Monday 22 January 2018

ಪವರ್‌ಲಿಫ್ಟಿಂಗ್ ಸಾಧಕ 
ಡಿ. ಜಿ. ಪರಶುರಾಮ

ಕೆಲವರು ಹುಟ್ಟುತ್ತಲೇ ಬಲಿಷ್ಠರಾಗಿರುತ್ತಾರೆ. ಇನ್ನೂ ಕೆಲವುರು  ಬಲಿಷ್ಠರಾಗಿ ಆನಂತರ ತಯಾರಾಗುತ್ತಾರೆ ಎಂಬ ಮಾತಿದೆ. ಬಲಿಷ್ಠರಾಗಿ ಹುಟ್ಟುವವರಾಗಲಿ, ಆನಂತರ ಬಲಿಷ್ಟರಾಗುವವರಾಗಲಿ ತರಬೇತಿ ಪಡೆದರೆ ಮಾತ್ರ ಸಾಧನೆಯ ಮಾರ್ಗದಲ್ಲಿ ಸಾಗಲು ಸಾಧ್ಯ. ತರಬೇತಿಯೊಂದೇ ಸಾಧನೆಯ ಹಾದಿಯನ್ನು, ತೋರಿಸಬಲ್ಲದು, ಸಾಗುವ ದಾರಿಯನ್ನು ನಿರ್ಧರಿಸಬಲ್ಲದು. ಹೆದರಿಕೆಯನ್ನು ದೂರಮಾಡಿ ಮನೋಬಲ, ಸಾಧನೆಯ ನಿರ್ದಿಷ್ಠ ಗುರಿಯನ್ನಿಟ್ಟುಕೊಂಡರೆ ಕ್ರೀಡೆಯಲ್ಲಿ ಅಥವಾ ಯಾವುದೇ ದೈಹಿಕ ಸ್ಪರ್ಧೆಯಲ್ಲಿ ಗೆಲುವಿನ ಸರದಾರರಾಗಬಹುದು. 
ಸುಮಾರು ಮೂರು ದಶಕಗಳ ಹಿಂದೆ ಶಿವಮೊಗ್ಗದಲ್ಲಿ  ದೇಹದಾರ್ಢ್ಯ ಮನೆಮಾತಾಗಿತ್ತು. ಅನೇಕ ಘಟಾನುಘಟಿಗಳು ಮಲೆನಾಡಿನ ಈ ಜಿಲ್ಲೆಯಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪಧಿಸಿ ಹತ್ತಾರು ಪದಕ ಗಳಿಸಿ, ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದರು. ಸುಧಾಕರ ಕಾಮತ್,  ಸಿರಿಲ್ ಡಿಕಾಸ್ಟಾ, ಮಂಜುನಾಥ, ಲಕ್ಷ್ಮೀನಾರಾಯಣ, ಪ್ರಭಾಕರ, ಕೃಷ್ಣಮೂರ್ತಿ ಮೊದಲಾದವರ ಹೆಸರು ಈ ಕ್ಷೇತ್ರದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. ಇವರ ನಂತರವೂ ದೇಹದಾರ್ಢ್ಯಪಟುಗಳ ಸಂಖ್ಯೆ ಕಡಿಮೆಯಾಗಿಲ್ಲ. ಬೆರಳೆಣಿಕೆಯಷ್ಟಾದರೂ ಸಾಧಕರು ಉನ್ನತ ಸ್ಥಾನಕ್ಕೇರುತ್ತಿದ್ದಾರೆ. ಅಂತಹವರಲ್ಲಿ ಡಿ.ಜಿ. ಪರಶುರಾಮ ಒಬ್ಬರು.
ನಗರದ ಹೊಸಮನೆ ಬಡಾವಣೆ ವಾಸಿಯಾದ ಪರಶುರಾಮ ಅವರ ತಂದೆ ಡಿ.ಪಿ. ಗೋಪಾಲರಾವ್ ಹೆಸರಾಂತ ದೇಹದಾರ್ಢ್ಯಪಟು ಮತ್ತು ವೇಟ್ ಲಿಫ್ಟರ್ ಆಗಿದ್ದರು. ತಂದೆಯಂತೆ ಮಗನೂ ಈ ಕ್ಷೇತ್ರಕ್ಕೆ ಕಾಲಿಟ್ಟು 20ನೆಯ ವಯಸ್ಸಿನಲ್ಲೇ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ನಂತರ ರಾಷ್ಟ್ರೀಯ ಸ್ಪರ್ಧೆ ಮಂಗಳೂರು, ಬೆಂಗಳೂರು, ಪಾಟ್ನಾದಲ್ಲಿ ನಡೆದಾಗ ಸ್ಪರ್ಧಿಸಿ ಪದಕ ಸಹಿತ ಮರಳಿದ್ದರು. ಅಂತಾರಾಷ್ಟ್ರಿಯ ಮಟ್ಟಕ್ಕೂ ಆಯ್ಕೆಯಾದರೂ ಹಣಕಾಸಿನ ಅಡಚಣೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಸ್ಪರ್ಧಿಸಿರಲಿಲ್ಲ. ಆನಂತರ ಕೆಲವು ವರ್ಷ  ಕೇವಲ ಪ್ರಾಕ್ಟೀಸ್ ಮಾತ್ರ ಮಾಡುತ್ತ ಸ್ಪರ್ಧೆಯಿಂದ ದೂರವಿವುಳಿದಿದ್ದರು. ಈ ವರ್ಷ ಮತ್ತೆ ರಾಷ್ಟ್ರೀಯಮಟ್ಟಕ್ಕೇರಿದ್ದಾರೆ. ಜೈಪುರದಲ್ಲಿ ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರೀಯ ಪವರ್‌ಲಿಫ್ಟಿಂಗ್ ಬೆಂಚ್‌ಪ್ರೆಸ್ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಮೊನ್ನೆ ದಾವಣಗೆರೆಯಲ್ಲಿ ಜರುಗಿದ ರಾಜ್ಯ ಆಯ್ಕೆ ಚಾಂಪಿಯನ್‌ಶಿಪ್‌ನಲ್ಲಿ ಈ ಸಾಧನೆ ಮಾಡಿ ಮೊದಲ ಸ್ಥಾನಗಳಿಸಿದ್ದಾರೆ. ಈ ಹಿಂದೆ ಅವರು 140 ಕೆಜಿ ಭಾರವನ್ನು ಬೆಂಚ್‌ಪ್ರೆಸ್ ವಿಭಾಗದಲ್ಲಿ ಎತ್ತಿ ದಾಖಲೆ ಮಾಡಿದ್ದಾರೆ.   
ರಾಷ್ಟ್ರೀಯ ದೇಹಧಾರ್ಢ್ಯ ಮತ್ತು ವೇಟ್ ಲಿಫ್ಟರ್ ಆಗಿರುವ ಇವರು, ಕುವೆಂಪು ರಸ್ತೆಯಲ್ಲಿರುವ ಪುಲಿಕೇಶಿ ವ್ಯಾಯಾಮ ಶಾಲೆಯ ವಿದ್ಯಾರ್ಥಿ. ಇಂದಿಗೂ ತಪ್ಪದೇ ದೈನಂದಿನ ಅಭ್ಯಾಸ ಮಾಡುತ್ತಿದ್ದಾರೆ. ಕಲಿತ ಶಾಲೆಗೆ ಕೀರ್ತಿ ತರುವ ಮೂಲಕ ಅದರಲ್ಲೇ ಹಲವು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನೂ ಮಾಡುತ್ತಿದ್ದಾರೆ. ತಮ್ಮ 52ರ ಹರಯದಲ್ಲೂ ಉತ್ತಮ ಮೈಕಟ್ಟನ್ನು ಹೊಂದಿ, ಅದನ್ನು ಉಳಿಸಿಕೊಂಡಿದ್ದಾರೆ. ಮತ್ತೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಪದಗಳನ್ನು ಧರಿಸುವ ಗುರಿ ಹೊಂದಿದ್ದಾರೆ.
 ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಸರ್ವಸಿದ್ಧತೆ ನಡೆಸಿರುವ ಅವರು, ಮಾನಸಿಕ ಬಲವನ್ನು ಕಾಪಾಡಿಕೊಳ್ಳಬೇಕು. ಅತಿಕಠಿಣವಾಗಿ ತರಬೇತಿ ನಡೆಸಬೇಕು. ಸತತವಾಗಿ ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುತ್ತಿರುವವರ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಬೇಕು. ಇದು ಸುಲಭದ ಮಾತಲ್ಲ. ಆದರೂ ತನ್ನಲ್ಲಿ ಆತ್ಮವಿಶ್ವಾಸವಿರುವುದರಿಂದ ಮತ್ತೆ ಮರಳಿ ಅಡಿಯಿಟ್ಟಿದ್ದಾಗಿ ಹೇಳುತ್ತಾರೆ. ಸರಕಾರ ಮತ್ತು ಅಸೋಸಿಯೇಶನ್‌ಗಳು ಸ್ಪರ್ಧಿಗಳಿಗೆ ಹಣಕಾಸು ನೆರವು ನೀಡಬೇಕು. ಉತ್ತಮ ಸಾಧಕರನ್ನು ಗುರುತಿಸುವ ಕೆಲಸವಾಗಬೇಕು. ಅವರಿಗೆ ತಕ್ಕ ಪ್ರೋತ್ಸಾಹ, ತರಬೇತಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಆದರೆ ಕರ್ನಾಟಕದಲ್ಲಿ ಪ್ರೋತ್ಸಾಹ ಸಾರ್ವಜನಿಕರಿಂದ ಮಾತ್ರ ಇದೆ. ಹಣ ಖರ್ಚು ಮಾಡಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬೆಕು. ಆದ್ದರಿಂದ ಬಡತನದಲ್ಲಿರುವ ಸ್ಪರ್ಧಿಗಳೆಲ್ಲ ದೇಶೀಯ, ಅಂತರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾದರೂ ಹೋಗಲಾರದ ಸ್ಥಿತಿಯಲ್ಲಿದ್ದಾರೆ ಎಂದು ನುಡಿಯುತ್ತಾರೆ.
15.7.17
.............................

No comments:

Post a Comment