Saturday 13 January 2018

ಮನುಷ್ಯರನ್ನು ಪ್ರೀತಿಸಿದ ಗುಡ್‌ಲಕ್
 ಈಶ್ವರಯ್ಯ 


ಅಶಕ್ತರ, ಅನಾಥರ ಸೇವೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡು ಜೀವ ಸವೆಸಿದವರು ತೀರಾ ವಿರಳ. ಅದರಲ್ಲೂ ಅವರೊಟ್ಟಿಗೇ ಇದ್ದು, ತಮ್ಮ ದುಡಿಮೆಯನ್ನೆಲ್ಲ ಅವರ ಯೋಗಕ್ಷೇಮಕ್ಕೇ ಖರ್ಚು ಮಾಡಿದವರು ಇನ್ನೂ ವಿರಳ. ಮೊನ್ನೆ ನಿಧನರಾದ ಶಿವಮೊಗ್ಗದ ಗುಡ್‌ಲಕ್ ಆರೈಕೆ ಕೇಂದ್ರದ ಸಂಸ್ಥಾಪಕ ಹಾಗೂ ಮುಖ್ಯಸ್ಥ ಕೆ.ಈಶ್ವರಯ್ಯ ಈ ಸಾಲಿಗೆ ಸೇರುತ್ತಾರೆ.
ಗುಡ್‌ಲಕ್ ಆರೈಕೆ ಕೇಂದ್ರವೆಂದರೆ ಈಶ್ವರಯ್ಯ, ಈಶ್ವರಯ್ಯ ಎಂದರೆ ಗುಡ್‌ಲಕ್ ಆರೈಕೆ ಕೇಂದ್ರ ಎಂಬ ಮಾತು ಶಿವಮೊಗ್ಗದಲ್ಲಿ ಪ್ರಚಲಿತದಲ್ಲಿದೆ. ಹತ್ತು ವರ್ಷಗಳ ಹಿಂದೆ ಸ್ಥಾಪಿಸಿದ ಈ ಕೇಂದ್ರ ನೂರಾರು ಅನಾಥರಿಗೆ, ನಿರ್ಗತಿಕರಿಗೆ ಆಶ್ರಯತಾಣವಾಗಿದೆ. ಅವರ ಯೋಗಕ್ಷೇಮವನ್ನು ಇಲ್ಲಿ ಮನೆಯಂತೆಯೇ ನೋಡಿಕೊಳ್ಳಲಾಗುತ್ತಿದೆ. ಇದಕ್ಕೆ ಈಶ್ವರಯ್ಯ ಅವರ ಮಾನವ ಪ್ರೀತಿ ಅದರಲ್ಲೂ ಇಂತಹ ಜನರ ಬಗ್ಗೆ ಇದ್ದ ಅಪಾರ ಕಾಳಜಿ ಮುಖ್ಯ ಕಾರಣ. ಈಶ್ವರಯ್ಯ ಮೂಲತಃ ತುಮಕೂರಿನವರು. ಸರಕಾರಿ ಸೇವೆಯಲ್ಲಿದ್ದವರು. ಆದರೆ ಭ್ರಷ್ಟ ವ್ಯವಸ್ಥೆಯಿಂದ ರೋಸಿ ಹೋಗಿದ್ದ ಅವರು, ಯಾವುದೋ ಕಾರಣಕ್ಕೆ ಮನನೊಂದು ರಾಜಿನಾಮೆ ನೀಡಿ ಶಿವಮೊಗ್ಗದಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಆಗ ಅವರಿಗೆ ಅಂಗವಿಕಲ, ಅನಾಥರ ಸೇವೆಯನ್ನೇಕೆ ಮಾಡಬಾರದು ಎನ್ನುವ ವಿಚಾರ ಹೊಳೆಯಿತು. ಇದಕ್ಕೆ ಶಿವಮೊಗ್ಗದ ಕೆಲವು ಸಾಮಾಜಿಕ ಕಳಕಳಿಯ ವ್ಯಕ್ತಿಗಳೂ ಸಹ ಕೈ ಜೋಡಿಸಿದ್ದರ ಫಲವಾಗಿ ಮೈದಳೆದಿದ್ದೇ ಗುಡ್‌ಲಕ್ ಆರೈಕೆ ಕೇಂದ್ರ.
ಮಹತ್ವದ ಕಾರ್ಯಗಳು, ಸಾಧನೆಗಳು ಪುಟ್ಟ ಹೆಜ್ಜೆಯಿಂದ ಆರಂಭವಾಗುತ್ತವೆ ಎನ್ನುವಂತೆ ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾಗಿ ಈಗ ಬೃಹತ್ತಾಗಿ ಬೆಳೆದು ಎಲ್ಲೆಡೆ ಖ್ಯಾತವಾಗಿದೆ. ಇತ್ತೀಚೆಗೆ ಇದರ ಜೊತೆಗೆ ಡೇ ಕೇರ್ ಸೆಂಟರ್‌ನ್ನು ಸ್ಥಾಪಿಸಿದ್ದಾರೆ. ಮನಸಿಕ ಅಸ್ವಸ್ಥರ, ಅಂಗವಿಕಲರ, ಪಾರ್ಶ್ವವಾಯುಪೀಡಿತರ, ಅತಿ ಹಿರಿಯ ಅಶಕ್ತರ ಹಾಗೂ ಅನಾಥರ ನೆಲೆಯಾದ ಇಲ್ಲಿಯೇ ಈಶ್ವರಯ್ಯ ತಾವೂ ಸಹ ವಾಸಿಸುತ್ತ ಪ್ರೀತಿ- ವಿಶ್ವಾಸದಿಂದ, ಆತ್ಮಸ್ಥೈರ್ಯ ತುಂಬುತ್ತ್ತ, ಯಾರಿಗೂ ಹೊರೆಯಾಗದಂತೆ ಅವರ ಸೇವೆ ಮಾಡುತ್ತಾ ಕಾಲನೂಕಿದ್ದರು.  