Thursday 25 January 2018

ಅನನ್ಯ ಸಮಾಜಸೇವಕ 
ಜಫ್ರುಲ್ಲಾ ಖಾನ್



ಸಮಾಜ ಸೇವೆ ಮಾಡುವವರು ಆತ್ಮಸಾಕ್ಷಿಗನುಗುಣವಾಗಿ ಮುನ್ನುಗ್ಗಬೇಕು, ಇನ್ನೊಬ್ಬರ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳಬಾರದು. ಆಗ ಮಾತ್ರ ಸಾಕಷ್ಟು ಬದಲಾವಣೆ ತರಲು ಸಾಧ್ಯ ಎನ್ನುವುದು ಮಾರ್ಟಿನ್ ಲೂಥರ್‌ನ ಪ್ರಸಿದ್ಧ ಉಕ್ತಿ.
  ನಿಜವಾದ ಸಮಾಜ ಸುಧಾರಕನಾದವನು ಏನನ್ನೂ ಬಯಸುವುದಿಲ್ಲ. ತಾನು ಪಡೆದುದಕ್ಕಿಂತ ಹೆಚ್ಚಿನದನ್ನು ಕೊಡುತ್ತಾನೆ, ಯಾವ ಪ್ರಚಾರ, ಪ್ರಶಸ್ತಿಯನ್ನೂ ಬಯಸಿ ಈ ಕೆಲಸಕ್ಕಿಳಿಯುವುದಿಲ್ಲ. ಇಂತಹವನನ್ನು ಹೆಸರು ಮತ್ತು ಗೌರವ ಅರಸಿ ಬರುತ್ತದೆ. ಶಿವಮೊಗ್ಗದಲ್ಲಿ ಲೆಕ್ಕ ಪರಿಶೋಧನೆ ಮತ್ತು  ತೆರಿಗೆ ಸಲಹೆಗಾರರಾಗಿರುವ ಜಫ್ರುಲ್ಲಾ ಖಾನ್ ಸದ್ದಿಲ್ಲದೆ ಸಮಾಜ ಸೇವೆ ಮಾಡಿ ಈಗ ಒಳ್ಳೆಯ ಸುದ್ದಿಯಾಗಿದ್ದಾರೆ.
ಮಾಹಿತಿ ಹಕ್ಕು ಮೂಲಕ  ದಾಖಲಾತಿಗಳನ್ನು ಕಲೆ ಹಾಕಿ,  ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದು ಅದರ ವಿರುದ್ದ ಮೇಲ್ಮನವಿ ಸಲ್ಲಿಸುವ ಕೆಲಸವನ್ನು ಮಾಡುತ್ತಿರುವ ಇವರು, ಈ ವರ್ಷದ ನ್ಯಾಶನಲ್ ಆರ್‌ಟಿಐ ಜಾಗೃತಿ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಎರಡೂವರೆ ವರ್ಷದಲ್ಲಿ ಸುಮಾರು 184 ಆರ್‌ಟಿಐ ಮಾಹಿತಿಗೆ ಅರ್ಜಿ ಹಾಕಿದ್ದಾರೆ. ಇದರಲ್ಲಿ ಕೆಲವಕ್ಕೆ ಉತ್ತರ ಸಿಕ್ಕಿಲ್ಲ. ಆದರೆ ಛಲ ಬಿಡದೆ ಹೋರಾಡುತ್ತ ಸುಮಾರು 23 ಕೇಸುಗಳನ್ನು ಹಲವರ ವಿರುದ್ಧ ದಾಖಲಿಸಿದ್ದಾರೆ. ಅವೆಲ್ಲವೂ ಈಗ ವಿಚಾರಣಾ ಹಂತದಲ್ಲಿವೆ. 
ಸರಳ ವ್ಯಕ್ತಿತ್ವದ, ಸಮಜಮುಖಿ ವ್ಯಕ್ತಿಯಾಗಿರುವ ಜಫ್ರುಲ್ಲಾ ನಗರದ ಮಾರ್ನಮಿಬೈಲ್ ವಾಸಿ. ವಿದ್ಯಾಭ್ಯಾಸದ ಕಾಲದಲ್ಲೇ ಸಮಾಜಸೇವೆಯ ಕನಸನ್ನು ಕಂಡವರು. ಎಲ್ಲರೊಂದಿಗೆ ಒಡನಾಟ, ಆತ್ಮೀಯತೆಯನ್ನು ಸಾದಿಸಿರುವ ಇವರು,. ಪ್ರಾಥಮಿಕ ಶಿಕ್ಷಣವನ್ನು ಎನ್.ಟಿ. ರಸ್ತೆಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ, ಡಿವಿಎಸ್‌ನಲ್ಲಿ ಎಸ್ಸೆಸೆಲ್ಸಿಯವರೆಗೆ ಓದಿ ಗೋವಾದ ಡೆಂಪುವಿನಲ್ಲಿರುವ ವಿವಿ ಕಾಲೇಜಿನಲ್ಲಿ  ಉನ್ನತ ಶಿಕ್ಷಣ ಪಡೆದಿದ್ದಾರೆ. ಆನಂತರ ಇಂಡಿಯನ್ ಟೆಕ್ನಿಕಲ್ ಇನ್ಸ್‌ಟಿಟ್ಯೂಶನ್‌ನಿಂದ  ಡಿಪ್ಲೋಮ ಇನ್ ಅಟೊಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದು, 2001ರಲ್ಲಿ ಸಿಎ ತೇರ್ಗಡೆಯಾಗಿ ನಗರದಲ್ಲೇ ವೃತಿ ಜೀವನ ಆರಂಭಿಸಿದ್ದಾರೆ.
