Thursday 25 January 2018


ಚಿನ್ನದ ಹುಡುಗಿ
ಎಸ್. ರಜಿನಿ


 ಮನುಷ್ಯ ಸತತ ಪ್ರಯತ್ನ ಮತ್ತು ಹೋರಾಟ ಮಾಡಿದರೆ ಮಾತ್ರ ಆತನಲ್ಲಿ ಸಾಮರ್ಥ್ಯ ಹೆಚ್ಚಳ ಮತ್ತು ಬೆಳವಣಿಗೆ ಸಾಧ್ಯ ಎನ್ನುವುದು ನೆಪೋಲಿಯನ್‌ನ ಮಾತು. ನಾವು ಏನನ್ನಾದರೂ ಸಾಧಿಸಬೇಕೆಂದರೆ ಅದಕ್ಕೆ ಮೊದಲು ಮನಸ್ಸನ್ನು ಸಜ್ಜುಗೊಳಿಸಬೇಕು. ಆಗ ದೇಹ ತನ್ನಿಂತಾನೆ ಸಾಧನೆಗೆ ಮುಂದಾಗುತ್ತದೆ, ನಮ್ಮಿಂದ ಸಾಧನೆಯೂ ಸಾಧ್ಯವಾಗುತ್ತದೆ.
ನಗರದ ವಿದ್ಯಾರ್ಥಿನಿ ಎಸ್. ರಜಿನಿ ಪವರ್ ಲಿಫ್ಟಿಂಗ್‌ನಲ್ಲಿ ಏಶಿಯನ್ ಚಾಂಪಿಯನ್‌ಶಿಪ್‌ನಲ್ಲಿ 4 ಚಿನ್ನದ ಪದಕ ಗಳಿಸಿದ್ದಾರೆ. ಜೊತೆಗೆ ಇನ್ನೂ ಹತ್ತಾರು ಟೂರ್ನಿಗಳಲ್ಲಿ ಚಿನ್ನಕ್ಕೆ ಕೊರಳೊಡ್ಡುವ ಮೂಲಕ  ಜಿಲ್ಲೆಯಲ್ಲಿ ಯಾವ ಮಹಿಳೆಯೂ ಮಾಡದ ಸಾಧನೆ ಮಾಡಿದ್ದಾರೆ. ನೋಡಲು ದೈಹಿಕವಾಗಿ ಅಷ್ಟೇನೂ ಸಬಲವಿಲ್ಲದಂತೆ ಕಂಡುಬಂದರೂ ಪವರ್ ಲಿಫ್ಟಿಂಗ್‌ನಲ್ಲಿ ಮಾತ್ರ ತನ್ನ ಶಕ್ತಿ ಏನೆನ್ನುವುದನ್ನು ತೋರಿಸಿ ಬೆಸ್ಟ್ ಲಿಫ್ಟರ್ ಆಫ್ ಏಶ್ಯಾ ಎಂಬ ಬಿರುದಿಗೆ ಭಾಜನಳಾಗಿದ್ದಾರೆ.   
ರಜಿನಿ ಶಂಕರಘಟ್ಟದವರು. ನಗರದ ಎಟಿಎನ್‌ಸಿಸಿ ಕಾಲೇಜಿನಲ್ಲಿ ಬಿಕಾಂ ಮುಗಿಸಿ, ಎಲ್‌ಎಲ್‌ಬಿ ಓದಲು ಸಿದ್ಧತೆ ನಡೆಸಿದ್ದಾರೆ. ಬಾಲ್ಯದಿಂದಲೂ ಅಥ್ಲೆಟಿಕ್ಸ್‌ನಲ್ಲಿ  ಮುಂದಿದ್ದ ಇವರಿಗೆ ಉತ್ತಮ ದೈಹಿಕ ಸಾಮರ್ಥ್ಯ ಇದ್ದುದದರಿಂದಲೋ ಏನೋ,  ಪವರ್ ಲಿಫ್ಟಿಂಗ್‌ನತ್ತ ಆಸಕ್ತಿ ಹರಿಯಿತು. ಇದರಲ್ಲೇಕೆ ಹೆಜ್ಜೆ ಗುರುತು ಮೂಡಿಸಬಾರದೆನ್ನುವ ಆಲೋಚನೆ ಮೂಡಿದ್ದರಿಂದ  ಆ ಕಡೆ ಗಮನ ಹರಿಸಿದಾಗ ಇದಕ್ಕೆ ಅನುವು ಮಾಡಿಕೊಟ್ಟಿದ್ದು ನ್ಯಾಶನಲ್ ಲಾ ಕಾಲೇಜಿನ ಜಿಮ್. ಮೂರು ವರ್ಷದಿಂದ ಅಲ್ಲಿಯೇ ತರಬೇತಿ ಪಡೆಯುತ್ತಿದ್ದಾರೆ. 
ಅಲ್ಲಿನ ದೈಹಿಕ ನಿರ್ದೇಶಕ ಕಾಂತರಾಜ್ ಅವರಲ್ಲಿ ಆರಂಭದಲ್ಲಿ ತರಬೇತಿ ಪಡೆದು, ಉನ್ನತ ತರಬೇತಿಯ ಅವಶ್ಯಕತೆ ಇದ್ದುದರಿಂದ ಕೋಚ್ ಆಗಿ ಆರ್. ಹರ್ಷ ಅವರನ್ನು ನೇಮಿಸಿಕೊಂಡು ಪ್ರತಿನಿತ್ಯ  4 ಗಂಟೆ ಸತತ ಬೆವರಿಳಿಸುವ ಮೂಲಕ ಮುಂದಿನ ಚಾಂಪಿಯನ್‌ಶಿಪ್‌ಗಳಿಗೆ ತಯಾರಾಗುತ್ತಿದ್ದಾರೆ.
