Wednesday 10 January 2018

ಡ್ರಾಮಾ ಜೂನಿಯರ್ಸ್ ಖ್ಯಾತಿಯ
ಅಭಿಷೇಕ್ ರಾಯಣ್ಣ


 ಕ್ರಿಯಾಶೀಲತೆಯು  ಸಾಧನೆಗೆ ಸದಾ ಪ್ರಚೋದನೆ ನೀಡುತ್ತದೆ. ನಾವೇನನ್ನು ಸಾಧಿಸುತ್ತಿದ್ದೇವೆಯೋ ಅದನ್ನು  ಸದಾ ಪ್ರೋತ್ಸಾಹಿಸುತ್ತದೆ. ಇಂತಹ ಕ್ರಿಯಾಶೀಲತೆಯೊಂದಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯವಿದೆ ಎನ್ನುವುದನ್ನು ನಗರದ ಚುರುಕುಮತಿಯ, ಅಷ್ಟೇ ಮುದ್ದಾದ, ಅರಳು ಹುರಿದಂತೆ ಮಾತನಾಡುವ, ಆರುವರೆ ವರ್ಷದ ಪೋರ ಅಭಿಷೇಕ್ ರಾಯಣ್ಣ ಸಾಧಿಸಿ ತೋರಿಸಿದ್ದಾನೆ.
ಇತ್ತೀಚೆಗೆ ಮುಕ್ತಾಯವಾದ ಝೀ ಕನ್ನಡ ಚಾನೆಲ್‌ನ  ಡ್ರಾಮಾ ಜೂನಿಯರ್ಸ್ ರಿಯಾಲಿಟಿ ಶೋದಲ್ಲಿ ರಾಯಣ್ಣ  ವೀಕ್ಷಕರ ಮನಗೆದ್ದಿದ್ದಲ್ಲದೆ, ರಾಜ್ಯದಲ್ಲೇ ತನ್ನ ಛಾಪನ್ನು ಮೂಡಿಸಿದ್ದಾನೆ. ಈತ ಯಾವುದೇ ರೀತಿಯ ಕಲೆಯ ಹಿನ್ನೆಲೆಯನ್ನು ಹೊಂದಿದವನಲ್ಲ. ಆದರೆ 3ನೆಯ ವರ್ಷದಿಂದ ನಗರದ ಡಾನ್ಸ್ ಸಂಸ್ಥೆಯೊಂದರಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಝೀ ಚಾನೆಲ್‌ನಲ್ಲಿ ಈ ಕಾರ್ಯಕ್ರಮ ನಡೆಸುವ ಸಂಬಂಧ ನಗರದಲ್ಲಿ ಆಡಿಶನ್ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಪಾಲ್ಗೊಳ್ಳಲು ಬಂದರೂ ನಂತರ ಏಕೋ ಹಿಂದೆಸರಿದು ಮನೆಗೆ ವಾಪಸ್ಸಾಗಿದ್ದ. ಆದರೆ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಪಾಲ್ಗೊಳ್ಳುವ ಮನಸ್ಸು ಮಾಡಿ ತಂದೆಯೊಂದಿಗೆ ಆಗಮಿಸಿ ಭಾಗವಹಿಸಿದ್ದ. ಅಲ್ಲಿ ಆಡಿಶನ್ ನಡೆಸಿಕೊಡುವವರು ಬಬ್ರುವಾಹನ ಡೈಲಾಗ್‌ಗಳನ್ನು ಹೇಳಿಕೊಟ್ಟಂತೆ ಒಂದೇ ಉಸಿರಿನಲ್ಲಿ ಹೇಳಿಬಿಟ್ಟ, ಆಕ್ಟಿಂಗ್‌ನ್ನು ಮಾಡಿತೋರಿಸಿದ. ಇದು ಆತನ ಆಯ್ಕೆಗೆ ಕಾರಣವಾಯಿತು.
