Tuesday 16 January 2018

ರಾಜಕೀಯವೇ ಪಾಠಶಾಲೆ
ರೂಪಾ ಲಕ್ಷ್ಮಣ



ತೊಟ್ಟಿಲು ತೂಗುವ ಕೈ ದೇಶವನ್ನಾಳಿತು ಎಂಬ ಗಾದೆ ಮಾತಿದೆ.  ಮಹಿಳೆಯರು ಇಂದು ಇದನ್ನು ಸಾಧಿಸಿ ತೋರಿಸುತ್ತಿದ್ದಾರೆ. ಜೊತೆಗೆ ಎಲ್ಲ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತ, ಪುರುಷನಷ್ಟೇ ಸಮಾನಳಾಗಿ ಕೆಲಸ ಮಾಡುತ್ತಿದ್ದಾಳೆ. ಇನ್ನೊಂದೆಡೆ, ಮೀಸಲಾತಿಯೂ ಸಹ ಮಹಿಳೆ ಅಧಿಕಾರಕ್ಕೇರುವಂತೆ ಮಾಡಿದೆ. ಮನೆಯಲ್ಲೇ ಇರಬೇಕಾಗಿದ್ದ ಮಹಿಳೆ ಜನಪ್ರತಿನಿಧಿಯಾಗಿ ವಿವಿಧ ಸಂಘ- ಸಂಸ್ಥೆಯ, ಸ್ಥಳೀಯಾಡಳಿತದಲ್ಲಿ ಅಧ್ಯಕ್ಷೆ- ಉಪಾಧ್ಯಕ್ಷೆಯಾಗಿ ಕಾರ್ಯನಿರ್ವಹಿಸುವಂತಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮೀಸಲಾತಿಯಿಂದಾಗಿ ರೂಪಾ ಲಕ್ಷ್ಮಣ್ ಉಪಮೇಯರ್ ಆಗಿ ಕೆಲಸ ಮಾಡುವಂತಹ ಅವಕಾಶ ಪಡೆದಿದ್ದಾರೆ.
ರೂಪಾ ಶಿವಮೊಗ್ಗದವರೇ ಆದರೂ ಸಹ ಮನೆಯಲ್ಲೇ ಇದ್ದವರು. 7ನೆಯ ತರಗತಿಯವರೆಗೆ ಮಾತ್ರ ಓದಿರುವ ಇವರಿಗೆ ಅಪ್ಪ-ಅಮ್ಮ ಇಬ್ಬರೂ ಕೆಲಸದಲ್ಲಿದ್ದುದರಿಂದ ಮನೆಯಿಂದ ಹೊರಹೋಗುವ ಅವಶ್ಯಕತೆ ಬರಲಿಲ್ಲ. ಅಪ್ಪ  ಎಸ್.ಆರ್. ಶೇಷಾದ್ರಿ ನಗರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದರೆ, ತಾಯಿ ರತ್ನಮ್ಮ ಪದವಿ ಓದ್ದಿ, ಟ್ಯೂಷನ್ ನಡೆಸುತ್ತಿದ್ದರು.
 ಮದುವೆಯಾದ ನಂತರ ಗಂಡನ ಮನೆಗೆ ಬಂದ 2-3 ವರ್ಷದಲ್ಲಿ ರಾಜಕೀಯ ಸೇರುವಂತೆ ಒತ್ತಾಯಬರತೊಡಗಿತು. ಇವರ ಪತಿ ಲಕ್ಷ್ಮಣ ಬಿಜೆಪಿ ಕಾರ್ಯಕರ್ತರಾಗಿದ್ದರು. ಇದರಿಂದ ಅನೇಕ ನಾಯಕರು ಇವರ ಮನೆಗೆ ಬಂದು ಪಕ್ಷ ಸೇರುವಂತೆ ಮನವಿ ಮಾಡತೊಡಗಿದಾಗ ಒತ್ತ್ತಾಯಕ್ಕೆ ಕಟ್ಟುಬಿದ್ದು ಬಿಜೆಪಿ ಸೇರಿದರು. ಗಂಡನ ಮನೆಯವರೂ ಇದಕ್ಕೆ ಒಪ್ಪಿಗೆ ನೀಡಿದರು. ಬಳಿಕ ವಿದ್ಯಾನಗರ (13ನೆಯ ವಾರ್ಡ್) ದಿಂದ ಟಿಕೆಟ್ ದೊರೆತು 2008ರಲ್ಲಿ ನಗರಸಭೆಗೆ ಆಯ್ಕೆಯಾದರು. ಒಂದು ಅವಧಿ ಬಳಿಕ ಮತ್ತೆ ಎರಡನೆಯ ಅವಧಿಗೂ  ಅಂದರೆ 2013ರಲ್ಲಿ ಆಯ್ಕೆಯಾದರು. ಈ ವೇಳೆ ನಗರಸಭೆ ಪಾಲಿಕೆಯಾಯಿತು.  ಇದರ ನಾಲ್ಕನೆಯ ಅವಧಿಗೆ ಮೀಸಲಾತಿ ಅನುಕೂಲದಿಂದ ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗುವ ಅವಕಾಶ ದೊರೆತಿದೆ.
