಿಕೆಟ್ ಕೋಚಿಂಗ್ ಸಂಸ್ಥೆಗಳೂ ಇರುವುದರಿಂದ ಅದರ ಮೂಲಕವೂ ತರಬೇತಿ ಪಡೆಯುತ್ತಿದ್ದಾರೆ.
ಶಿವಮೊಗ್ಗದ 16 ವರ್ಷದ ವಿದ್ಯಾರ್ಥಿನಿಯೊಬ್ಬಳು ರಾಜ್ಯ ಬಾಲಕಿಯರ ಕ್ರಿಕೆಟ್ ತಂಡದಲ್ಲಿ ಆಡುವ ಅರ್ಹತೆಯನ್ನು ಪಡೆದಿದ್ದಾಳೆ. ಸತತ ಕೋಚಿಂಗ್ ಪಡೆದು ತಂಡದ ಉತ್ತಮ ಆಲ್‌ರೌಂಡರ್ ಆಟಗಾರ್ತಿಯಾಗಿ ಹೊರಹೊಮ್ಮಿರುವ ಅದಿತಿ ರಾಜೇಶ್ ಈ ವಿದ್ಯಾರ್ಥಿನಿ. ಅದಿತಿ ಬಾಲ್ಯದಿಂದಲೂ ಮಕ್ಕಳೊಂದಿಗೆ ರಸ್ತೆ ಬದಿಯಲ್ಲಿ ಕ್ರಿಕೆಟ್ ಆಡುತ್ತ  ಆಸಕ್ತಿ ಬೆಳೆಸಿಕೊಂಡಿದ್ದಳು, ಜೊತೆಗೆ ಚೆನ್ನಾಗಿ ಆಡುತ್ತಿದ್ದಳು. ಇದನ್ನು ಗಮನಿಸಿದ ಈಕೆಯ ಪಾಲಕರು ನಗರದಲ್ಲಿ ಸಹ್ಯಾದ್ರಿ ಕ್ರಿಕೆಟ್  ತರಬೇತಿ ಸೆಂಟರ್‌ಗೆ ಸೇರಿಸಿದರು. ಆಗ ಆರನೆಯ ತರಗತಿಯಲ್ಲಿ ಓದುತ್ತಿದ್ದಳು. ಅಲ್ಲಿ ಕೋಚ್ ಆಗಿರುವ ಪಿ.ವಿ. ನಾಗರಾಜ್ ಸಹ ಅದಿತಿಯಲ್ಲಿರುವ ಕೌಶಲ್ಯವನ್ನು ಗಮನಿಸಿ ಮತ್ತು ಕಲಿಕೆಯಲ್ಲಿನ ಆಸಕ್ತಿಯನ್ನು ಗುರುತಿಸಿ ಚೆನ್ನಾಗಿ ಪ್ರೋತ್ಸಾಹಿಸಿದರು. ಇದೇ ಅವಳ ಕ್ರಿಕೆಟ್ ಜೀವನಕ್ಕೆ ಕಾರಣವಾಯಿತು.
ಪ್ರತಿದಿನ ಸಂಜೆ 5:30ರಿಂದ 7:30ರವರೆಗೆ ತರಬೇತಿಗೆ ತೆರಳುತ್ತಾಳೆ. ರಜಾದಿನದಲ್ಲಿ ಬೆಳಿಗ್ಗೆಯೂ ತರಬೇತಿ ಪಡೆಯುತ್ತಾಳೆ. ಮಹಿಳಾ ಕ್ರಿಕೆಟ್‌ನಲ್ಲಿ ಉತ್ತಮ ಹೆಸರುಪಡೆಯಬೇಕೆಂಬ ಹಂಬಲ ಆಕೆಯಲ್ಲಿದೆ. ಹೇಳಿಕೊಟ್ಟ ಎಲ್ಲ  ಕೌಶಲ್ಯಗಳನ್ನು ಚಾಚೂತಪ್ಪದೆ ಕಲಿಯುತ್ತಿದ್ದಾಳೆ. ಭರವಸೆಯ ಕ್ರಿಕೆಟ್ ಪ್ರತಿಭೆಯಾಗಿ ಅದಿತಿ ಹೊರಹೊಮ್ಮುತ್ತಿದ್ದಾಳೆ  ಎನ್ನುತ್ತಾರೆ ಆಕೆಯ ಕೋಚ್ ನಾಗರಾಜ್.