ಸನ್ಮಾರ್ಗ ವೆಲ್ಫೇರ್ ಸೊಸೈಟಿ ಸ್ಥಾಪಿಸಿ ಸಾಕಷ್ಟು ಬಡವರಿಗೆ ನೆರವಾಗಿದ್ದಾರೆ. 7 ವರ್ಷದಿಂದ ಇದರ ಮೂಲಕವೇ ಸೇವೆ ಸಲ್ಲಿಸಿ ಈಗ ಅದರ ಕಾರ್ಯಾಧ್ಯಕ್ಷರಾಗಿದ್ದಾರೆ.  ಆನಂತರ ಅಲ್‌ಹಿಂದ್ ವೆಲ್ಫೇರ್ ಸೊಸೈಟಿ ಉಪಾಧ್ಯಕ್ಷರಾಗಿ ರಕ್ತದಾನ ಸಹಿತ ಹತ್ತಾರು ಮಹತ್ಕಾರ್ಯಗಳನ್ನು ಮಾಡುತ್ತ ಜನಮಾನಸದಲ್ಲಿ ನೆಲೆಯೂರಿದ್ದಾರೆ. ಮುಸ್ಲಿಂ ವೆಲ್ಫೇರ್ ಕಮಿಟಿಯ ಸಹ ಕಾರ್ಯರ್ಶಿಯಾಗಿ ಉಚಿತವಾಗಿ ಬಡ ಮುಸ್ಲಿಮರಿಗೆ ಹೆಣ ಸಾಗಿಸುವ ವಾಹನ ಕೊಡುಗೆಯಾಗಿ ನೀಡಿದ್ದಾರೆ.  ಸನ್ಮಾರ್ಗ ವೆಲ್ಫೇರ್ ಟ್ರಸ್ಟ್ ಮೂಲಕ ಬಡ ಹೆಣ್ಣು ಮಕ್ಕಳಿಗೆ ಹೊಲಿಗೆ ಯಂತ್ರ ವಿತರಣೆ, ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು, ವಿದ್ಯಾರ್ಥಿ ವೇತನ,  ಪಠ್ಯಪುಸ್ತಕ ವಿತರಣೆಯನ್ನು ಪ್ರತಿವರ್ಷ ನಡೆಸಿಕೊಂಡು ಬಂದಿದ್ದಾರೆ.
ವೃತ್ತಿಯ ಜೊತೆ ಸಮಾಜ ಸೇವೆಯನ್ನೇ ಉಸಿರನ್ನಾಗಿಸಿ ಅದಕ್ಕಾಗಿಯೇ ದುಡಿ ಹಣವನ್ನು ವಿನಿಯೋಗಿಸುತ್ತಿದ್ದಾರೆ. ತಾನು ಪಡೆದುದನ್ನು ಬಡಜನರ ಸೇವೆಗೆ ನೀಡುತ್ತಿದ್ದಾರೆ. ಇಂತಹ ಮಾನವೀಯ ಗುಣದ ಜಫ್ರುಲ್ಲಾಗೆ 2012ರಲ್ಲಿ ಭಾರತ ವಿಕಾಸ್ ರತ್ನ ಪ್ರಶಸ್ತಿಯನ್ನು ದೆಹಲಿಯ ದಿ ಇಕನಾಮಿಕ್ ಫಾರ್ ಹೆಲ್ತ್ ಎಂಡ್ ಗ್ರೌಥ್ ಸೊಸೈಟಿ ನೀಡಿ ಗೌರವಿಸಿದೆ. ಜಿಲ್ಲಾ ಟ್ಯಾಕ್ಸ್ ಬಾರ್ ಅಸೋಸಿಯೇಶನ್ ಮತ್ತು ಚೇಂಬರ್ ಆಫ್ ಕಾಮರ್ಸ್‌ನ ಸದಸ್ಯರೂ ಆಗಿರುವ ಇವರು, ತಾನು ವಿದ್ಯಾರ್ಥಿ ದಿಸೆಯಲ್ಲಿ ಕಂಡ ಕನಸನ್ನು ನನಸಾಗಿಸುತ್ತಿದ್ದಾರೆ.
ಇನ್ನೊಬ್ಬರ ಜೀವನದಲ್ಲಿ ಮೂಲಭೂತ ಬದಲಾವಣೆ ತಂದಾಗ ಸಿಗುವ ಸಂತೋಷವನ್ನು ಯಾವ ಪ್ರಶಸ್ತಿಯೂ ತಂದುಕೊಡುವುದಿಲ್ಲ. ನಮ್ಮ ಶ್ರೀಮಂತಿಕೆಗಿಂತ ಮಾನವೀಯ ನೆಲೆಯಲ್ಲಿ ಸೇವೆ ಮಾಡಬೇಕು. ಆಗ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಅವೆಲ್ಲವನ್ನೂ ಮೆಟ್ಟಿ ನಿಂತು ಮುಂದಡಿ ಇಡಬೇಕು ಎನ್ನುತ್ತಾರೆ ಜಫ್ರುಲ್ಲಾ ಖಾನ್.
25.11.17
..................................
 


  

No comments:

Post a Comment