ಅವರೇ ಹೇಳುವಂತೆ ರಾಜಕೀಯದ ಅನುಭವವಿಲ್ಲದಿದ್ದರೂ ಸದಸ್ಯೆಯಾಗಿ ಆಯ್ಕೆಯಾದ ನಂತರ ರಾಜಕೀಯವೇ ಎಲ್ಲವನ್ನೂ ಕಲಿಸಿದೆ. ಒಂದರ್ಥದಲ್ಲಿ ರಾಜಕೀಯವೇ ಪಾಠಶಾಲೆಯಾಗಿದೆ. ರಾಜಕೀಯಕ್ಕೆ ಸೇರಿದಾಗ ಆರಂಭದಲ್ಲಿ ಹೆದರಿಕೆ ಆಗುತ್ತಿತ್ತು. ಜೊತೆಗೆ ಕುಟುಂಬದಲ್ಲಿ ಮೊದಲ ಬಾರಿಗೆ ರಾಜಕೀಯಕ್ಕೆ ಬಂದಿದ್ದರಿಂದ ಇನ್ನಷ್ಟು ಆತಂಕ ಕಾಡುತ್ತಿತ್ತು. ಕೆಲವು ನಾಯಕರು ಮತ್ತು ಕಾರ್ಯಕರ್ತರು ಬೆನ್ನಿಗೆ ನಿಂತು ಎಲ್ಲ ಸಹಕಾರ ನೀಡಿದರು. ಬರಬರುತ್ತ ಜನ ಪರಿಚಯ ಹೆಚ್ಚುತ್ತಾ ಹೋಯಿತು. ನಗರಸಭೆಯ ಆಡಳಿತ, ಜನ ಸಮಸ್ಯೆ, ಅಧಿಕಾರಿಗಳೊಂದಿಗೆ ಚರ್ಚಿಸುವುದು ತಿಳಿಯುತ್ತ ಬಂದಿತು. ಇದರಿಂದ ಧೈರ್ಯ ಹೆಚ್ಚಲಾರಂಭಿಸಿತು.
 ಸೌಮ್ಯ ಸ್ವಭಾವದ, ಅವಶ್ಯವಿದ್ದಷ್ಟೇ ಮಾತನಾಡುವ ರೂಪಾ ಇಂದಿಗೂ ತಾನು ಕಲಿಯುವುದು ಇನ್ನೂ ಇದೆ. ರಾಜಕೀಯ ಎಂದರೆ ತನಗೆ ಒಗ್ಗದು ಎಂದು ಆರಂಭದಲ್ಲಿ ತಿಳಿದಿದ್ದೆ. ಈಗ ಇದರಲ್ಲೇ ಮುಂದುವರೆದು ಕೆಲಸ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಬಂದಿದೆ. ಪತಿಯ ಸಹಕಾರವೂ ಸಾಕಷ್ಟಿರುವುದರಿಂದ ವಾರ್ಡಿನ ಸಮಸ್ಯೆಯನ್ನು ಬಗೆಹರಿಸಲು ಸಹಕಾರಿಯಾಗಿದೆ. ಗಂಡನ ಮನೆಯಲ್ಲೂ ಎಲ್ಲ ರೀತಿಯ ಸಹಕಾರವಿದೆ. ಉಪಮೇಯರ್ ಆದ ನಂತರ ಹೆಚ್ಚಿನ ಜವಾಬ್ದಾರಿ ಎದುರಾಗಿರುವುದರಿಂದ ಅದನ್ನು ಎದುರಿಸುವ ಮತ್ತು ನಿಭಾಯಿಸುವ ಶಕ್ತಿ ಬಂದಿದೆ ಎನ್ನುತ್ತಾರೆ. 
 ಮಹಿಳೆ ತನಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದನ್ನು ಮೊದಲು ಕಲಿಯಬೇಕು. ಏಕೆಂದರೆ ಅವಕಾಶ ಒಮ್ಮೆ ಕೈತಪ್ಪಿದರೆ ಮರಳಿಬಾರದು. ಕೈತಪ್ಪಿದ ನಂತರ ಚಿಂತಿಸುವುದಕ್ಕಿಂತ ಯೋಚನೆ ಮಾಡಿ ಮುಂದಡಿ ಇಡಬೇಕು. ಇಂದಿನ ದಿನಗಳಲ್ಲಿ ಯಾವುದೇ ಕ್ಷೇತ್ರದಲ್ಲೂ ಅನುಭವವಿಲ್ಲದಿದ್ದರೂ ಆ ಕ್ಷೇತ್ರಕ್ಕೆ ಕಾಲಿಟ್ಟಾಗ ಅಲ್ಲಿನ ವಾತಾವರಣ ಕೆಲಸ ಮಾಡುವ ರೀತಿಯನ್ನು ಕಲಿಸುತ್ತದೆ. ಹಾಗಾಗಿ ಮಹಿಳೆೆಯರು ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ರೂಪಾ ಸಹ ರಾಜಕೀಯಕ್ಕೆ ಬಂದ ನಂತರ ಕಲಿತಿದ್ದೇ ಹೆಚ್ಚು. ಉಪಮೇಯರ್ ಆದ ನಂತರ ನಗರದ ವಿವಿಧ ವಾರ್ಡುಗಳಿಗೆ ಸಂಚರಿಸಿ, ಜನರ ಸಮಸ್ಯೆ ಅರಿತು ಅವುಗಳಿಗೆ ಸ್ಪಂದಿಸುವ ಮತ್ತು ಪರಿಹರಿಸುವ ಅದರಲ್ಲೂ ವಿಶೇಷವಾಗಿ ಮಹಿಳೆಯರ ಬಗ್ಗೆ ಹೆಚ್ಚಿನ ಆದ್ಯತೆ ಕೊಡುವ ಕೆಲಸ  ರೂಪಾ ಅವರಿಂದ ಆಗಬೇಕಿದೆ. 
18.3.17
,,,,,,,,,,,,,,,,,,,,,,,,,,,,,,,,,,,

No comments:

Post a Comment