ಆನಂತರ  ಬೆಂಗಳೂರಿನ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತತವಾಗಿ 16 ವಾರ ಭಾಗವಹಿಸಿ ವೀಕ್ಷಕರನ್ನು ತನ್ನ ಮುದ್ದಾದ ಡೈಲಾಗ್, ಅಷ್ಟೇ ಸೂಕ್ತ ವೇಷಭೂಷಣ, ನಟನೆಯಿಂದ ಚಪ್ಪಾಳೆಗಿಟ್ಟಿಸಿ ಹಿಡಿದಿಟ್ಟುಕೊಂಡಿದ್ದನು. ವಾರದಿಂದ ವಾರಕ್ಕೆ ಸಾಧನೆ ಇಮ್ಮಡಿಸುತ್ತಾ 16 ವಾರ ಸಾಗಿದ್ದನು. ಬೆಳೆಯ ಸಿರಿ ಮೊಳಕೆಯಲ್ಲಿ ಕಾಣು ಎನ್ನುವ ಮಾತಿನಂತೆ ಈತನಲ್ಲಿ ಅಡಗಿರುವ ಪ್ರತಿಭೆಗೆ ವೇದಿಕೆ ಸೂಕ್ತ ಸಮಯದಲ್ಲಿ ಸಿಕ್ಕಿರುವುದರಿಂದ ಅದು ಪ್ರಕಟವಾಗಿದೆ. ಇದನ್ನು ಇನ್ನಷ್ಟು ಬೆಳೆಸಲು ಆತನ ಪಾಲಕರು ಮುಂದಾಗಿದ್ದಾರೆ.
ರಿಯಾಲಿಟಿ ಶೋನಲ್ಲಿ ಈತ ವೇದಿಕೆಗೆ ಬಂದನೆಂದರೆ ಪ್ರೇಕ್ಷಕರ ಹರ್ಷೋದ್ಘಾರದ ಸುರಿಮಳೆಯಾಗುತ್ತಿತ್ತು. ಏಕೆಂದರೆ ನಿರ್ಭಿಡೆಯಿಂದ, ಯಾವ ಅಂಜಿಕೆ, ಹಿಂಜರಿಕೆ ಇಲ್ಲದೆ, ಧಾಟಿಯುಕ್ತವಾಗಿ ಡೈಲಾಗ್ ಹೇಳುವುದು, ಅದಕ್ಕೆ ತಕ್ಕಂತೆ ವಿವಿಧ ರಸಗಳ ಮೂಲಕ ನಟಿಸುವುದು, ಧ್ವನಿಗಳ ಏರಿಳಿತ ಮಾಡುವ ಮೂಲಕ ಹೆಸರು ಪಡೆದಿದ್ದನು. ನಿರ್ಣಾಯಕರೂ ಸಹ ಬೆನ್ನುತಟ್ಟಿ ಈತನನ್ನು ಸದಾ ಹುರಿದುಂಬಿಸುತ್ತಿದ್ದರು.
ಈತ ಶೋನಲ್ಲಿ ನಿರ್ವಹಿಸಿದ ಪಾತ್ರಗಳೆಂದರೆ- ಆಂಜನೇಯ, ನಾಗ, ದೆವ್ವ, ದುರ್ಯೋಧನ, ಭೀಮ, ನಾರದ, ಬ್ಯಾಂಕ್ ಮ್ಯಾನೇಜರ್, ಆಮೆ, ರೋಗಿ, ಅನಾಥ ಹುಡುಗ, ನಟ ಉಪೇಂದ್ರ ಮತ್ತು ಕಾಮಿಡಿ ಟೈಮ್‌ನ ನಟ ಗಣೇಶ್ ಪಾತ್ರ ಮೊದಲಾದವು. ಪಾತ್ರಕ್ಕೆ ತಕ್ಕಂತೆ ವೇಷಭೂಷಣ ಮತ್ತು ಡೈಲಾಗ್ ಸಹ ಇಲ್ಲಿ ಮುಖ್ಯವಾಗಿರುವುದರಿಂದ ಅದನ್ನು ಸಾಧಿಸಿ ತೋರಿಸಿದ್ದಾನೆ. ಶೋ ನಡೆಯುವಾಗ  ಎರಡು ವಾರ ವಾರದ ಉತ್ತಮ ನಟನೆಯ ಪ್ರಶಸ್ತಿಯನ್ನೂ ಪಡೆದಿದ್ದಾನೆ. ಅಲ್ಲಿ ಆತನಿಗೆ ‘ಸ್ಮೈಲಿಂಗ್ ಸ್ಟಾರ್’ ಎಂಬ ಬಿರುದನ್ನು ನೀಡಲಾಗಿದೆ.
