Saturday 13 January 2018

ಬಹುಮುಖೀ ಪ್ರತಿಭೆ
ನಿವೇದಿತಾ


ಇವರು ಪ್ರತಿಭಾನ್ವಿತ ಗಾಯಕಿ, ರಾಜ್ಯಮಟ್ಟದ ಖೋಖೋ ಆಟಗಾರ್ತಿ, ನಾಟಕದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಡಾನ್ಸ್, ಸ್ಕೌಟ್, ಗೈಡ್ಸ್‌ನಲ್ಲೂ ಸಕ್ರಿಯರಾಗಿ ಪಾಲ್ಗೊಂಡು ಹೆಸರು ಮಾಡಿದ್ದಾರೆ. ಎನ್‌ಸಿಸಿಯಲ್ಲಿ ಸಿಲ್ವರ್ ಮೆಡಲ್ ಪಡೆದು, ಮಿಂಚಿದ್ದಾರೆ. ಇದರ ಜೊತೆಗೆ ಓದಿನಲ್ಲಿ ಎಂದೂ ಶೇ. 92ಕ್ಕಿಂತ ಕಡಿಮೆ ಅಂಕ ಪಡೆದವರಲ್ಲ.
ಒಬ್ಬ ವ್ಯಕ್ತಿ ಇಷ್ಟೆಲ್ಲ ಸಾಧನೆ ಮಾಡಬಹುದೇ ಎಂಬ ಪ್ರಶ್ನೆ ಎದುರಾಗಬಹುದು. ಮನಸ್ಸಿದ್ದರೆ ಸಾಧನೆ ಸಾಧ್ಯ. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲ ಮಾತ್ರ ಬೇಕು. ಇದು ವ್ಯಕ್ತಿಯನ್ನು ಎಂತಹ ಮಹತ್ಸಾಧನೆಗೂ ದಾರಿಯಾಗುತ್ತದೆ ಎನ್ನುವುದಕ್ಕೆ ಶಿವಮೊಗ್ಗ ನಗರದ ಈ ಯುವತಿ ನಿವೇದಿತಾ ಸಾಕ್ಷಿ.
ನಿವೇದಿತಾ ವಿನೋಬನಗರ ವಾಸಿಯಾಗಿದ್ದು, ಸದ್ಯ ಸಿಎ ಅಧ್ಯಯನ ಮಾಡುತ್ತಲೇ ಅದರ ಅಭ್ಯಾಸ ನಡೆಸುತ್ತಿದ್ದಾರೆ. ನಗರದ ಸಮನ್ವಯ ತಂಡದ ಮುಖ್ಯಸ್ಥ ಕಾಶೀನಾಥ ಅವರು ಈ ಗಾಯಕಿಯನ್ನು ಬೆಳಕಿಗೆ ತಂದವರು. ಇದಕ್ಕೂ ಮುನ್ನ ನಗರದ ಹಲವಾರು ಸಂಗೀತಗಾರರು ಮತ್ತು ಗಾಯಕಿಯರ ಜೊತೆ ಹಾಡಿದ್ದಾರೆ. ಹತ್ತಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಹಲವಾರು ಡಾನ್ಸ್ ಕಾರ್ಯಕ್ರಮವನ್ನೂ ನೀಡಿದ್ದಾರೆ. ಸಂಗೀತ ಕಲಿಯಬೇಕೆಂದು ಒಂದು ವರ್ಷ ಕ್ಲಾಸ್‌ಗೆ ತೆರಳಿದರೂ ನಂತರ ಓದಿನ ಕಾರಣದಿಂದ ಇದನ್ನು ಮುಂದುವರೆಸಲಾಗಲಿಲ್ಲ. ಆದರೆ ಹಾಡು ಮಾತ್ರ ಸದಾ ಇವರ ಬಾಯಲ್ಲಿ ಗುನುಗುನಿಸುತ್ತಲೇ ಇತ್ತು. ಇದಕ್ಕೊಂದು ರೂಪ ಕೊಡುವವರು ಮತ್ತು ವೇದಿಕೆ ಕಲ್ಪಿಸುವವರು, ಪ್ರತಿಭೆಯನ್ನು ಬೆಳಕಿಗೆ ತರುವವರು ಬೇಕಿದ್ದರು.
ಈ ಅವಕಾಶವನ್ನು  ನಿವೇದಿತಾ ಪಡೆದಿದ್ದು ಸಮನ್ವಯ ತಂಡದಿಂದ. ಈಗ ಸಮನ್ವಯದ ಹಾಡುಗಾರ್ತಿಯರಲ್ಲಿ ಒಬ್ಬರಾದ ಇವರು, ಇತ್ತೀಚೆಗೆ ಈ ತಂಡ ವಾರ್ತಾ ಮತ್ತು ಪ್ರಚಾರ ಇಲಾಖೆಯ ಗಾನ ಯಾನ ರಾಜ್ಯಮಟ್ಟದ ಕಾರ್ಯಕ್ರಮದ ಮೂಲಕ ಅಪೂರ್ವ ಹೆಸರನ್ನು ಪಡೆದಿದ್ದಾರೆ. ಇದಕ್ಕೂ ಮುನ್ನ ಇವರು ಒಳ್ಳೆಯ ಗಾಯಕಿಯಾಗಿ ಹೆಸರುಗಳಿಸಿದ್ದರು. ಆದರೆ ಇವರು ಗಾಯನ ಅಥವಾ ಸಂಗೀತವನ್ನು ಗುರುಮುಖೇನ ಅಭ್ಯಾಸ ಮಾಡಿಲ್ಲ. ಬದಲಾಗಿ ಕುಟುಂಬದ ಯಾವುದೇ ವ್ಯಕ್ತಿಯಲ್ಲಿದ್ದ ಸಂಗೀತ, ಹಾಡಿನ ಇವರಲ್ಲಿ ಬೆಳಕಿಗೆ ಬಂದಿದೆ. ಇವರ ಚಿಕ್ಕಮ್ಮ ಮತ್ತು ಅಮ್ಮನ ಸ್ಫೂರ್ತಿಯಿಂದ ಹಾಡುವುದನ್ನು ಮುಂದುವರೆಸಿ ಈಗ ರಾಜ್ಯಮಟ್ಟದಲ್ಲಿ ಕಾರ್ಯಕ್ರಮ ನೀಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಅತ್ಯುತ್ತಮ ಗಾಯಕಿಯಾಗಿ ರೂಪುಗೊಂಡು ನಗರದ ಕೀರ್ತಿ ಮೆರೆಸಲು ಸನ್ನದ್ಧರಾಗಿದ್ದಾರೆ.
ನಿವೇದಿತಾ ಓದಿನಲ್ಲೂ ಸದಾ ಮುಂದೆ. ರೋಟರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಆನಂತರ ನ್ಯಾಶನಲ್ ಪಿಯು ಕಾಲೇಜು ಮತ್ತು ಎಟಿಎನ್‌ಸಿಸಿಯಲ್ಲಿ ಮುಂದಿನ ಶಿಕ್ಷಣ ಪಡೆದಿದ್ದಾರೆ. ಬಿಕಾಂನಲ್ಲಿ ಕೇವಲ ಒಂದು ಅಂಕದಿಂದ ರ‌್ಯಾಂಕ್ ವಂಚಿತರಾಗಿದ್ದಾರೆ. ಓದಿನ ಮಧ್ಯೆಯೇ ಎನ್ನೆಸ್ಸೆಸ್ ಮತ್ತು ಬೀದಿ ನಾಟಕ ಮತ್ತು ಥಿಯೇಟರ್ ನಾಟಕದಲ್ಲೂ ಅಭಿನಿಯಿಸಿದ್ದಾರೆ. ‘ಕುಣಿಯೇ ಘುಮಾ’ ನಾಟಕದಲ್ಲಿ ಯಶಸ್ವಿ ಪಾತ್ರ ನಿರ್ವಹಿಸುವ ಮೂಲಕ ತಾನು ಉತ್ತಮ ರಂಗನಟಿಯಾಗಬಲ್ಲೆ ಎನ್ನುವುದನ್ನು ನಿರೂಪಿಸಿದ್ದಾರೆ. ಎನ್‌ಸಿಸಿಯಲ್ಲಿರುವಾಗ ದೆಹಲಿಯಲ್ಲಿ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪದಕ ಗಳಿಸಿದ್ದಾರೆ. 
ಸಂಗೀತ ಮತ್ತು ಹಾಡುಗಾರಿಕೆಯಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದರಿಂದ ಇಂದು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ತನ್ನ ಪ್ರತಿಭೆ ಬೆಳಕಿಗೆ ಬರಲು ಸಮನ್ವಯ ತಂಡ ಕಾರಣ. ಮುಂದೆ ಸಂಗೀತ ಮತ್ತು ಗಾಯನದ ಜೊತೆಯೇ ವೃತ್ತಿ ಮುಂದುವರೆಸುತ್ತೇನೆ ಎನ್ನುವ ನಿವೇದಿತಾ, ಸಮನ್ವಯದಲ್ಲಿ ಉತ್ತಮ ಇವೆಂಟ್ ಆರ್ಗನೈಸರ್ ಆಗಿಯೂ ಹೆಸರು ಮಾಡಿದ್ದಾರೆ. ರೋಟ್ರ್ಯಾಕ್ಟ್‌ನಲ್ಲಿ ಇವರ ಹೆಸರು  ಪ್ರಸಿದ್ಧಿ. ಇಂದಿಗೂ ಅದರ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ನಿವೇದಿತಾ ಅವರಲ್ಲಿ ಉತ್ಸಾಹ, ಬತ್ತದ ಒರತೆ ಇದೆ. ಈ ಒರತೆ ಅವರನ್ನು ಸದಾ ಹಸನಾಗಿರಿಸಿದೆ. ಇವರ ಚೇತನ ಇನ್ನಷ್ಟು ಕ್ರಿಯಾಶೀಲವಾಗಬೇಕು. ಅವರ ಕನಸು, ಈ ಉತ್ಸಾಹ, ಈ ಚೇತನದಿಂದ ಹೆಚ್ಚಿನ ಸಾಧನೆ ಬರುವಂತಾಗಿ, ಅದರ ಮೂಲಕ ದೇಶದಾದ್ಯಂತ ಜನಪ್ರಿಯರಾಗಬೇಕಿದೆ.
...............................

No comments:

Post a Comment