Monday 22 January 2018

ವೈವಿಧ್ಯ ಅಡುಗೆಯ ಶಿಕ್ಷಕಿ
ರಂಜು ಜೈನ್ 

.
ಹೊಸತನ ಮತ್ತು ಶುಚಿ- ರುಚಿಯ ಅಡುಗೆ- ತಿಂಡಿಗಳಿಗೆ ಇಂದಿನ ಅವಸರದ ಜಗತ್ತಿನಲ್ಲಿ ಆದ್ಯತೆ ಹೆಚ್ಚು. ಎಷ್ಟೋ ಮನೆಯಲ್ಲಿ ಅಡುಗೆ- ತಿಂಡಿಯನ್ನು ವಾರಕ್ಕೆರಡು ಬಾರಿಯಾದರೂ ಹೊಟೆಲ್‌ಗೆ ಹೋಗಿ ಸವಿಯುತ್ತಾರೆ. ವೀಕೆಂಡ್‌ನಲ್ಲಂತೂ ಹೊಟೆಲ್ ಊಟ ಖಾಯಂ. ಹೊಟೆಲ್‌ಗೆ ತೆರಳಿ ದುಬಾರಿ ಬಿಲ್ ತೆತ್ತು ಬಾಯಿ ಚಪ್ಪರಿಸುವುದಕ್ಕಿಂತ ಅದನ್ನೇ ಕಲಿತು ಮನೆಯಲ್ಲೇಕೆ ಮಾಡಿ ತಿನ್ನಬಾರದೆಂಬ ಪ್ರಶ್ನೆ ಉದ್ಭವಿಸುವುದು ಸಹಜ.
ಆದರೆ ಈ ಹೊಸ ರುಚಿಯ, ಬಗೆಬಗೆಯ ಖಾದ್ಯ ತಯಾರಿಸುವುದು ಬರಬೇಕಲ್ಲ, ಈಗ ಇದನ್ನು ನಿಮ್ಮ ಮನೆ ಬಾಗಿಲಿಗೇ ಬಂದು ಕಲಿಸುವವರಿದ್ದಾರೆ. ಆದರೆ ಶುದ್ಧ ಸಸ್ಯಾಹಾರಿಗಳಿಗೆ ಮಾತ್ರ . ಉತ್ತರ ಭಾರತದ ಹೆಸರಾಂತ ತಿಂಡಿ- ತಿನಿಸು, ಊಟಕ್ಕೆ ಮನಸೋಲದವರಿಲ್ಲ. ಜೊತೆಗೆ ಕೇಕ್, ಚಾಕೋಲೇಟ್ ಪ್ರಿಯರೇ ಹೆಚ್ಚುತ್ತಿರುವ ಇಂದಿನ ದಿನಮಾನದಲ್ಲಿ ಅದನ್ನು ಸಹ ಕೇಕ್ ಕಾರ್ನರ್, ಬೇಕರಿಗೆ ಹೋಗಿ ಖರೀದಿಸುವುದು ಹೆಚ್ಚುತ್ತಿದೆ. ಈ ರೀತಿಯ ವಿಭಿನ್ನ ಮಾದರಿಯ ತಿಂಡಿ, ತಿನಿಸನ್ನು ಭದ್ರಾವತಿಯ ರಂಜು ಜೈನ್ ಕಲಿಸಿಕೊಡುತ್ತಿದ್ದಾರೆ. ಆಸಕ್ತ ಹೆಣ್ಣುಮಕ್ಕಳಿಗೆ ಈ ಬಗ್ಗೆ ಕ್ಲಾಸ್ ನಡೆಸಿ ಮಾಹಿತಿ ಕೊಡುವ ಕೆಲಸವನ್ನು ಆರೇಳು ವರ್ಷಗಳಿಂದ ರಂಜು (ಮೊಬೈಲ್ ನಂ-9036693889) ಮಾಡುತ್ತಿದ್ದಾರೆ.
ರಂಜು ಮೂಲತಃ ರಾಜಸ್ಥಾನದವರಾದರೂ ಈಗ ಜಿಲ್ಲೆಯವರೇ ಆಗಿದ್ದಾರೆ. 15 ವರ್ಷಗಳಿಂದ ಭದ್ರಾವತಿ ವಾಸಿಯಾಗಿದ್ದು, ತಾವು ಕಲಿತ ಅಡುಗೆ, ತಿನಿಸಿನ ವಿದ್ಯೆಯನ್ನೆಲ್ಲ ಇಲ್ಲಿನ ಆಸಕ್ತ ಮಹಿಳೆಯರಿಗೆ ಧಾರೆ ಎರೆಯುವ ಮೂಲಕ ಅವರಲ್ಲೂ ವೈವಿಧ್ಯಮಯ ಅಡುಗೆ ಕಲಿಕೆಯ ಆಸಕ್ತಿ ಹುಟ್ಟಿಸುತ್ತಿದ್ದಾರೆ. ಇಷ್ಟೇ ಅಲ್ಲ, ಮಹಿಳಾ ಸಂಘಟನೆಗಳು ಆಹ್ವಾನಿಸಿದಲ್ಲಿ ಬಂದು ಈ ಬಗ್ಗೆ ಕಾರ್ಯಾಗಾರ ಅಥವಾ ಉಪನ್ಯಾಸವನ್ನೂ ಕೊಡುತ್ತಾರೆ. 
