Tuesday 9 January 2018


ನಿಷ್ಠೆ, ಪ್ರಾಮಾಣಿಕತೆಗೆ ಸಂದ ರಾಷ್ಟ್ರಪತಿ ಪುರಸ್ಕಾರ
 ಕೆ. ಇ. ಮ್ಯಾಥ್ಯೂ

 ಯಾವ ವ್ಯಕ್ತಿ ಸಾರ್ವಜನಿಕರೊಂದಿಗೆ ಮುಕ್ತವಾಗಿ ವ್ಯವಹರಿಸುತ್ತಾನೋ, ಎಲ್ಲರೊಂದಿಗೂ ಗೌರವಯುತ ಸಂಬಂಧವನ್ನು ಇಟ್ಟುಕೊಳ್ಳುತ್ತಾನೊ ಅವನು ಎಂದಿಗೂ, ಎಲ್ಲರಿಂದಲೂ  ಸ್ಮರಣಾರ್ಹನಾಗುತ್ತಾನೆ. ಅದರಲ್ಲೂ ಸೇವೆಯಲ್ಲಿರುವವರು  ಆಡಿದ ಮಾತಿಗಿಂತ  ಮಾಡಿದ ಕೆಲಸ, ಜನರೊಂದಿಗಿನ ಅವರ ಒಡನಾಟ  ಸದಾ ಪರಿಗಣಿಸಲ್ಪಡುತ್ತದೆ. ಇಂತಹ ವ್ಯಕ್ತಿಯನ್ನು ಸದಾಕಾಲ ನೆನೆಪಿನಲ್ಲಿಟ್ಟುಕೊಳ್ಳುತ್ತಾರೆ. ಎಲ್ಲರಿಂದಲೂ ಆತ ಪ್ರಶಂಸೆಗೊಳಗಾಗುತ್ತಾನೆ.
ಈ ಮಾತು ಜಿಲ್ಲಾ ಪೊಲೀಸ್ ಇಲಾಖೆಯ ಸಶಸ್ತ್ರ ಪೊಲೀಸ್ ದಳ (ಡಿಎಆರ್)ನಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಇತ್ತೀಚೆಗೆ ಭಡ್ತಿ ಹೊಂದಿರುವ, ಪೊಲೀಸ್ ವರಿಷ್ಠರ ಕಾರು ಚಾಲಕರಾಗಿ ಸುಮಾರು  38 ವರ್ಷಗಳ ಕಾಲ ದುಡಿದಿರುವ,  ಸ್ವಾತಂತ್ರ್ಯೋತ್ಸವದಂದು ರಾಷ್ಟ್ರಪತಿ ಪ್ರಶಸ್ತ್ತಿಗೆ ಭಾಜನರಾಗಿರುವ ಕೆ.ಇ. ಮ್ಯಾಥ್ಯೂ ಅವರಿಗೆ ಅನ್ವಯಿಸುತ್ತದೆ. ಏಕೆಂದರೆ ಅವರದು ಅಂತಹ ವ್ಯಕ್ತಿತ್ವ. ನಯ-ವಿನಯ, ಇನ್ನೊಬ್ಬರನ್ನು ಗೌರವದಿಂದ ಕಾಣುವುದು, ಸೌಮ್ಯ ಸ್ವಭಾವ, ಸದಾ ನಗುಮೊಗ, ಒಂದಿನಿತೂ ಸಿಡಿಮಿಡಿಗೊಳ್ಳದಿರುವುದು ಎಂತಹವರನ್ನೂ ಆಕರ್ಷಿಸುತ್ತದೆ.   
ಮ್ಯಾಥ್ಯೂ ಯಾವಾಗಲೂ ಹೀಗೆಯೇ. ಅವರು ಯಾರೊಂದಿಗೂ ಮುನಿಸಿಕೊಂಡಿದ್ದಿಲ್ಲ, ಜಗಳವಾಡಿದ್ದಿಲ್ಲ. ಇಲಾಖೆಯವರೂ ಸಹ ಅವರನ್ನು ಹೊಗಳುತ್ತಾರೆ. ಕರ್ತವ್ಯನಿಷ್ಠೆ, ಪ್ರಾ ್ರಮಾಣಿಕತೆಗೆ ಇನ್ನೊಂದು ಹೆಸರು ಮ್ಯಾಥ್ಯೂ.  ಇವರಿಗೆ ಕಾರು ಆತ್ಮೀಯ ಗೆಳೆಯ. ಹಾಗಾಗಿಯೇ ಇಲಾಖೆಯಲ್ಲಿ ಅವರು ಚಾಲಕರಾಗಿ ಹೆಸರಾದವರು. ಶಿವಮೊಗ್ಗದ ಬಹುತೇಕ ಎಸ್ಪಿಗಳಿಗೆಲ್ಲ ಕಾರು ಚಾಲಕರಾಗಿ ಕೆಲಸ ಮಾಡಿದವರು ಇವರು. 
ಮೂಲತಃ ಕೇರಳದವರಾದ ಮ್ಯಾಥ್ಯೂ, ಅವರ ತಂದೆಯ ಕಾಲದಲ್ಲೆ ಶಿಕಾರಿಪುರದ ಬೂಗಿ ಗ್ರಾಮಕ್ಕೆ ಬಂದು ನೆಲೆಸಿದ್ದರು. ತಂದೆ ಕೆ. ಇಪ್ಪನ್, ತಾಯಿ ಕುಂಞಮ್ಮ. ಮೂವರು ಮಕ್ಕಳಲ್ಲಿ ಇವರೇ ಕೊನೆಯವರು. ಕಡುಬಡತನ ಕಾರಣ 9ನೆಯ ತರಗತಿಯವರೆಗೆ ಮಾತ್ರ ಓದಿ ನಂತರ ಶಿವಮೊಗ್ಗಕ್ಕೆ ಬಂದು ನೆಲೆಸಿದ್ದರು. ಇಲ್ಲಿ ಪೊಲೀಸ್ ಕೆಲಸವನ್ನು ಪಡೆದು ತರಬೇತಿ ನಂತರ ವಿವಿಧ ಠಾಣೆಗಳಲ್ಲಿ ಕೆಲಸ ಮಾಡಿದರು. ಈ ವೇಳೆ ಮೋಟಾರು ವಾಹನ ವಿಭಾಗದಲ್ಲಿ ಆಸಕ್ತಿ ಇದ್ದುದರಿಂದ  