  ಸದ್ಯ ರಾಜ್ಯದ 19 ವರ್ಷದೊಳಗಿನ ಬಾಲಕಿಯರ ಕ್ರಿಕೆಟ್ ತಂಡಕ್ಕೆ ಅದಿತಿ ಆಯ್ಕೆಯಾಗಿದ್ದಾರೆ. ಈ ತಂಡವು ನ. 10ರಿಂದ 20ರವರೆಗೆ ಹೈದರಾಬಾದ್‌ನಲ್ಲಿ ನಡೆಯಲಿರುವ ದಕ್ಷಿಣ ವಲಯ ಬಾಲಕಿಯರ 19ರೊಳಗಿನ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲಿದೆ.  16 ವರ್ಷದೊಳಗಿನ ಬಾಲಕಿಯರ ರಾಜ್ಯ ತಂಡದಲ್ಲಿ ಈ ಹಿಂದೆ 2 ಬಾರಿ ಆಡಿದ್ದಾಳೆ. ಅದಿತಿ ಗೋಪಾಳಗೌಡ ಬಡಾವಣೆಯ ಕೆಎಚ್‌ಬಿ ವಾಸಿ ರಾಜೇಶ್ ಮತ್ತು ಕವಿತಾ ದಂಪತಿಗಳ ಪುತ್ರಿಯಾಗಿದ್ದಾರೆ. ರಾಜೇಶ್ ಔಷಧಿ ವಿತರಕರಾಗಿದ್ದಾರೆ. ಕವಿತಾ ಪದವೀಧರ ಸಹಕಾರಿ ಸಂಘದಲ್ಲಿ ನೌಕರಿಯಲ್ಲಿದ್ದಾರೆ. ನಗರದ ಡಿವಿಎಸ್ ಹೈಸ್ಕೂಲಿನ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿನಿಯಾಗಿರುವ ಅದಿತಿ, ಓದಿನಲ್ಲೂ ಮುಂದೆ. ಆದರೆ ಕ್ರಿಕೆಟ್ ಟೂರ್ನಿಯಿಂದಾಗಿ ಸರಿಯಾಗಿ ಪಾಠಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. 
ನ. 1 ರಿಂದ 8 ರವರೆಗೆ ಈ ಬಾಲಕಿಯರ ತಂಡಕ್ಕೆ ಬೆಂಗಳೂರಿನಲ್ಲಿ ಕೆಸಿಎ ತರಬೇತಿ ನೀಡಿ ಹೈದ್ರಾಬಾದ್‌ಗೆ ಕಳುಹಿಸಿದೆ. ಈ ತರಬೇತಿ ವೇಳೆ ಅತ್ಯುತ್ತಮ ಸಾಧನೆ ಮಾಡಿರುವ ಈಕೆಯನ್ನು ತಂಡದ ಅಧಿಕಾರಿಗಳು ಕೊಂಡಾಡಿದ್ದಾರೆ. ಹಾಲಿ ನಡೆಯುತ್ತಿರುವ ಟೂರ್ನಿಯಲ್ಲೂ ಇದನ್ನು ಮುಂದುವರೆಸುವ ನಿರೀಕ್ಷೆಯನ್ನು ತಂಡ ಹೊಂದಿದೆ.
ಮಗಳ ಕ್ರಿಕೆಟ್ ಪ್ರತಿಭೆಗೆ ಎಲ್ಲ ರೀತಿಯ ಬೆಂಬಲ, ಪ್ರೋತ್ಸಾಹವನ್ನು ಪಾಲಕರು ನೀಡುತ್ತಿದ್ದಾರೆ. ರಜಾ ದಿನಗಳಲ್ಲಿ ಹೊರ ಜಿಲ್ಲೆಗೆ ತೆರಳಿ ಬಾಲಕರ ತಂಡದೊಂದಿಗೂ ಆಡಿದ್ದಾಳೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಜರುಗಿದ ಅಂತರ್‌ಜಿಲ್ಲಾ ಟೂರ್ನಿಯಲ್ಲೂ ಭಾಗವಹಿಸಿದ್ದಾಳೆ. ಕ್ರಿಕೆಟ್‌ಗೆ ದೈಹಿಕ ಸಾಮರ್ಥ್ಯ ಮತ್ತು ಮನೋಬಲದ ಅಗತ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ಜಿಮ್‌ಗೆ ಸೇರಿಸುವ ನಿರ್ಧಾರ ಮಾಡಿದ್ದಾಗಿ ರಾಜೇಶ್ ಹೇಳುತ್ತಾರೆ.
.............................

No comments:

Post a Comment