ಈವರೆಗೆ ಸುಮಾರು 250ಕ್ಕು ಹೆಚ್ಚು ಮಹಿಳೆಯರಿಗೆ ಅವರು ಪಾಠ ಮಾಡಿದ್ದಾರೆ. ಬಹುತೇಕ ಮಹಿಳೆಯರು ಇದರ ಲಾಭ ಪಡೆದು ವಿಭಿನ್ನ ರುಚಿಯ ಅಡುಗೆ ಮಾಡುತ್ತಿದ್ದರೆ ಕೆಲವರು ಹತ್ತಾರು ನಮೂನೆಯ ಕೇಕ್, ಚಾಕೋಲೇಟ್ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಹೆಚ್ಚುತ್ತಿರುವ ಅಡುಗೆ ವೈವಿಧ್ಯಗಳ ಬೇಡಿಕೆಯನ್ನು ಗಮನಿಸಿ ಕಲಿತ ವಿದ್ಯೆಯನ್ನು ಇಲ್ಲೇಕೆ ಆರಂಭಿಸಬಾರದೆಂಬ ಪ್ರಶ್ನೆ ಮೂಡಿದ್ದರಿಂದ ತರಬೇತಿ ಆರಂಭಿಸಿದರು. ಶಿವಮೊಗ್ಗ, ಭದ್ರಾವತಿಯಲ್ಲಿ ಸದ್ಯ ಶಿಬಿರ ನಡೆಸುತ್ತಿದ್ದಾರೆ. ಅಕ್ಕಪಕ್ಕದ ತಾಲೂಕು, ಜಿಲ್ಲೆಯಿಂದಲೂ  ತರಬೇತಿ ನಡೆಸುವಂತೆ ಅನೇಕ ಮಹಿಳೆಯರು ಒತ್ತಾಯಿಸುತ್ತಿದ್ದಾರೆ. ಬಳ್ಳಾರಿ, ಹಗರಿಬೊಮ್ಮನಹಳ್ಳಿಯಲ್ಲಿ ತರಬೇತಿ ಕೊಟ್ಟಿದ್ದಾರೆ.
ನಾವು ಇಲ್ಲಿಯವರೆಗೆ ತಿನ್ನದ ಅನೇಕ ಬಗೆಯ ಸಿಹಿ ತಿಂಡಿಯನ್ನೂ ಇವರು ತಯಾರಿಸುತ್ತಿದ್ದಾರೆ. ತಿಂದಿದ್ದರೂ ಸಹ  ಬೇರೆ ರುಚಿಯಲ್ಲಿ ಅದನ್ನು ತಯಾರಿಸಲು ಸಲಹೆ ಕೊಡುತ್ತಾರೆ. ಪ್ರತಿ ತರಗತಿಗೆ ಐವರಂತೆ ಮಹಿಳೆಯರನ್ನು ಆಯ್ದುಕೊಂಡು ತರಬೇತಿ ಕೊಡುತ್ತಾರೆ. ಕಲಿಯುವವರ ಆಸಕ್ತಿಯಂತೆ ಐದು ದಿನದಿಂದ ವಾರದವರೆಗೆ ಇದು ನಡೆಯುತ್ತದೆ. 
ಹಲವು ವಸ್ತುಪ್ರದರ್ಶನ, ಸಮ್ಮೇಳನ, ಸಾಂಸಕ್ರತಿಕ ಕಾರ್ಯಕ್ರಮಗಳ ವೇಳೆ ಮಳಿಗೆ ಹಾಕಿ ಅದರ  ಮೂಲಕ ತಿಂಡಿಗಳ ಪ್ರದರ್ಶನ ಮತ್ತು ಮಾರಾಟ ಮಾಡಿದ್ದಾರೆ. ಕೇಕ್‌ಗಳ ಬೇಡಿಕೆ ಬಂದಲ್ಲಿ ಮನೆಯಿಂದಲೇ ಅದನ್ನು ತಯಾರಿಸಿಕೊಡುತ್ತಾರೆ. ಇವರ ಕೈಲಿ ವಿವಿಧ ಕಲಾಕೃತಿಯ ಕೇಕ್‌ಗಳು ಸಿದ್ಧಗೊಂಡಿವೆ. ಬರ್ತಡೇ, ವಾರ್ಷಿಕೋತ್ಸವ ಇನ್ನಿತರ ಶುಭ ಸಮಾರಂಭಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ಕೇಕ್ ತಯಾರಿಸಿಕೊಡುವ ಬೇಡಿಕೆಯನ್ನು ಸ್ವೀಕರಿಸುತ್ತಾರೆ.
ಅಡುಗೆ ಮತ್ತು ಕೇಕ್ ವೈವಿಧ್ಯತೆ ಅತಿ ಹೆಚ್ಚು ಪ್ರಮಾಣದಲ್ಲಿ ಇದೆ. ದಿನೇ ದಿನೇ ಇನ್ನಷ್ಟು ಹೊಸ ರುಚಿಯಲ್ಲಿ ಬೆಳಕಿಗೆ ಬರುತ್ತಿವೆ. ಇದನ್ನೆಲ್ಲ ಕಲಿತು ಆಸಕ್ತರಿಗೆ ತರಬೇತಿ ಕೊಡುತ್ತೇನೆ ಎನ್ನುವ ರಂಜು, ಸೀರೆಗೆ ಮತ್ತು ಬ್ಲೌಸ್‌ಗೆ ವಿವಿಧ ರೀತಿಯ ಎಂಬ್ರಾಯ್ಡರಿ ಹಾಕುವುದರಲ್ಲೂ ಪಳಗಿದವರು.
................................     

No comments:

Post a Comment