Thursday 25 January 2018

ಅಕಾಡೆಮಿ ಗೌರವಕ್ಕೆ ಭಾಜನ
 ಮಾಹಿಗಯ್ಯ



ಜಿಲ್ಲೆಯಲ್ಲಿ ರಂಗಭೂಮಿ ಕಂಪನ್ನು ಹರಡಿ, ಬೆಳೆಸಿದವರು ಸಾಕಷ್ಟು ಕಲಾವಿದರಿದ್ದಾರೆ. ವೃತ್ತಿ ರಂಗಭೂಮಿಯನ್ನು ಇವರು ಗಟ್ಟಿಗೊಳಿಸಿದ್ದಾರೆ. ಜಾನಪದ ಮತ್ತು ಆಧುನಿಕ ರಂಗಭೂಮಿಯೂ ಬೆಳೆಯಲು ಇವರು ಕಾರಣರಾಗಿದ್ದಾರೆ. ಅಂತಹವರಲ್ಲಿ ಬಹುತೇಕರ ಹೆಸರು ಇಂದಿನ ತಲೆಮಾರಿನವರಿಗೆ ಗೊತ್ತಿಲ್ಲ. ಆದರೆ ಅವರ ಸಾಧನೆ ಅವರನ್ನು ಈಗ ಬೆಳಕಿಗೆ ತರುತ್ತಿದೆ. ಪ್ರಶಸಿ, ಸನ್ಮಾನದೊಂದಿಗೆ ಅವರನ್ನು ಗೌರವಿಸುತ್ತಿದೆ. ಅಂತಹವರಲ್ಲೊಬ್ಬರು ಭದ್ರಾವತಿಯ ಮಾಯಿಗಯ್ಯ.
 ಕೈಗಾರಿಕೆಗಳೊಂದಿಗೆ ಬದುಕು ಕಟ್ಟಿಕೊಂಡು ರಂಗಸೇವೆಗೆ ಇಳಿದ ನಿವೃತ್ತ ಕಾರ್ಮಿಕ, ಹಿರಿಯ ರಂಗ ಕಲಾವಿದ ಭದ್ರಾವತಿಯ ಮಾಯಿಗಯ್ಯ ಅವರಿಗೆ ಈ ಬಾರಿಯ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಮಾಯಿಗಯ್ಯ ಅವರ ರಂಗಸೇವೆಯನ್ನು ಗುರುತಿಸಿ ಕೆ. ರಾಮಚಂದ್ರಯ್ಯ ದತ್ತಿನಿಧಿ ಪ್ರಶಸ್ತಿಯನ್ನು ಅಕಾಡೆಮಿ ನೀಡಿ ಗೌರವಿಸಿದೆ. ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ಸೇವೆಗೆ ಸೇರ್ಪಡೆಗೊಂಡ ಮಾಯಿಗ, 1973ರಿಂದ ರಂಗ ಚಟುವಟಿಕೆಗಳನ್ನು ಆರಂಭಿಸಿದವರು. ಆರಂಭದಲ್ಲಿ ಪಾತ್ರಧಾರಿಯಾಗಿ ಸುಮಾರು 100ಕ್ಕೂ ಅಧಿಕ ಪಾತ್ರಗಳಲ್ಲಿ ಅಭಿನಯಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದರು. ಸುಮಾರು 7 ವರ್ಷಗಳಿಂದ ನಿರ್ದೇಶಕರಾಗಿ ರಂಗ ಸೇವೆ ಸಲ್ಲಿಸುತ್ತಿದ್ದಾರೆ.
  ಭದ್ರಾವತಿಯಲ್ಲಿಯೇ ಮಾಯಿಗಯ್ಯ ಹುಟ್ಟಿಬೆಳೆದದ್ದು. ತಂದೆ ಕೆಂಪಯ್ಯ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದರು. ತಾಯಿ ನಾಚೀರಮ್ಮ. ತಂದೆಯಂತೆ ಇವರು ಸಹ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಿಗೆ ಸೇವೆಗೆ ಸೇರ್ಪಡೆಗೊಂಡು ನಿವೃತ್ತಿ ಹೊಂದಿದ್ದಾರೆ.
1973ರಲ್ಲಿ ರಂಗ ಚಟುವಟಿಕೆ ಆರಂಭಿಸಿದ ಮಾಯಿಗಯ್ಯ ಕಾರ್ಖಾನೆಯ ಸಹಪಾಠಿಗಳು ಕಟ್ಟಿಕೊಂಡ ನವೋದಯ ಕಲಾ ಸಂಘ ಹಾಗೂ ಮಿತ್ರ ಕಲಾ ಸಂಘ ಇವುಗಳಲ್ಲಿ ರಂಗ ತರಬೇತಿ ಪಡೆದರು. ಕಲಾಶ್ರೀ ದಿವಂಗತ ಶಾಮಮೂರ್ತಿ ಹಾಗೂ ಲಕ್ಷ್ಮೀಪತಿ ಅವರ ಮಾರ್ಗದರ್ಶನದಲ್ಲಿ  ‘ದುರ್ಗದ ದುರಂತ’ದಲ್ಲಿ ಭರಮಣ್ಣ ನಾಯಕ, ‘ತ್ಯಾಗವೀರ ಎಚ್ಚಮನಾಯಕ’ದಲ್ಲಿ ಸಿಂಗ ಭೂಪತಿ, ‘ಕರಿಭಂಟ’ದಲ್ಲಿ ಕೊತ್ವಾಲ, ‘ಬೆತ್ತಲೆ ಸೇವೆ’ ಮಲ್ಲಪ್ಪ, ‘ರಕ್ತರಾತ್ರಿ’ಯಲ್ಲಿ ಭೀಮಸೇನ, ‘ಸೂರ್ಯ ಶಿಕಾರಿ’ಯಲ್ಲಿ ಸೂರ್ಯವರ್ಮ, ‘ಒಂದು ದಂಗೆ ಪ್ರಕರಣ’ದಲ್ಲಿ ಹಣುಮ, ‘ಕೇಳು ಜನಮೇ ಜಯ’ದಲ್ಲಿ ಸಾಮಾನ್ಯಪ್ಪ, ‘ಸಾಯೋ ಆಟ’ದಲ್ಲಿ ಮಂತ್ರಿ, ‘ಬೆನಕನಕೆರೆ’ಯಲ್ಲಿ ಸಖ-2, ‘ಸೆಸ್ಟಿ’ಯಲ್ಲಿ ಒಬ್ಬ, ‘ಸೀತಾಪಹರಣ’ದಲ್ಲಿ ಹನುಮಂತ ಮತ್ತು ‘ಅಂಗುಲಿ ಮಾಲ’ದಲ್ಲಿ ಶಿಷ್ಯ, ‘ಯಮಲೋಕಕ್ಕೆ ಸ್ವಾಗತ’ದಲ್ಲಿ ಕಿರಾತಕ ಪಾತ್ರಧಾರಿಯಾಗಿ ಹೀಗೆ ಹಲವು ಪೌರಾಣಿಕ ಹಾಗೂ ಜಾನಪದ ನಾಟಕಗಳಲ್ಲಿ ಅಭಿನಯಿಸಿ ಅಂದಿನ ಕಾಲದಲ್ಲಿ ಜನಮೆಚ್ಚಿಗೆಗೆ ಪಾತ್ರರಾಗಿದ್ದರು.
ಮಾಯಿಗಯ್ಯ ಪಾತ್ರಧಾರಿಯಾಗಿ ಮಾತ್ರವಲ್ಲದೆ ನಿರ್ದೇಶಕರಾಗಿ, ವಸ್ತ್ರ ವಿನ್ಯಾಸಕರಾಗಿ, ರಂಗಮಂಟಪ, ರಂಗಪರಿಕರಗಳ ರೂಪಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ಹಲವೆಡೆ ಮಾತ್ರವಲ್ಲದೆ ದೆಹಲಿ, ಮುಂಬೈ ಸೇರಿದಂತೆ ಅನೇಕ ಭಾಗದಲ್ಲಿ ನಾಟಕ ಪ್ರದರ್ಶನ ನೀಡಿರುವುದು ಇವರ ಹೆಗ್ಗಳಿಕೆಯಾಗಿದೆ. ಸುಮಾರು 20ಕ್ಕೂ ಅಧಿಕ ನಾಟಕಗಳನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದಾರೆ.
ನವೋದಯ ಕಲಾ ಸಂಘ, ಛಲವಾದಿಗಳ ಸಮಾಜ, ಕನ್ನಡ ಸಾಹಿತ್ಯ ಪರಿಷತ್  ಸೇರಿದಂತೆ ಹಲವು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ ರಂಗಸೇವೆಯನ್ನು ಗುರುತಿಸಿ ತಾಲೂಕು ಆಡಳಿತ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಪ್ರಶಸ್ತಿ-ಸನ್ಮಾನಗಳನ್ನು ನೀಡಿ ಗೌರವಿಸಿವೆ.
ಅಂದು ಯಾವುದೇ ಆರ್ಥಿಕ ನೆರವು ಇಲ್ಲದಿದ್ದರೂ ರಂಗ ಕಲೆಯನ್ನು ಪ್ರೀತಿಸುವವರು, ವೀಕ್ಷಿಸುವವರು, ಪ್ರೋತ್ಸಾಹಿಸುವವರು ಹೆಚ್ಚಾಗಿದ್ದರು. ಆದರೆ ಇಂದು ಯಾರೂ ಇಲ್ಲ. ಅಂದಿನ ಬಹಳಷ್ಟು ರಂಗಕಲಾವಿದರು ಇಂದು ಕಣ್ಮರೆಯಾಗಿದ್ದಾರೆ. ಪ್ರಸ್ತುತ ರಂಗಕಲೆಗೆ ಬರಲು ಯಾರೂ ಇಚ್ಛಿಸುವುದಿಲ್ಲ. ಆದರೂ ಸಹ ಹೇಗಾದರೂ ಮಾಡಿ ರಂಗಕಲೆಯನ್ನು ನಗರದಲ್ಲಿ ಜೀವಂತವಾಗಿ ಉಳಿಸಬೇಕೆಂಬುದು ತನ್ನ ಬಯಕೆ ಎನ್ನುತ್ತಾರೆ ಮಾಯಿಗಯ್ಯ.
23,12,17
.......................................

No comments:

Post a Comment