ಅದರತ್ತ ಗಮನಹರಿಸಿದರು. ಈ ಮಧ್ಯೆ ಬೆಂಗಳೂರಿಗೆ ಹೋಗಿ ಈ ಬಗ್ಗೆ ತರಬೇತಿ ಪಡೆದರು. ಅಲ್ಲಿಂದ ಚಾಲಕರಾಗಿ ಭಡ್ತಿ ಪಡೆದು ಖಾಯಂ ಚಾಲಕರೆನಿಸಿಕೊಂಡರು. ಎಸ್‌ಪಿಯವರ ಕಾರು ಚಾಲಕರಾಗಿ ನೇಮಕಗೊಂಡ ನಂತರ ಅವರು ಹಿಂದಿರುಗಿ ನೋಡಲಿಲ್ಲ. ತಮ್ಮ ಉತ್ತಮ ಸೇವೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಅಧಿಕಾರಿಗಳ ಮನಗೆದ್ದಿದ್ದಾರೆ.
ಈ ಮಧ್ಯೆ ಬೆಂಗಳೂರು, ಸಾಗರ, ಮಲ್ಪೆ, ಮಲೈಮಹದೇಶ್ವರ ಬೆಟ್ಟದಲ್ಲೂ  ಚಾಲಕರಾಗಿ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿಯವರ ಕಾರು ಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರ ಇಂತಹ ನಿಸ್ಪಹ ಸೇವೆ ಗಮನಿಸಿಯೇ ರಾಷ್ಟ್ರಪತಿ ಪ್ರಶಸ್ತಿ ದೊರೆತಿದೆ. ವೃತ್ತಿ ಜೀವನದಲ್ಲಿ ಹಲವು ಬಾರಿ ವಾಹನ ಅವಘಡಗಳಿಂದದ ಪಾರಾಗಿದ್ದಾರೆ. ಒಮ್ಮೆ ಮಾತ್ರ ಅಪಘಾತಕ್ಕೊಳಗಾಗಿದ್ದರು. ಆದರೂ ಕೆಲವೇ ದಿನದಲ್ಲಿ ಚೇತರಿಸಿಕೊಂಡು ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ.
ಚಾಲನಾ ವೃತ್ತಿ ತೀರ ಕಷ್ಟ. ಏಕಾಗ್ರತೆ ಮತ್ತು ತಾಳ್ಮೆ ಎರಡೂ ಅವಶ್ಯ. ನಮ್ಮ ಮೇಲೆ ಹಿಡಿತವಿರಬೇಕು. ವಾಹನ  ಕೈಯಲ್ಲಿರುವಾಗ ಅದರಲ್ಲಿ ಕುಳಿತವರ ಜೀವದ ಬಗ್ಗೆ ಎಚ್ಚರ ವಹಿಸಿದರೆ ಖಂಡಿತ ಅಪಘಾತವಾಗುವುದಿಲ್ಲ. ಅತಿ ವೇಗವಾಗಿ ಎಂದೂ ಓಡಿಸಬಾರದು. ಇಂದಿನವರಲ್ಲಿ ತಾಳ್ಮೆ ಇಲ್ಲ ಎನ್ನುತ್ತಾರೆ ಮ್ಯಾಥ್ಯೂ.
ಸ್ವಾತಂತ್ರ್ಯೋತ್ಸವದಂದು ಜಿಲ್ಲಾಡಳಿತ ಇವರನ್ನು ಗೌರವಿಸಿದೆ. ಪ್ರಸ್ತುತ ನಗರದಲ್ಲಿ ನೆಲೆಸಿರುವ ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಕುಟುಂಬದವರ ಸಹಕಾರವನ್ನು ಸಹ ಮನದುಂಬಿ ನೆನೆಯುವ ಅವರು, ತನ್ನ ಬೆಳವಣಿಗೆಗೆ ಅಧಿಕಾರಿಗಳಷ್ಟೇ ಕುಟುಂಬದವರೂ ಕಾರಣ ಎಂದು ಹೇಳಲು ಮರೆಯುವುದಿಲ್ಲ.
ವೃತ್ತಿಯಲ್ಲಿ ಸಾರ್ಥಕತೆಯನ್ನು ಕಂಡಿರುವ ಇವರು, ಅಪಾರ ಗೆಳೆಯರನ್ನು ಹೊಂದಿದ್ದಾರೆ. ತಮಗೆ ಸಿಕ್ಕವರನ್ನೆಲ್ಲ ಮುಗುಳ್ನಗೆ, ವಿನಯದಿಂದಲೇ ಸ್ವಾಗತಿಸುವ ಅವರ ಪರಿ ಎಂತಹವರನ್ನೂ ಸೆಳೆಯುತ್ತದೆ. ಸದ್ಯ ಎಸ್‌ಐ ಆಗಿ ಭಡ್ತಿ ಸಿಕ್ಕಿದ್ದು, ಚಾಲಕ ವೃತ್ತಿಯಿಂದ ಬಿಡುಗಡೆ ಹೊಂದಿ ಡಿಎಆರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
..........................................

No comments:

Post a Comment