Saturday 6 January 2018

ಜನಸೇವೆ ಮೂಲಕ ಎಲ್ಲರೊಳಗೊಂದಾಗುವ  
ರಂಗಮ್ಮ

ಮನುಷ್ಯನ ವೃತ್ತಿ-ಪ್ರವೃತ್ತಿ ಒಂದೇ ಇರಬೇಕೆಂದೇನಿಲ್ಲ. ವೃತ್ತಿ ಒಂದಾದರೆ, ಪ್ರವೃತ್ತಿಯೇ ಬೇರೆಯಾಗಿರುವುದನ್ನು ಸಾಕಷ್ಟು ಜನರಲ್ಲಿ ಕಾಣಬಹುದು. ಸಣ್ಣಪುಟ್ಟ ವೃತ್ತಿ ಮಾಡಿ ಜೀವಿಸುವವರೂ ಇತರರಿಗೆ ಅಥವಾ ಸಮಾಜಮುಖಿ ಕೆಲಸ ಮಾಡುತ್ತಾರೆ. ಇಲ್ಲಿ ವೃತ್ತಿಗಿಂತ ನೆರವಾಗುವ ಮನೋಭಾವ, ಹೃದಯವಂತಿಕೆ  ಮುಖ್ಯವಾಗಿರುತ್ತದೆ. ಅದರಲ್ಲೂ ಕೆಲವರು ಬಡವರ ಪರ ಧ್ವನಿಯಾಗಿ  ನಿಲ್ಲುತ್ತ ತಮ್ಮಷ್ಟಕ್ಕೆ ತಮ್ಮ ವೃತ್ತಿಯಲ್ಲಿ ಎಲೆಮರೆಯ ಕಾಯಿಯಂತಿರುತ್ತಾರೆ.
ರಂಗಮ್ಮ ಸುಮಾರು 65ರ ಹರಯದವರು. ವೃತ್ತಿಯಿಂದ ಬಳೆ ವ್ಯಾಪಾರಿ. ನಗರದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸುಮಾರು 15 ವರ್ಷಗಳಿಂದ ಬಳೆ, ಪುಸ್ತಕ, ಪೂಜಾ ಸಾಮಗ್ರಿಗಳ ಅಂಗಡಿಯಲ್ಲಿ ದೇವರ ನಾಮ, ಜನೆ, ವಿವಿಧ ಪೂಜಾ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದಾರೆ. ದೇವಸ್ಥಾನಕ್ಕೆ ಖಾಯಮ್ಮಾಗಿ ಬರುವವರಿಗೆಲ್ಲ ಇವರು ಪರಿಚಿತರು. ಹಾಗಾಗಿಯೇ ಅವರೆಲ್ಲ ಇವರನ್ನು ಮಾತನಾಡಿಸಿಯೇ ದೇವಸ್ಥಾನಕ್ಕೆ ತೆರಳುತ್ತಾರೆ. ಅಷ್ಟೊಂದು ಚಿರಪರಿಚಿತರಾದ ಇವರು, ಇಲ್ಲಿಯವರೆಗೆ ದೇವಸ್ಥಾನದ ಕಾರ್ಯಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸುತ್ತ ಬಂದಿದ್ದಾರೆ.  ಇವರ ಈ ಸೇವಾಮನೋಭಾವ ಗಮನಿಸಿಯೇ ಹಲವೆಡೆ ಇವರನ್ನು ಸನ್ಮಾನಿಸಲಾಗಿದೆ. ನಗರದ ಬಹುತೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ  ತಪ್ಪದೇ ಪಾಲ್ಗೊಳ್ಳುತ್ತಾರೆ. ಸನ್ಮಾನ, ಗೌರವ, ಪ್ರಚಾರಕ್ಕೆಲ್ಲ ಅವರು ತಲೆಕೆಡಿಸಿಕೊಳ್ಳದೆ ತಾವಾಯಿತು, ತಮ್ಮ ವೃತ್ತಿಯಾಯಿತು, ಪ್ರವೃತ್ತಿಯಾಯಿತು ಎಂದುಕೊಂಡು ಬದುಕುತ್ತಿದ್ದಾರೆ.
ಇವರಿಗೆ ಬಡವರ ಪರ ನಿಂತು  ಕೆಲಸ ಮಾಡುವುದು ಹವ್ಯಾಸ. ನಡೆಸುವ ಸಣ್ಣ ವ್ಯಾಪಾರದಲ್ಲಿ ಜೀವನವನ್ನೇ ನಡೆಸುವುದು ದುರ್ಭರವಾಗಿರುವಾಗ ತಮ್ಮ ಅಮೂಲ್ಯ ವೇಳೆಯನ್ನೂ ಲೆಕ್ಕಿಸದೆ ಅವರ ಬಳಿ ತೆರಳಿ ಅವರಿಗೆ ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಡುತ್ತಾರೆ. ಮೊದಲಿನಿಂದಲೂ ಇದು ನಡೆದುಬಂದಿರುವುದರಿಂದ ಅಧಿಕಾರಿಗಳೂ ಸಹ ತಕ್ಷಣವೇ ಇವರ ಕೆಲಸ ಮಾಡಿಕೊಡುತ್ತಾರೆ.