 2015ರಲ್ಲಿ ಕುಂದಾಪುರದಲ್ಲಿ ನಡೆದ ರಾಜ್ಯ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಮೊದಲ ಬಾರಿ ಪ್ರವೇಶಿಸಿ ಬೆಳ್ಳಿ ಪದಕ ಪಡೆದಿದ್ದೇ ಸಾಧನೆಯ ಹಾದಿಯ ಬಾಗಿಲನ್ನು ತೆರೆಯಿತು. ಆನಂತರ ಹಿಂದಿರುಗಿ ನೋಡಲೇ ಇಲ್ಲ. ಪ್ರತಿ ಚಾಂಪಿಯನ್‌ಶಿಪ್‌ನಲ್ಲೂ ಒಂದಲ್ಲ, ಒಂದು ಪದಕ ಇವರ ಪಾಲಾಗುತ್ತಲೇ ಬಂದಿತು. 2016 ಮತ್ತು 17ರಲ್ಲಿ ರಲ್ಲಿ ಸ್ಟ್ರಾಂಗ್ ವುಮನ್ ಅಫ್ ಕರ್ನಾಟಕ ಎಂಬ ಖ್ಯಾತಿ ಪಡೆದರು. ಕಳೆದ ವಾರ ಕೇರಳದಲ್ಲಿ ಜರುಗಿದ ಏಶ್ಯನ್ ಪವರ್ ಲಿಫ್ಟಿಂಗ್‌ನಲ್ಲಿ 4 ಚಿನ್ನದ ಪದಕದ ಜೊತೆಗ ಬೆಸ್ಟ್ ಲಿಪ್ಟರ್ ಎಂಬ ಬಿರುದನ್ನು ಮುಡಿದಿದ್ದಾರೆ.  ಜನವರಿಯಲ್ಲಿ ಕೊಯಮತ್ತೂರಿನಲ್ಲಿ ನ್ಯಾಶನಲ್ ಚಾಂಪಿಯನ್‌ಶಿಪ್ ನಡೆಯಲಿದ್ದು ಇದರಲ್ಲಿ  ಪಾಲ್ಗೊಳ್ಳುವ ಸಂಬಂಧ ತರಬೇತಿ ಪಡೆಯುತ್ತಿದ್ದಾರೆ.
 ಈವರೆಗೆ ಮಂಗಳೂರು, ಜೆಮ್‌ಶೆಡ್‌ಪುರ, ಕೊಯಮತ್ತೂರು, ಪಂಜಾಬ್, ಜಮ್ಮು- ಕಾಶ್ಮೀರ, ಕೇರಳ ಸೇರಿದಂತೆ  ವಿವಿಧೆಡೆ 15 ಟೂರ್ನಿಗಳಲ್ಲಿ ಪಾಲ್ಗೊಂಡು 9 ಚಿನ್ನ ಮತ್ತು 5 ಬೆಳ್ಳಿ ಹಾಗೂ 2 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಜೊತೆಗೆ ಬಿರುದುಗಳೂ ಮುಡಿಗೇರಿವೆ.
ನಿಯಮಿತ ಆಹಾರ, ಉತ್ತಮ ಆರೋಗ್ಯ, ಸ್ಥಿರ ಮನಸ್ಸು ಕಾಪಾಡಿಕೊಳ್ಳುವುದರ ಮೂಲಕ ಇಲ್ಲಿಯವರೆಗೆ ಸಾಧನೆಯ  ಮೆಟ್ಟಿಲನ್ನೇರುತ್ತಿರುವ ರಂಜಿನಿ, ದಿನನಿತ್ಯ ಕಠಿಣ ತರಬೇತಿಯಲ್ಲಿದ್ದಾರೆ. ಇಷ್ಟೆಲ್ಲಾ ಸಾಧನೆಗೆ ತನ್ನ ಪಾಲಕರಾದ ಶಿವಾನಂದಮೂರ್ತಿ- ಸುಧಾ ಹಾಗೂ ಸಹೋದರಿಯರು ಮತ್ತು ಕೋಚ್ ಸಹಕಾರವನ್ನು ಸ್ಮರಿಸುತ್ತಾರೆ.
 ನಿಶ್ಚಿತ ಗುರಿ, ಜೊತೆಗೆ ಸಾಧಿಸುವ ಹಠ, ಅಚಲವಾದ ನಂಬಿಕೆಯೊಂದಿದ್ದರೆ ಸಾಧನೆ ಸಾಧ್ಯ. ವಿವಿ ಮಟ್ಟದಿಂದ ಹಿಡಿದು ಏಶ್ಯಾ ಚಾಂಪಿಯನ್‌ಶಿಪ್‌ವರೆಗೆ ಸ್ಪರ್ಧಿಸಿದ್ದರಿಂದ ಕಠಿಣ ಸ್ಪರ್ಧೆಯ ಅರಿವಾಗಿದೆ. ಅತಿ ಹೆಚ್ಚು ಖರ್ಚು ಪ್ರತಿ ಪ್ರವಾಸದಲ್ಲಿ ಬರುತ್ತಿದ್ದರೂ ನಿಭಾಯಿಸಿ ಸಾಧನೆ ಮಾಡುತ್ತಿದ್ದೇನೆ ಎನ್ನುತ್ತ್ತಾರೆ ರಜಿನಿ.
30.12.17

No comments:

Post a Comment