ಇಲ್ಲಿನ ವಾಸಿಗಳ ಸೇವೆಯೇ ದೇವರ ಸೇವೆ ಎಂದು ತಿಳಿದಿದ್ದರು. ಇದಕ್ಕಾಗಿ ತಮ್ಮ ಕುಟುಂಬವನ್ನೂ ಬಿಟ್ಟು ಬಂದಿದ್ದರು. ಆದರೆ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತ್ತಾಗಿ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಮರಣಾನಂತರ ತಮ್ಮ ದೇಹವನ್ನು ಶಿವಮೊಗ್ಗ ಮೆಡಿಕಲ್ ಕಾಲೇಜಿಗೆ ದಾನ ಮಾಡುವಂತೆ ಕೋರಿದ್ದರಿಂದ ಅದೇ ಪ್ರಕಾರ ದಾನ ಮಾಡಲಾಗಿದೆ.
ಈಶ್ವರಯ್ಯ ಅವರ ಈ ಸಂಸ್ಥೆಯ ಸ್ಥಾಪನೆಗೆ ಮೂಲ ಪ್ರೇರಣೆ ಅವರ ಮಗಳು ದಿವಂಗತ ಸರಳಾ. ಹೆಸರಿಗೆ ತಕ್ಕಂತೆ ಬದುಕಿದ ಸರಳಾ, ತನ್ನ ಜೀವನದುದ್ದಕ್ಕೂ ಅಬಲರು, ವೃದ್ಧರು, ಪ್ರಾಣಿ-ಪಕ್ಷಿಗಳ ಬಗ್ಗೆ ಕರುಳು ಮಿಡಿಯುತ್ತಾ ಇಂತಹ ಸೇವೆ ಮಾಡುತ್ತಿದ್ದರು. 28ನೆಯ ವಯಸ್ಸಿನಲ್ಲಿಯೇ ಅವರು ನಿಧನ ಹೊಂದಿದರು. ಅವರ ಕನಸನ್ನು ನೆರವೇರಿಸಲು ಈಶ್ವರಯ್ಯ ಗುಡ್‌ಲಕ್ ಮೂಲಕ ಇನ್ನಷ್ಟು ಮುಂದಾಗಿದ್ದರು.
ಶಿವಮೊಗ್ಗದ ಆಲ್ಕೊಳದಲ್ಲಿ ಗುಡ್‌ಲಕ್ ತಲೆಎತ್ತಿ ನಿಂತಿದೆ. ಇಲ್ಲಿ ವಿಶಾಲವಾದ ಕೊಠಡಿಗಳು, ಸಕಲ ವ್ಯವಸ್ಥೆಗಳಿವೆ. ಪ್ರಾರ್ಥನಾ ಮಂದಿರ, ಆಡಳಿತ ಕಚೇರಿ, ಅಡುಗೆ ಮನೆ, ಊಟದ ಹಾಲ್ ಸಹಿತ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ.
ಈಶ್ವರಯ್ಯ ಜೊತೆ ಹೆಗಲುಕೊಟ್ಟಿರುವವರೆಲ್ಲ ಈ ಸಂಸ್ಥೆಯನ್ನು ಅಷ್ಟೇ ಕಾಳಜಿ ಮತ್ತು ಪ್ರಾಮಾಣಿಕತೆಯಿಂದ ನಡೆಸಿಕೊಂಡು ಬರುತ್ತಿರುವುದರಿಂದ ಇಂದಿಗೂ ಗುಡ್‌ಲಕ್ ತನ್ನದೇ ಅದ ವಿಶ್ವಸನೀಯ ಸೇವೆಗೆ ಹೆಸರಾಗಿದೆ. ಈಶ್ವರಯ್ಯ ಈ ಕೇಂದ್ರಕ್ಕೆ ಯಾರಿಂದಲೂ ಹಣ ಬೇಡದೆ, ಸರಕಾರದಿದ ಮುಂದೆಯೂ ಕೈ ಚಾಚದೆ, ದಾನಿಗಳ ನೆರವಿನಿಂದ ನಡೆಸುತ್ತಿದ್ದರು. ಯಾವ ಪ್ರಶಸ್ತಿ, ಗೌರವ, ಸನ್ಮಾನವನ್ನೂ ಅವರು ಬಯಸಲಿಲ್ಲ. ಇಂತಹ ನಿಸ್ವಾರ್ಥ ಜೀವಿ ಈಗ ಹೆಸರನ್ನು ಮಾತ್ರ ಉಳಿಸಿ ಹೋಗಿದ್ದಾರೆ. ಅವರ ಸಾಮಾಜಿಕ ಕಳಕಳಿ ಮತ್ತು ಮನುಷ್ಯ ಸಹಜ ಪ್ರೀತಿಗೆ ಗುಡ್‌ಲಕ್ ಉದಾಹರಣೆಯಾಗಿದೆ. ನಿಜವಾದ ಅನಾಥರ ಸೇವಕನಿಗೆ ಜನಪ್ರೀತಿಗಿಂತ ಹೆಚ್ಚಿನ ಗೌರವ ಇನ್ನೇನು ಬೇಕು?
ಈಶ್ವರಯ್ಯ ಮಾನವ ಸೇವೆ ಮೂಲಕವೇ ತಮ್ಮ ಹೆಸರು ಅಚ್ಚಳಿಯದಂತೆ ಮಾಡಿ ಹೋಗಿದ್ದಾರೆ.     
21.1.17
......................

No comments:

Post a Comment