ರಂಗಮ್ಮ  ಇಲ್ಲಿನ ಶೇಷಾದ್ರ್ರಿಪುರಂನ  ಎರಡನೆಯ ರಸ್ತೆಯ ಶಿವಾಜಿರಾವ್ ಕಾಂಪೌಂಡಿನ ವಾಸಿ. ಇವರ ಜನಸೇವೆ ಗಮನಿಸಿಯೇ ಈ ಹಿಂದೆ ಅವರನ್ನು ನಗರದ ಜೈಲು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಈಗ ತಮ್ಮ ಸೇವಾಮನೋಭಾವದ ಕಾರಣದಿಂದಾಗಿಯೇ ಪಾಲಿಕೆಯ ನಾಮಕರಣ ಸದಸ್ಯರಾಗಿದ್ದಾರೆ. ಇಷ್ಟಾದರೂ ಯಾವ ಗತ್ತು, ಗೈರತ್ತು ತೋರದೆ, ಜನರಲ್ಲಿ ತಾವು ಒಂದಾಗಿ ಬದುಕುತ್ತಿದ್ದಾರೆ. ಇಂದಿಗೂ ನಡೆದುಕೊಂಡು ಅಥವಾ ಬಸ್‌ನಲ್ಲೇ ಸಂಚರಿಸುತ್ತಾರೆ. ಸರಳ, ಸಜ್ಜನಿಕೆಯ ಮತ್ತು ಪ್ರಾಮಾಣಿಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿರುವ ಇವರು, ತೀರ ಬಡ ಕುಟುಂಬದವರು.
  ಪತಿಯನ್ನು ಅಂಗಡಿಯಲ್ಲಿ ಬಿಟ್ಟು ತಾವೇ ಬಡವರ, ಅಂಗವಿಕರ ದೀನದಲಿತರ ಸೇವೆಗೆ ಮುಂದಾಗುತ್ತಾರೆ. ಪಾಲಿಕೆಯ ನಾಮಕರಣ ಸದಸ್ಯರಾಗಿ ನೇಮಕವಾದ ನಂತರ ಶೇಷಾದ್ರಿಪುರಂನಲ್ಲಿ ರಸ್ತೆ, ಚರಂಡಿ ಮೊದಲಾದ ಕೆಲಸಗಳನ್ನು ಮಾಡಿಸಿದ್ದಾರೆ. ಬಡವರಿಗೆ ಕೆಲಸ ಮಾಡಿಸಿಕೊಡದೆ ಇನ್ಯಾರಿಗೆ ಕೆಲಸ ಮಾಡಿಸಿಕೊಡಬೇಕು. ತಮ್ಮ ಬಳಿ ದಿನಬೆಳಗಾದರೆ ರೇಶನ್ ಕಾರ್ಡು, ಆಧಾರ್ ಕಾರ್ಡು, ವೃದ್ಧಾಪ್ಯ ವೇತನ. ಪೆನ್‌ಶನ್ ಮೊದಲಾದ ಸಮಸ್ಯೆ ಹೇಳಿಕೊಂಡು ಮನೆಗೆ ಬರುತ್ತಾರೆ. ಅವರನ್ನು ಕರೆದುಕೊಂಡು ಸಂಬಂಧಿತ ಕಚೇರಿಗೆ ಹೋಗಿ ಕೆಲಸ ಮಾಡಿಸಿಕೊಡುತ್ತೇನೆ. ಯಾರಿಂದಲೂ ಒಂದು ರೂಪಾಯಿಯನ್ನೂ ಪಡೆಯುವುದಿಲ್ಲ. ಕೆಲಸದಲ್ಲಿ ತೃಪ್ತಿ ಸಿಕ್ಕಿದೆ ಎನ್ನುತ್ತಾರೆ ರಂಗಮ್ಮ. ಯಾವುದೇ ರಾಜಕೀಯದ ಮಾಡದೆ ಜನಸೇವೆಯೇ ಗುರಿ ಎನ್ನುವ ಮೂಲಕ ಅದಕ್ಕೇ ಬದ್ಧರಾಗಿದ್ದಾರೆ.
 ಶಿಥಿಲಾವಸ್ಥೆಯಲ್ಲಿದ್ದ ಶೇಷಾದ್ರಿಪುರಂ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಾಯಕಲ್ಪ ಮಾಡಿಸಿದ್ದಾರೆ. ಇವರ ಸೇವಾಕೈಂಕರ್ಯಗಳನ್ನು ಗಮನಿಸಿ ಶೇಷಾದ್ರ್ರಿಪುರಂನಲ್ಲಿ ಸನ್ಮಾನಿಸಲಾಗಿದೆ. ಇತ್ತೀಚೆಗೆ ಜನಧ್ವನಿ ಸೇವಾಸಂಸ್ಥೆಯವರು ಸಹ ಗೌರವಿಸಿದ್ದಾರೆ. ಗೋಸಾಯಿ ಮಹಿಳಾ ಸಮಾಜದ ಜಿಲ್ಲಾಧ್ಯಕ್ಷೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂದಿಗೂ ಸಾರ್ವಜನಿಕರ ಕೆಲಸಕ್ಕಾಗಿ ಸರ್ಕಾರಿ ಕಚೇರಿ, ಪಾಲಿಕೆಯನ್ನು ಅಲೆಯುವುದು ಇವರ ದಿನನಿತ್ಯದ ಕೆಲಸವಾಗಿದೆ. ಅಧಿಕಾರಿಗಳೂ ಸಹ ಗೌರವ ಕೊಟ್ಟು ಕೆಲಸ ಮಾಡಿಕೊಡುತ್ತಿದ್ದಾರೆ. ಬಡವರಿಗೆ ಕೆಲಸ
ಮಾಡಿಸಿಕೊಡುವ ಮೂಲಕ ನೆಮ್ಮದಿ ಕಾಣುತ್ತಿದ್ದೇನೆ. ಪತಿ ಹನುಮಂತಪ್ಪ ಸಹ ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ.
published on  16.4.16

No comments:

Post a Comment