ಅಭಿಷೇಕ್ ಪ್ರಿ ಸ್ಕೂಲ್‌ನಲ್ಲಿ ಓದುವಾಗಲೇ ವಿವಿಧ ಪಾತ್ರಗಳಲ್ಲಿ ನಟಿಸುತ್ತಿದ್ದನು. ಚಿಕ್ಕ ನಾಟಕಗಳಲ್ಲಿ ಪಾಲ್ಗೊಳ್ಳುತ್ತಿದ್ದನು. ಸದ್ಯ ಸ್ಕೆಟಿಂಗ್‌ನಲ್ಲೂ ತರಬೇತಿ ಪಡೆಯುತ್ತಿರುವ ಈತ, ಓದಿನಲ್ಲೂ ಸಹ ಚುರುಕು. ನಗರದ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ಒಂದನೆಯ ತರಗತಿಯ ವಿದ್ಯಾರ್ಥಿ. ಈ ಕಾರ್ಯಕ್ರಮಕ್ಕೆ ಹೋದಾಗ ಸಾಕಷ್ಟು ತರಗತಿಯನ್ನು ಆತ ಕಳೆದುಕೊಂಡಿದ್ದಾನೆ. ಶಾಲೆಯ ಪ್ರಾಚಾರ್ಯೆ ನವೀನಾ ಪಾಯಸ್ ಮತ್ತು ತರಗತಿಯ ಶಿಕ್ಷಕಿ ಸಹನಾ ಸಾಕಷ್ಟು ಈತನನ್ನು ಪ್ರೋತ್ಸಾಹಿಸಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿದ್ದನ್ನು ಮತ್ತು ಈ ಮೂಲಕ ಆತನ ಪ್ರತಿಭೆ ಬೆಳೆಯಲು ಸಹಕರಿಸಿರುವುದನ್ನು ಆತನ ತಂದೆ ಕಿರಣ್ ಮತ್ತು ತಾಯಿ ಪಾವನಾ ಮನದುಂಬಿ ಸ್ಮರಿಸುತ್ತಾರೆ.
ಮಗನ ಸಾಧನೆಯಿಂದ ತೀವ್ರ ಸಂತಸಗೊಂಡಿರುವ ಪಾಲಕರು, ಮುಂದೆಯೂ ಈತನ ಪ್ರತಿಭೆಗೆ ನೀರೆರೆಯಬೇಕಿದೆ. ಈ ಮೂಲಕ ಇನ್ನಷ್ಟು ಸಾಧಕನಾಗಲು ಅವಕಾಶ ಕಲ್ಪಿಸಬೇಕಿದೆ. ರಾಜ್ಯದ ಬಾಲಪ್ರತಿಭೆಯಲ್ಲಿ ತನ್ನ ಹೆಸರನ್ನು ಛಾಪಿಸಿಕೊಂಡಿರುವ ಅಭಿಷೇಕ್, ಎಲ್ಲರ ಮನದಲ್ಲಿ ಅಚ್ಚಳಿಯದ ಡೈಲಾಗ್ ಹಾಗೂ ಸ್ಮೈಲಿಂಗ್‌ನಿಂದ ಉಳಿದಿದ್ದಾನೆ.
published on 8.10.16
 ...........................

No comments:

Post a Comment